ADVERTISEMENT

ಶೇಂಗಾ ಖರೀದಿ ಕೇಂದ್ರಕ್ಕೆ ಒಬ್ಬ ರೈತರೂ ಬಂದಿಲ್ಲ!

ಡಿ.21ಕ್ಕೆ ಬೆಂಬಲ ಬೆಲೆಯಡಿ ಶೇಂಗಾ ಖರೀದಿಗೆ ಕೊನೆ ದಿನ; ಜಿಲ್ಲೆಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಇಂತಹ ಪ್ರಸಂಗ

ಡಿ.ಎಂ.ಕುರ್ಕೆ ಪ್ರಶಾಂತ
Published 19 ಡಿಸೆಂಬರ್ 2020, 3:45 IST
Last Updated 19 ಡಿಸೆಂಬರ್ 2020, 3:45 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ತುಮಕೂರು: ಜಿಲ್ಲೆಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಒಬ್ಬರೇ ಒಬ್ಬ ಶೇಂಗಾ ಬೆಳೆಗಾರರೂ ಸಹ ಬೆಂಬಲ ಬೆಲೆ ಯೋಜನೆಯಡಿ ತೆರೆದಿರುವ ಶೇಂಗಾ ಖರೀದಿ ಕೇಂದ್ರಗಳಿಗೆ ಶೇಂಗಾ ಮಾರಾಟ ಮಾಡಿಲ್ಲ!

ತಡವಾಗಿ ಖರೀದಿ ಕೇಂದ್ರ ತೆರೆಯಲಾಗಿದೆ. ರೈತರು ಶೇಂಗಾ ಮಾರಾಟ ಮಾಡಿದ ನಂತರ ಕೇಂದ್ರ ತೆರೆಯಲಾಗಿದೆ ಎಂಬುದು ಪ್ರಮುಖ ಆರೋಪವಾಗಿದೆ.

ಡಿ. 3ರಿಂದ 21ರ ವರೆಗೆ ಬೆಂಬಲ ಬೆಲೆ ಯೋಜನೆಯಡಿ ಖರೀದಿಗೆ ಅವಕಾಶ ಇದೆ. ಪಾವಗಡ ಎಪಿಎಂಸಿ, ಪಳವಳ್ಳಿ, ಕೋಟಗುಡ್ಡ, ಮಧುಗಿರಿ ಎಪಿಎಂಸಿ, ಹೊಸಕೆರೆ, ಕೋಟಿಗಾರ‍್ಗಹಳ್ಳಿ, ಶಿರಾ ಎಪಿಎಂಸಿ, ಹುಲಿಕುಂಟೆಯಲ್ಲಿ ಖರೀದಿ ಕೇಂದ್ರ ತೆರೆಯಲಾಗಿದೆ. ಕ್ವಿಂಟಲ್‌ಗೆ ₹ 5,275 ನಿಗದಿಗೊಳಿಸಲಾಗಿದೆ. ಖರೀದಿ ಅವಧಿ ಮುಗಿಯುತ್ತ ಬಂದರೂ ಒಬ್ಬ ರೈತರೂ ಕೇಂದ್ರಗಳಿಗೆ ಮಾರಾಟ ಮಾಡಲು ಹೆಸರು ನೋಂದಾಯಿಸಿಕೊಂಡಿಲ್ಲ.

ADVERTISEMENT

ಅಧಿಕಾರಿಗಳ ಮಾಹಿತಿ ಪ್ರಕಾರ, ಇದೇ ಮೊದಲ ಬಾರಿಗೆ ಜಿಲ್ಲೆಯಲ್ಲಿ ಇಲ್ಲಿಯವರೆಗೂ ಒಬ್ಬರೇ ಒಬ್ಬ ರೈತರು ಹೆಸರು ನೋಂದಾಯಿಸಿಕೊಂಡಿಲ್ಲ.

ಮಾರುಕಟ್ಟೆಯಲ್ಲಿ ರೈತರು ಕ್ವಿಂಟಲ್ ಶೇಂಗಾವನ್ನು ಸರಾಸರಿ ₹ 6 ಸಾವಿರಕ್ಕೆ ಮಾರಾಟ ಮಾಡುತ್ತಿದ್ದಾರೆ. ಸರ್ಕಾರ ನಿಗದಿಗೊಳಿಸಿರುವ ಮಾನದಂಡಗಳ ಪ್ರಕಾರ ಶೇಂಗಾ ಇಳುವರಿಯೂ ಇಲ್ಲ. ಈ ಕಾರಣದಿಂದ ಕೇಂದ್ರಗಳಿಗೆ ರೈತರು ಮಾರಾಟ ಮಾಡಲು ಮನಸ್ಸು ಮಾಡುತ್ತಿಲ್ಲ.

‘ಬಹಳಷ್ಟು ರೈತರು ಈಗಾಗಲೇ ವರ್ತಕರಿಗೆ ಶೇಂಗಾ ಮಾರಾಟ ಮಾಡಿದ್ದಾರೆ. ಇಷ್ಟು ತಡವಾಗಿ ಖರೀದಿ ಕೇಂದ್ರಗಳನ್ನು ತೆರೆದರೆ ಹೇಗೆ’ ಎಂದು ಶೇಂಗಾ ಬೆಳೆಗಾರರು ಸಹ ಅಸಮಾಧಾನ ವ್ಯಕ್ತಪಡಿಸುವರು.

ಪ್ರಸಕ್ತ ವರ್ಷ ಜಿಲ್ಲೆಯಲ್ಲಿ ಶೇಂಗಾ ಬೆಳೆ ಹೆಚ್ಚಿತು. ಆದರೆ ಇಳುವರಿ ಉತ್ತಮವಾಗಿಲ್ಲ. ಕಟಾವಿನ ಹಂತದಲ್ಲಿ ಮಳೆ ಸುರಿದ ಪರಿಣಾಮ ಕಾಯಿ ನೀರಿಡಿಯಿತು. ಉತ್ತಮ ಇಳುವರಿ ಸಾಧ್ಯವಾಗಲಿಲ್ಲ. ಸರ್ಕಾರವು ಬೆಂಬಲ ಬೆಲೆಯಡಿ ನಿಗದಿಗೊಳಿಸಿರುವ ಮಾನದಂಡದ ಪ್ರಕಾರ ಶೇಂಗಾ ಇಳುವರಿ ಇಲ್ಲ. ಈ ಕಾರಣದಿಂದ ಖರೀದಿ ಕೇಂದ್ರಗಳು ನಮ್ಮ ಶೇಂಗಾ ನಿರಾಕರಿಸುತ್ತವೆ ಎನ್ನುವ ಕಾರಣದಿಂದಲೂ ರೈತರು ಇತ್ತ ಮುಖ ಮಾಡುತ್ತಿಲ್ಲ.

ನಿಯಮಗಳು ಬದಲಾದರೆ ಒಳಿತು: ‘ಕೇಂದ್ರ ಸರ್ಕಾರವು ಬೆಂಬಲ ಬೆಲೆಯ ನಿಯಮಗಳು ಇನ್ನೂ ಹಳೇ ಕಾಲದಲ್ಲಿಯೇ ಇವೆ. ಮಾನದಂಡಗಳು ಬದಲಾವಣೆ ಆಗಬೇಕು. ಪ್ರತಿ ವರ್ಷದ ಹಮಾವಾನ ವೈಪರೀತ್ಯಗಳನ್ನು ನೋಡಿಕೊಂಡು ಬೆಂಬಲ ಬೆಲೆ ಮತ್ತು ಉತ್ಪನ್ನದ ಖರೀದಿ ಗುಣಮಟ್ಟ ನಿರ್ಧರಿಸಬೇಕು. ಇಲ್ಲದಿದ್ದರೆ ಬೆಂಬಲ ಬೆಲೆ ಯೋಜನೆ ಎನ್ನುವುದೇ ಅವೈಜ್ಞಾನಿಕ ಎನ್ನುವಂತೆ ಆಗುತ್ತದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

‘ಶಿರಾ ತಾಲ್ಲೂಕಿನಲ್ಲಿ ಶೇಂಗಾವನ್ನು ಪ್ರಮುಖವಾಗಿ ಬೆಳೆಯಲಾಗುತ್ತದೆ. ಇಲ್ಲಿನ ಎಪಿಎಂಸಿ ಬಳಿ ನಾವು ಎರಡು ತಿಂಗಳ ಮುಂಚೆಯೇ ₹ 5,275 ಬೆಂಬಲ ಬೆಲೆಯಡಿ ಖರೀದಿ ಮಾಡುತ್ತೇವೆ ಎಂದು ಬ್ಯಾನರ್‌ಗಳನ್ನು ಅಳವಡಿಸಿದ್ದೆವು. ಇದನ್ನು ನೋಡಿದ ವರ್ತಕರು ಬೆಲೆ ಇಳಿಕೆಗೆ ಮುಂದಾಗಲಿಲ್ಲ. ಇದು ಬೆಲೆ ಸ್ಥಿರತೆಗೆ ಕಾರಣವಾಗಿದ್ದು ರೈತರಿಗೆ ಅನುಕೂಲವಾಯಿತು’ ಎಂದು ಮಾಹಿತಿ ನೀಡಿದರು.

‘ಆಂಧ್ರಪ್ರದೇಶದ ಅನಂತರಪುರ ಮಾರುಕಟ್ಟೆಯಲ್ಲಿ ಕ್ವಿಂಟಲ್ ಶೇಂಗಾ ₹ 6870ಕ್ಕೆ ಮಾರಾಟವಾಗುತ್ತಿದೆ. ತುಮಕೂರು ಎಪಿಎಂಸಿಯಲ್ಲಿ ₹ 6 ಸಾವಿರ ಇದೆ. ಹೀಗಿದ್ದಾಗ ಇಲ್ಲಿಗೆ ಯಾವ ರೈತರು ತಾನೇ ಸರಕು ತರುವರು’ ಎಂದು ಹೇಳುವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.