ADVERTISEMENT

ಬೈರಗೊಂಡ್ಲು ಬಳಿ ಜಲಾಶಯ | ಬಲವಂತದ ಭೂಸ್ವಾಧೀನ ಮಾಡಲ್ಲ: ಡಿಕೆಶಿ ಸ್ಪಷ್ಟೋಕ್ತಿ

​ಪ್ರಜಾವಾಣಿ ವಾರ್ತೆ
Published 21 ಜೂನ್ 2025, 15:20 IST
Last Updated 21 ಜೂನ್ 2025, 15:20 IST
ಕೊರಟಗೆರೆ ತಾಲ್ಲೂಕಿನ ಬೈರಗೊಂಡ್ಲು ಬಳಿ ಎತ್ತಿನಹೊಳೆ ಯೋಜನೆ ಬಫರ್ ಡ್ಯಾಂ ನಿರ್ಮಿಸಲು ಉದ್ದೇಶಿಸಿರುವ ಸ್ಥಳಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್ ಭೇಟಿ ನೀಡಿ ಪರಿಶೀಲಿಸಿದರು
ಕೊರಟಗೆರೆ ತಾಲ್ಲೂಕಿನ ಬೈರಗೊಂಡ್ಲು ಬಳಿ ಎತ್ತಿನಹೊಳೆ ಯೋಜನೆ ಬಫರ್ ಡ್ಯಾಂ ನಿರ್ಮಿಸಲು ಉದ್ದೇಶಿಸಿರುವ ಸ್ಥಳಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್ ಭೇಟಿ ನೀಡಿ ಪರಿಶೀಲಿಸಿದರು   

ಕೊರಟಗೆರೆ: ‘ನಿಮ್ಮನ್ನು ಬಲವಂತವಾಗಿ ಒಕ್ಕಲೆಬ್ಬಿಸುವುದಿಲ್ಲ. ರೈತರಿಗೆ ಹೆಚ್ಚು ತೊಂದರೆಯಾಗದಂತೆ ಎತ್ತಿನಹೊಳೆ ಯೋಜನೆ ನೀರನ್ನು ಕೊಂಡೊಯ್ಯುತ್ತೇವೆ’ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭರವಸೆ ನೀಡಿದರು.

ಎತ್ತಿನಹೊಳೆ ಯೋಜನೆ ಸಂಬಂಧ 5 ಟಿಎಂಸಿ ನೀರನ್ನು ಸಂಗ್ರಹಿಸಲು ತಾಲ್ಲೂಕಿನ ಬೈರಗೊಂಡ್ಲು ಬಳಿ ಜಲಾಶಯ ನಿರ್ಮಾಣಕ್ಕೆ ಉದ್ದೇಶಿಸಲಾದ ಸ್ಥಳಕ್ಕೆ ಶನಿವಾರ ಭೇಟಿ ನೀಡಿ ಮಾತನಾಡಿದರು.

ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು ಜಿಲ್ಲೆಗಳಿಗೆ ಕುಡಿಯುವ ನೀರು ಒದಗಿಸಲು ಎತ್ತಿನಹೊಳೆ ಯೋಜನೆ ರೂಪಿಸಲಾಗಿದೆ. ಭೈರಗೊಂಡ್ಲು ಜಲಾಶಯ ಮಾಡಿದರೆ ಐದು ಟಿಎಂಸಿ ನೀರನ್ನು ಸಂಗ್ರಹಿಸಬಹುದು. ಇದರಿಂದ ಐದು ಸಾವಿರ ಎಕರೆ ಪ್ರದೇಶ ಮುಳುಗಡೆಯಾಗಲಿದೆ ಎಂದರು.

ADVERTISEMENT

ಹಾಸನ ಮಾರ್ಗವಾಗಿ ಪೈಪ್‌ಲೈನ್ ಕೆಲಸ ಪೂರ್ಣಗೊಂಡು ಇಲ್ಲಿಯವರೆಗೂ ಬಂದಿದೆ. ಕೋಲಾರ ಹಾಗೂ ಚಿಕ್ಕಬಳ್ಳಾಪುರದಲ್ಲೂ ಪೈಪ್‌ಲೈನ್ ಕೆಲಸ ಆರಂಭಿಸಲಾಗಿದೆ. ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಈ ಮೊದಲು ದೊಡ್ಡಬಳ್ಳಾಪುರದಲ್ಲಿ ಎಕರೆಗೆ ₹32 ಲಕ್ಷ, ಕೊರಟಗೆರೆ ಭಾಗದಲ್ಲಿ ₹20 ಲಕ್ಷ ನಿಗದಿಯಾಗಿತ್ತು. ಪರಿಹಾರ ಸಮಾನವಾಗಿ ನೀಡಬೇಕು ಎಂದು ಬೇಡಿಕೆ ಕೇಳಿಬಂದಿದ್ದು, ಈ ಕುರಿತು ತೀರ್ಮಾನ ಕೈಗೊಳ್ಳುವ ಜವಾಬ್ದಾರಿಯನ್ನು ಸಚಿವ ಜಿ.ಪರಮೇಶ್ವರ ಅವರಿಗೆ ನೀಡಲಾಗಿದೆ ಎಂದು ಹೇಳಿದರು.

ಈ ಭಾಗದ ಜನ ಜಲಾಶಯವನ್ನು ಬೇರೆಡೆ ಮಾಡಿ ಎಂದು ಪಟ್ಟು ಹಿಡಿದಿರುವುದಾಗಿ ಮಾಹಿತಿ ಬಂದಿದೆ. ಹಾಗಾಗಿ ಪರಿಸ್ಥಿತಿ ನೋಡಿ ಪರಿಶೀಲನೆ ಮಾಡಲು ಬಂದಿದ್ದೇನೆ. ಎಲ್ಲರ ಅಭಿಪ್ರಾಯ, ಸಲಹೆ ಸ್ವೀಕರಿಸಲಾಗುವುದು ಎಂದರು.

ಗ್ರಾಮಸ್ಥರು ಪ್ರತಿಕ್ರಿಯಿಸಿ, ಈ ಭಾಗದಲ್ಲಿರುವ ರೈತರು ಬಡವರು. ಎಲ್ಲರೂ ಒಂದು ಅಥವಾ ಎರಡು ಎಕರೆ ಭೂಮಿ ತುಂಡು ಭೂಮಿ ಹೊಂದಿದ್ದಾರೆ. ಹೀಗಾಗಿ ಇಲ್ಲಿ ಜಲಾಶಯ ನಿರ್ಮಿಸಬೇಡಿ. ಇನ್ನು ಮುಂದೆ ಕಣಿವೆ ಪ್ರದೇಶದಲ್ಲಿ ಎರಡು ಅಣೆಕಟ್ಟು ನಿರ್ಮಿಸಲು ಅವಕಾಶವಿದೆ. ಈ ಹಿಂದೆ ದೇವದುರ್ಗದಲ್ಲಿ ಅಣೆಕಟ್ಟು ನಿರ್ಮಿಸಲು ಉದ್ದೇಶಿಸಲಾಗಿತ್ತು. ಜಲಾಶಯವನ್ನು ಬೇರೆಡೆ ನಿರ್ಮಿಸಿ ಎಂದು ಮನವಿ ಸಲ್ಲಿಸಿದರು.

ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್. ಮುನಿಯಪ್ಪ, ಜಲಸಂಪನ್ಮೂಲ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ ಗುಪ್ತಾ, ಡಿಸಿಎಂ ತಾಂತ್ರಿಕ ಸಲಹೆಗಾರ ಜೈಪ್ರಕಾಶ್, ವಿಶ್ವೇಶ್ವರಯ್ಯ ಜಲ ನಿಗಮ ಎಂ.ಡಿ. ಸಣ್ಣಚಿತ್ತಯ್ಯ ಜೊತೆಗಿದ್ದರು.

ಕೊರಟಗೆರೆ ತಾಲ್ಲೂಕಿನ ಬೈರಗೊಂಡ್ಲು ಬಳಿ ಎತ್ತಿನಹೊಳೆ ಯೋಜನೆ ಬಫರ್ ಡ್ಯಾಂ ನಿರ್ಮಿಸಲು ಉದ್ದೇಶಿಸಿರುವ ಸ್ಥಳಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್ ಭೇಟಿ ನೀಡಿ ಪರಿಶೀಲಿಸಿದರು
ಕೊರಟಗೆರೆ ರೈತರು ಜಲಾಶಯಕ್ಕೆ ಸೂಚಿಸಿರುವ ಪರ್ಯಾಯ ಜಾಗವನ್ನು ಪರಿಶೀಲಿಸಲಾಗುವುದು. ಸಚಿವ ಸಂಪುಟ ಸಭೆಯಲ್ಲಿ ವರದಿ ಪ್ರಸ್ತಾಪಿಸಿ ತೀರ್ಮಾನ ಕೈಗೊಳ್ಳಲಾವುದು. ಆದಷ್ಟು ನಷ್ಟ ಕಡಿಮೆ ಮಾಡಿ ಯೋಜನೆ ಜಾರಿ ಮಾಡುತ್ತೇವೆ
ಡಿ.ಕೆ. ಶಿವಕುಮಾರ್ ಉಪಮುಖ್ಯಮಂತ್ರಿ
ಪುಕ್ಕಟೆಯಾಗಿ ಕಿತ್ತುಕೊಳ್ಳಲ್ಲ
ಈ ಯೋಜನೆಗಾಗಿ ₹17 ಸಾವಿರ ಕೋಟಿ ಬಂಡವಾಳ ಹಾಕಿದ್ದೇವೆ. ಬಹುತೇಕ ಕಡೆಗಳಲ್ಲಿ ಕಾಮಗಾರಿ ಮುಗಿದಿವೆ. ಹೀಗಾಗಿ ಈ ಯೋಜನೆ ಜಾರಿ ಮಾಡಲೇಬೇಕು. ನೀವು ಬೈದರೂ ಸರಿ ಸಲಹೆ ನೀಡಿದರೂ ಸರಿ. ನಿಮ್ಮ ಮಾತನ್ನು ಆಲಿಸಿ ಸಲಹೆ ಸ್ವೀಕರಿಸಲು ಬಂದಿದ್ದೇನೆ. ಇಲ್ಲಿ ಯಾರಿಂದಲೂ ಜಮೀನನ್ನು ಪುಕ್ಕಟೆಯಾಗಿ ಕಿತ್ತುಕೊಳ್ಳಲು ಬಂದಿಲ್ಲ. ಬಲವಂತವಾಗಿ ಒಕ್ಕಲು ಎಬ್ಬಿಸುವುದಿಲ್ಲ ಎಂದು ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.