ADVERTISEMENT

ನೂಡಲ್ಸ್; ಬೆಂಕಿ ಹೊತ್ತಿಕೊಂಡು ಬಾಲಕ ಸಾವು

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2019, 16:57 IST
Last Updated 14 ಅಕ್ಟೋಬರ್ 2019, 16:57 IST

ತುಮಕೂರು: ನೂಡಲ್ಸ್ ಮಾಡಲು ಗ್ಯಾಸ್ ಹಚ್ಚಿದ ಬಾಲಕನಿಗೆ ಬೆಂಕಿ ಹೊತ್ತಿಕೊಂಡು ಮೃತಪಟ್ಟ ಘಟನೆ ನಗರದಲ್ಲಿ ನಡೆದಿದೆ.

ನೊಯಲ್ (7) ಮೃತಪಟ್ಟ ಬಾಲಕನಾಗಿದ್ದು, ನಗರದ ಕ್ರಿಶ್ಚಿಯನ್ ಸ್ಟ್ರೀಟ್‌ನ ವಾಸಿಗಳಾದ ಡ್ಯಾನಿಯಲ್ ದಯಾನ್ ಮತ್ತು ಸುಷ್ಮಾ ಅವರ 2ನೇ ಮಗನಾಗಿದ್ದಾನೆ.

ಅ.5ರಂದು ಮಧ್ಯಾಹ್ನ ಘಟನೆ ನಡೆದಿದ್ದು, ತೀವ್ರವಾಗಿ ಗಾಯಗೊಂಡಿದ್ದ ಬಾಲಕ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ. ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿಗೆ ಅ.11ರಂದು ಕರೆದುಕೊಂಡು ಹೋಗುವಾಗ ಮಾರ್ಗದಲ್ಲಿ ಮೃತಪಟ್ಟಿದ್ದಾನೆ.

ADVERTISEMENT

ಅ.5ರಂದು ಮಧ್ಯಾಹ್ನ ನೊಯಲ್ ನೂಡಲ್ಸ್ ಮಾಡಿಕೊಡು ಎಂದು ಕೇಳಿದ. ನಲ್ಲಿ ನೀರು ತುಂಬುತ್ತಿದ್ದರಿಂದ ಸ್ವಲ್ಪ ತಡೆದುಕೊ ನೀರು ತುಂಬಿ ಮಾಡಿಕೊಡುತ್ತೇನೆ ಎಂದು ಹೇಳಿದ್ದೆ. ಈ ವೇಳೆ ಮನೆಯ ಒಳಗಡೆ ಹೋಗಿದ್ದ. ಒಳಗಡೆ ಇದ್ದಾನೆ ಎಂದು ನಾನು ನೀರು ತುಂಬುವಲ್ಲಿ ಮಗ್ನಳಾಗಿದ್ದೆ ಎಂದುಬಾಲಕನ ತಾಯಿ ಸುಷ್ಮಾ ಘಟನೆ ಕುರಿತು ’ಪ್ರಜಾವಾಣಿ’ಗೆ ವಿವರಿಸಿದರು.

ಈ ವೇಳೆ ನೊಯಲ್ ತಾನೇ ನೂಡಲ್ಸ್ ಮಾಡಿಕೊಳ್ಳಲು ಲೈಟರ್‌ನಿಂದ ಗ್ಯಾಸ್ ಹಚ್ಚಿದಾಗ ಧಿಗ್ಗನೆ ಏಕಕಾಲಕ್ಕೆ ಬೆಂಕಿ ಹೊತ್ತಿಕೊಂಡು ಆತನ ಕೈಗಳಿಗೆ, ಸ್ವಲ್ಪ ಮುಖಕ್ಕೆ ಗಾಯಗಳಾಗಿದ್ದವು. ಬಳಿಕ ಜಿಲ್ಲಾ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದ್ದೆವು ಎಂದು ವಿವರಿಸಿದರು.

ಹಿರಿಯ ಮಗ ಗ್ಯಾಸ್ ಹಚ್ಚಿ ಟೀ, ಕಾಫಿ ಮಾಡುತ್ತಿರುತ್ತಾನೆ. ಅವನಂತೆಯೇ ತಾನೂ ಗ್ಯಾಸ್ ಹಚ್ಚಿ ನೂಡಲ್ಸ್ ಮಾಡಿಕೊಳ್ಳಲು ಹೋಗಿ ಈ ಅನಾಹುತವಾಗಿದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.