ADVERTISEMENT

ಹಳೆಯದರಲ್ಲಿ ಇದೆ ಹೊಸದಾರಿ: ಮಾಧುಸ್ವಾಮಿ

ನೊಳಂಬರ ಶಾಸನಗಳು ಗ್ರಂಥ ಬಿಡುಗಡೆ ಮತ್ತು ಸಂಶೋಧನಾ ನಿಧಿ ಸಂಗ್ರಹಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2019, 20:07 IST
Last Updated 29 ಸೆಪ್ಟೆಂಬರ್ 2019, 20:07 IST

ತುಮಕೂರು: ಹಳೆಯದನ್ನು ಅರಸಿಕೊಂಡು ಹೋದರೆ, ಮುಂದೆ ಸಾಗಲುಅದರಲ್ಲಿ ಹೊಸ ದಾರಿ ಸಿಗುತ್ತದೆ ಎಂದುಕಾನೂನು, ಸಂಸದೀಯ ಹಾಗೂ ಸಣ್ಣ ನೀರಾವರಿ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು.

ಗುರು ಸಿದ್ಧರಾಮೇಶ್ವರ ಸೇನೆ, ಜಿ.ಎಸ್.ಎಸ್.ಟ್ರಸ್ಟ್ ಆಯೋಜಿಸಿದ್ದ ‘ನೊಳಂಬರ ಶಾಸನಗಳು ಗ್ರಂಥ ಬಿಡುಗಡೆ ಮತ್ತು ನೊಳಂಬ ಸಂಸ್ಕೃತಿ ಸಂಶೋಧನಾ ನಿಧಿ ಸಂಗ್ರಹ’ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಸಮುದಾಯ ರಾಜಕೀಯವಾಗಿ ಬೆಳೆಯಲು ಅವಕಾಶ ಇಲ್ಲದಿದ್ದಾಗ, ಶೈಕ್ಷಣಿಕವಾಗಿ ಮುಂದೆ ಬರಬೇಕು. ಅದಕ್ಕೆ ಬೇಕಾದ ಸಂಘಟನೆ ರೂಪಿಸಬೇಕು. ವಿದ್ಯಾರ್ಥಿ ನಿಲಯಗಳನ್ನು ಕಟ್ಟಬೇಕು ಎಂದರು.

ADVERTISEMENT

ಕೇವಲ ಇಬ್ಬರು ಅಕಾಡೆಮಿಯನ್‌ ಸೇರಿ ಪಾಕಿಸ್ತಾನ ಕಟ್ಟಿದರು. ನಾವು ಸಹ ಸಂಘಟಿತರಾಗಿ ಸಮಾಜದ ಜನರ ಕಷ್ಟಕ್ಕೆ ಸ್ಪಂದಿಸಬೇಕು. ಉದ್ಯಮಿಗಳಾಗಿ ಆರ್ಥಿಕವಾಗಿ ಬೆಳೆಯಬೇಕು. ಸಮುದಾಯದವರಿಗೆ ಉದ್ಯೋಗ ನೀಡಬೇಕು ಎಂದು ಸಲಹೆ ನೀಡಿದರು.

ಸಮುದಾಯದಲ್ಲಿ ಎಲ್ಲರು ಒಟ್ಟಿಗೆ ಬೆಳೆಯಲು ಆಗದು. ಮೊದಲು ನಾಯಕನನ್ನು ಬೆಳೆಸಬೇಕು. ಬೆಳೆಯುತ್ತಿರುವವರ ಕಾಲು ಎಳೆಯಬಾರದು. ಆ ನಾಯಕನ ಪ್ರಭಾವ ಕಡಿಮೆ ಆದ ಬಳಿಕ, ಮತ್ತೊಬ್ಬರು ಬೆಳೆಯಬೇಕು ಎಂದು ಕಿವಿಮಾತು ಹೇಳಿದರು.

ನೊಳಂಬ ಸಮುದಾಯ ಈಗ ಹೆಚ್ಚಾಗಿ ಕೃಷಿ ಅವಲಂಬಿಸಿದೆ. ಇವರು ಮೋಸ ಮಾಡುವವರಲ್ಲ. ಹಾಗಾಗಿ ಹೆಚ್ಚು ಮುಂದುವರಿದಿಲ್ಲ. ನಂಬಿಕಸ್ತರಾದ ಇವರು ಶೈಕ್ಷಣಿವಾಗಿ ಬೆಳೆಯಲು ನಾವೆಲ್ಲ ಸಹಕರಿಸಬೇಕಿದೆ ಎಂದು ತಿಳಿಸಿದರು.

ಸಿದ್ಧಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ, ರಾಜ್ಯದ ಹಲವಾರು ಪ್ರದೇಶಗಳಿಗೆ ನೊಳಂಬ ರಾಜಮನೆತನ ಅಪಾರ ಕೊಡುಗೆ ನೀಡಿದೆ. ಇಂದು ಬಿಡುಗಡೆಯಾದ ಕೃತಿಯಿಂದ ಅಧ್ಯಯನಕಾರರಿಗೆ ಆಕಾರ ಗ್ರಂಥ ಸಿಕ್ಕಂತಾಗಿದೆ. ಈ ರೀತಿಯ ಕೃತಿಗಳು ಮುಂದಿನ ಪೀಳಿಗೆಗೆ ಸಂಪತ್ತು ಇದ್ದಂತೆ ಎಂದು ಹೇಳಿದರು.

ರಾಜರು ಮಾಡಿದ ಉತ್ತಮ ಕಾರ್ಯಗಳಿಂದಾಗಿ ನಾವೂ ಇಂದಿಗೂ ಸ್ಮರಿಸಿಕೊಳ್ಳುತ್ತಿದ್ದೇವೆ. ಇಂತಹ ಸಂಶೋಧನಾತ್ಮಕ ಲೇಖನ, ಶಾಸನಗಳ ಸಂಗ್ರಹದ ಮೂಲಕ ರಾಜ್ಯದಲ್ಲಿ ನಿತ್ಯೋತ್ಸವ ನಡೆಯುತ್ತಿದೆ ಎಂದರು.

ನೊಳಂಬ ಲಿಂಗಾಯತ ಸಂಘದ ಅಧ್ಯಕ್ಷ ಎಸ್.ಎಂ.ನಾಗರಾಜು, ನೊಳಂಬರ ಕುರಿತು ಕ್ಷೇತ್ರಕಾರ್ಯ ನಡೆಯಬೇಕಿದೆ. ಅದರಿಂದ ಮುಂದಿನ ಪ್ರಕಟಣೆಗಳು ಮತ್ತಷ್ಟು ಮಾಹಿತಿಪೂರ್ಣ ಆಗಿರಲಿವೆ ಎಂದು ಹೇಳಿದರು.

ಗ್ರಂಥದ ಸಂಪಾದಕ ಡಿ.ವಿ.ಪರಮಶಿವಮೂರ್ತಿ, ನೊಳಂಬರು ಹೊಸ ಕಲಾಶೈಲಿ ಪರಿಚಯಿಸಿದರು. ಹೊಯ್ಸಳ ಶೈಲಿಗೆ ಅದು ಸ್ಫೂರ್ತಿ ಆಯಿತು. ನೊಳಂಬರು ಕನ್ನಡ ಭಾಷೆ, ಸಂಸ್ಕೃತಿ, ಕಲೆಗೆ ಹೆಚ್ಚಿನ ಕೊಡುಗೆ ನೀಡಿದ್ದಾರೆ ಎಂದು ತಿಳಿಸಿದರು.

*

ಪುಸ್ತಕದ ಕುರಿತು

ಪುಸ್ತಕ: ನೊಳಂಬರ ಶಾಸನಗಳು

ಬೆಲೆ: ₹ 800

ಪುಟಗಳು: 590

ಪ್ರಕಾಶಕರು: ಗುರು ಸಿದ್ಧರಾಮೇಶ್ವರ ಸೇನೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.