ADVERTISEMENT

104 ಮಂದಿ ಪರೀಕ್ಷೆಯಲ್ಲಿ ಪತ್ತೆಯಾಗದ ಕೊರೊನಾ ವೈರಸ್‌: ತುಮಕೂರಿಗರ ನಿಟ್ಟುಸಿರು

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2020, 13:54 IST
Last Updated 31 ಮಾರ್ಚ್ 2020, 13:54 IST
ಡಾ.ಕೆ.ರಾಕೇಶ್‍ಕುಮಾರ್
ಡಾ.ಕೆ.ರಾಕೇಶ್‍ಕುಮಾರ್   

ತುಮಕೂರು: ಕೊರೊನಾ ಸೋಂಕಿತರ ಪರೀಕ್ಷೆಯ ವರದಿ ಸದ್ಯದ ಮಟ್ಟಿಗೆ ತುಮಕೂರು ಜಿಲ್ಲೆಯ ಜನರು ನಿಟ್ಟುಸಿರು ಬಿಡುವಂತೆ ಮಾಡಿದೆ. 104 ಮಂದಿಯ ಗಂಟಲು ದ್ರವ, ರಕ್ತ ಮತ್ತು ಕಫದ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಬೆಂಗಳೂರಿನ ರಾಷ್ಟ್ರೀಯ ವೈರಾಣು ಸಂಶೋಧನಾ ಸಂಸ್ಥೆಯು ಈ ಯಾರಲ್ಲಿಯೂ ಸೋಂಕು ಇಲ್ಲ ಎಂದು ದೃಢೀಕರಿಸಿದೆ.

ಸೋಮವಾರ 25 ಮಂದಿಯ ಮಾದರಿ ಪರೀಕ್ಷೆಯ ವರದಿ ಬಾಕಿ ಇತ್ತು. ‘ಯಾರಿಗೂ ಸೋಂಕು ಇಲ್ಲ’ ಎಂದು ಮಂಗಳವಾರ ಬಂದ ವರದಿಯಲ್ಲಿ ಉಲ್ಲೇಖವಾಗಿದೆ. 334 ಮಂದಿ ಮನೆಯಲ್ಲಿ ಹಾಗೂ 72 ಮಂದಿ ಜಿಲ್ಲಾ ಆಸ್ಪತ್ರೆಯ ಐಸೊಲೇಷನ್ ವಾರ್ಡ್‌ನಲ್ಲಿ ನಿಗಾದಲ್ಲಿ ಇದ್ದಾರೆ.

‘ತಿಪಟೂರು ತಾಲ್ಲೂಕಿನ 11 ಸೇರಿದಂತೆ ಜಿಲ್ಲೆಯ 16 ಮಂದಿಯ ಮಾದರಿಗಳನ್ನು ಮಂಗಳವಾರ ಪರೀಕ್ಷೆಗೆ ಕಳುಹಿಸಲಾಗಿತ್ತು. ಈ ವರದಿ ಸಹ ಬಂದಿದೆ. ಜಿಲ್ಲೆಯಲ್ಲಿ ಯಾರಿಗೂ ಸೋಂಕು ಇಲ್ಲ’ ಎಂದು ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್ ಕುಮಾರ್ ತಿಳಿಸಿದ್ದಾರೆ.

ADVERTISEMENT

‘ಐಸೊಲೇಷನ್ ಅವಧಿ ಪೂರ್ಣವಾದ ನಂತರ ಮನೆಗಳಿಗೆ ಕಳುಹಿಸಲಾಗುವುದು. ಈಗಾಗಲೇ ಸೋಂಕು ತಗುಲಿರುವ 13 ವರ್ಷದ ಹುಡುಗನಿಗೆ ಬೆಂಗಳೂರಿನ ಇಂದಿರಾಗಾಂಧಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು ಆರೋಗ್ಯ ಸ್ಥಿರವಾಗಿದೆ. ಆತನ ತಾಯಿಯಲ್ಲಿಯೂ ಸೋಂಕು ಕಂಡು ಬಂದಿಲ್ಲ’ ಎಂದಿದ್ದಾರೆ.

‘ಕಾರ್ಮಿಕ ಇಲಾಖೆಯಿಂದ ಜಿಲ್ಲೆಯ 20 ಕಡೆಗಳಲ್ಲಿ ವಲಸೆ ಕಾರ್ಮಿಕರಿಗೆ ಊಟ ಮತ್ತು ವಸತಿ ಸೌಲಭ್ಯ ಕಲ್ಪಿಸಲಾಗಿದೆ. 11 ಕಡೆಗಳಲ್ಲಿ ಬಡವರು, ನಿರ್ಗತಿಕರು, ಅನಾಥರಿಗೆ ವಸತಿ ಮತ್ತು ಊಟದ ವ್ಯವಸ್ಥೆ ಒದಗಿಸಲಾಗಿದೆ’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.