ADVERTISEMENT

ಬೇರೆ ಸಮುದಾಯದ ಮೀಸಲಾತಿ ಕಿತ್ತುಕೊಳ್ಳುತ್ತಿಲ್ಲ

ಬಸವ ಜಯಮೃತ್ಯುಂಜಯ ಸ್ವಾಮೀಜಿ‌ ಅಭಿಪ್ರಾಯ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2021, 2:10 IST
Last Updated 9 ಫೆಬ್ರುವರಿ 2021, 2:10 IST
ಮೀಸಲಾತಿಗಾಗಿ ಪಾದಯಾತ್ರೆಯಲ್ಲಿ ಲಿಂಗಾಯಿತ ಪಂಚಮಸಾಲಿ ಕೂಡಲಸಂಗಮ ಪೀಠದ ಬಸವ ಮೃತ್ಯುಂಜಯ ಸ್ವಾಮೀಜಿ
ಮೀಸಲಾತಿಗಾಗಿ ಪಾದಯಾತ್ರೆಯಲ್ಲಿ ಲಿಂಗಾಯಿತ ಪಂಚಮಸಾಲಿ ಕೂಡಲಸಂಗಮ ಪೀಠದ ಬಸವ ಮೃತ್ಯುಂಜಯ ಸ್ವಾಮೀಜಿ   

ಶಿರಾ: ‘ಪಂಚಮಸಾಲಿ ಸಮಾಜ ಪ್ರವರ್ಗ 2 ‘ಎ’ ಗೆ ಬರುವ ಮೂಲಕ ಬೇರೆ ಸಮುದಾಯಗಳ ಮೀಸಲಾತಿಯನ್ನು ಕಿತ್ತುಕೊಳ್ಳುವುದಿಲ್ಲ. ಪ್ರಸ್ತುತ 2 ‘ಎ’ಗೆ ಇರುವ ಮೀಸಲಾತಿಯನ್ನು ‌ಶೇ 15 ರಿಂದ 30ಕ್ಕೆ ಹೆಚ್ಚಿಸುವಂತೆ ಎಲ್ಲರೂ ಜೊತೆಗೂಡಿ ಸರ್ಕಾರದ ಮೇಲೆ ‌ಒತ್ತಡ ಹಾಕೋಣ’ ಎಂದು ಬಸವ ಜಯಮೃತ್ಯುಂಜಯ ಸ್ವಾಮೀಜಿ‌ ಹೇಳಿದರು.

ರಾಷ್ಟ್ರೀಯ ಹೆದ್ದಾರಿ 48ರ ಕಡವಗೆರೆ ಗೇಟ್‌ನಲ್ಲಿ ಭಕ್ತರ ಸಭೆ ನಡೆಸಿ ಮಾತನಾಡಿದರು.

ಧರ್ಮಸ್ಥಳದ ರಾಮ ಕ್ಷೇತ್ರ ಪೀಠದ ಸ್ವಾಮೀಜಿ ಅವರು ಪಂಚಮಸಾಲಿಗಳನ್ನು 2 ‘ಎ’ ಗೆ ಸೇರಿಸಲು ವಿರೋಧ ವ್ಯಕ್ತಪಡಿಸಿದ್ದಾರೆ. ರಾಜಕಾರಣಿಗಳ ಮಾತು ಕೇಳಿ ತಪ್ಪು ಸಂದೇಶ ನೀಡಬೇಡಿ. ನಾವು ಶ್ರಮಜೀವಿಗಳು. ಎಲ್ಲರೂ ಒಗ್ಗೂಡಿ ಮೀಸಲಾತಿ ಪ್ರಮಾಣ ಹೆಚ್ಚಿಸಿಕೊಳ್ಳುವ ಕೆಲಸ ಮಾಡೋಣ. ನಾವು ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿಗಳಲ್ಲಿ ಸ್ಥಾನಮಾನ ಪಡೆಯಲು ಮೀಸಲಾತಿ ಕೇಳುತ್ತಿಲ್ಲ. ನಮ್ಮ ಮಕ್ಕಳಿಗೆ ಶಿಕ್ಷಣ ಹಾಗೂ ಉದ್ಯೋಗಕ್ಕಾಗಿ ಮಾತ್ರ ಮೀಸಲಾತಿ ಕೇಳಲಾಗುತ್ತಿದೆ ಎಂದರು.

ADVERTISEMENT

ಕೆಲವು ಮಠಾಧೀಶರು ಮೀಸಲಾತಿ ನೀಡುವುದಕ್ಕೆ ಅಡ್ಡಿಪಡಿಸುತ್ತಿದ್ದಾರೆ. ಆದರೆ ಅವರು ಕುಳಿತ ಮಠಗಳನ್ನು ಕಟ್ಟಿದವರು ಪಂಚಮಸಾಲಿ ಸಮಾಜದವರು. ರಾಜ್ಯದಲ್ಲಿರುವ ಮಠಗಳ ಅಭಿವೃದ್ಧಿಯಲ್ಲಿ ಪಂಚಮಸಾಲಿ ಸಮುದಾಯದ ಕೊಡುಗೆ ಅಪಾರವಾಗಿದೆ. ಸಾಧ್ಯವಾದರೆ ಪತ್ರಿಕೆಗಳ ಮೂಲಕ ಪಂಚಮಸಾಲಿಗಳಿಗೆ ಮೀಸಲಾತಿ ನೀಡುವಂತೆ ಮನವಿ ಮಾಡಿ. ಪಂಚಮಸಾಲಿಗಳನ್ನು ತಪ್ಪಾಗಿ ತಿಳಿದುಕೊಳ್ಳಬೇಡಿ. ಎಲ್ಲಾ ಮಠಗಳಲ್ಲಿ ನಮ್ಮ ಭಕ್ತರಿದ್ದಾರೆ ಇದನ್ನು ಆರ್ಥ ಮಾಡಿಕೊಳ್ಳಬೇಕು ಎಂದರು.

ತುಮಕೂರಿನ ಹೈವೇ ಗ್ರಾಂಡ್ ಹೋಟಲ್‌ನಲ್ಲಿ ಫೆ 10ರಂದು ನಡೆಯುವ ಸಭೆ ನಮ್ಮ ಅಳಿವು ಉಳಿವಿನ ನಿರ್ಣಾಯಕ ಸಭೆಯಾಗಿದೆ. ಸಮುದಾಯದ ಹಾಲಿ, ಮಾಜಿ ಶಾಸಕರು, ಸಚಿವರು, ಸಂಸದರು, ಜಿ.ಪಂ ಸದಸ್ಯರು ಸೇರಿದಂತೆ ಸಮುದಾಯದ ಪ್ರಮುಖ ಮುಖಂಡರು ಭಾಗವಹಿಸುವಂತೆ ಮನವಿ ಮಾಡಿದರು.

ಹರಿಹರ ಪೀಠದ ವಚನಾನಂದ ಸ್ವಾಮೀಜಿ, ಪಂಚಮಸಾಲಿ ಸಮಾಜದ ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ, ಪಂಚಮಸಾಲಿ ಸಮಾಜದ ಯುವಘಟಕದ ರಾಜ್ಯಾಧ್ಯಕ್ಷ ಮಂಜುನಾಥ್ ನವಲಗುಂದ, ಪ್ರಧಾನ ಕಾರ್ಯದರ್ಶಿ ಕಿಚಿಡಿ ಕೋಟ್ರೇಶ್, ಶರಣಪ್ಪ ಬಸಪ್ಪ, ಎನ್.ಟಿ.ವೀರೇಶ್, ನಾಗರಾಜ್ ಕೊಟಗಿ, ಶಿವು ಗುಡ್ಡಾಪುರ್, ಶಿವಕುಮಾರ್ ಬೆಳಗೆರೆ, ರಾಜು ಬಗಳಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.