ADVERTISEMENT

ನೀಲಗೊಂಡನಹಳ್ಳಿಗೆ ಅಧಿಕಾರಿ ಭೇಟಿ: ಅಗತ್ಯ ಸೌಲಭ್ಯದ ಭರವಸೆ

​ಪ್ರಜಾವಾಣಿ ವಾರ್ತೆ
Published 11 ಮೇ 2024, 6:14 IST
Last Updated 11 ಮೇ 2024, 6:14 IST
ಕೊರಟಗೆರೆ ತಾಲ್ಲೂಕಿನ ನೀಲಗೊಂಡನಹಳ್ಳಿ ಬಳಿ ಅಲೆಮಾರಿ ಸಮುದಾಯದ ಜನರು ವಾಸಿಸುತ್ತಿದ್ದ ಸ್ಥಳಕ್ಕೆ ಶುಕ್ರವಾರ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಎಸ್‌.ಕೃಷ್ಣಪ್ಪ ಭೇಟಿ ನೀಡಿ ಜನರ ಸಮಸ್ಯೆ ಆಲಿಸಿದರು
ಕೊರಟಗೆರೆ ತಾಲ್ಲೂಕಿನ ನೀಲಗೊಂಡನಹಳ್ಳಿ ಬಳಿ ಅಲೆಮಾರಿ ಸಮುದಾಯದ ಜನರು ವಾಸಿಸುತ್ತಿದ್ದ ಸ್ಥಳಕ್ಕೆ ಶುಕ್ರವಾರ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಎಸ್‌.ಕೃಷ್ಣಪ್ಪ ಭೇಟಿ ನೀಡಿ ಜನರ ಸಮಸ್ಯೆ ಆಲಿಸಿದರು   

ಕೊರಟಗೆರೆ: ತಾಲ್ಲೂಕಿನ ನೀಲಗೊಂಡನಹಳ್ಳಿ ಬಳಿ ಅಲೆಮಾರಿ ಸಮುದಾಯದ ಜನರು ವಾಸಿಸುತ್ತಿದ್ದ ಸ್ಥಳಕ್ಕೆ ಶುಕ್ರವಾರ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಎಸ್‌.ಕೃಷ್ಣಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಗತ್ಯ ಸೌಲಭ್ಯ ಕಲ್ಪಿಸುವ ಭರವಸೆ ನೀಡಿದರು.

ನೀಲಗೊಂಡನಹಳ್ಳಿ ಹತ್ತಿರ ಸುಮಾರು 90 ವರ್ಷಗಳಿಂದ ಅಲೆಮಾರಿ ಜನಾಂಗದ 20 ಕುಟುಂಬಗಳು ಗುಡಿಸಲು ಹಾಕಿಕೊಂಡು ವಾಸಿಸುತ್ತಿವೆ. ಇಲ್ಲಿನ ನಿವಾಸಿಗಳಿಗೆ ಇದುವರೆಗೆ ಮೂಲಭೂತ ಸೌಲಭ್ಯ ಕಲ್ಪಿಸಲು ಸಾಧ್ಯವಾಗಿಲ್ಲ. ಈ ಬಗ್ಗೆ ‘ಪ್ರಜಾವಾಣಿ’ಯಲ್ಲಿ ಮೇ 5ರಂದು ‘ಬುಲ್ಡೋಜರ್‌ ಹತ್ತಿಸ್ತಾರೆ.. ಗುಡಿಸಲಿಗೆ ಬೆಂಕಿ ಹಚ್ತಾರೆ...’ ಎಂಬ ಶೀರ್ಷಿಕೆಯಡಿ ಅಲ್ಲಿನ ಸಮಸ್ಯೆಗಳ ಬಗ್ಗೆ ವಿಸ್ತೃತವಾದ ವರದಿ ಪ್ರಕಟವಾಗಿತ್ತು. ನಂತರ ಎಚ್ಚೆತ್ತುಕೊಂಡ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದರು.

‘ಲೋಕಸಭಾ ಚುನಾವಣೆಯ ಮತದಾನ ಬಹಿಷ್ಕರಿಸಿದ ಸಮಯದಲ್ಲಿ ತಹಶೀಲ್ದಾರ್‌ ಮಂಜುನಾಥ್‌ ಸ್ಥಳಕ್ಕೆ ಧಾವಿಸಿ ಮುಂದಿನ ದಿನಗಳಲ್ಲಿ ನಿವೇಶನ ಸೇರಿದಂತೆ ಶಾಶ್ವತ ಮನೆ ನಿರ್ಮಿಸಿಕೊಡುವ ಭರವಸೆ ನೀಡಿದ್ದರು. ನಂತರ ಎಲ್ಲರೂ ಮತಗಟ್ಟೆಗೆ ತೆರಳಿದ್ದರು. ಚುನಾವಣೆಯ ನಂತರ ಯಾರೊಬ್ಬರೂ ನಮ್ಮ ಕಷ್ಟ ಕೇಳುತ್ತಿಲ್ಲ’ ಎಂದು ನೀಲಗೊಂಡನಹಳ್ಳಿ ನಿವಾಸಿಗಳು ಅಳಲು ತೋಡಿಕೊಂಡರು.

ADVERTISEMENT

‘ಸ್ನಾನ ಹಾಗೂ ಬಹಿರ್ದೆಸೆಗೆ ತುಂಬಾ ಸಮಸ್ಯೆಯಾಗುತ್ತಿದೆ. ರಾತ್ರಿ ವೇಳೆ ಜನ ಮಲಗಿದ ನಂತರ ನಾವು ಇದೇ ಗುಡ್ಡಗಾಡಿನ ಕಲ್ಲಿನ ಮರೆಯಲ್ಲಿ ಸ್ನಾನ ಮಾಡುವ ಪರಿಸ್ಥಿತಿ ಇದೆ. ನಾವು ಮನುಷ್ಯರಲ್ಲವೇ, ನಮಗೆ ಮೂಲಭೂತ ಸೌಲಭ್ಯ ಕಲ್ಪಿಸಬೇಕಲ್ಲವೇ? ಎಂದು ಮಹಿಳೆಯರು, ವಿದ್ಯಾರ್ಥಿನಿಯರು ಪ್ರಶ್ನಿಸಿದರು.

‘ಗುಡ್ಡಗಾಡು ಪ್ರದೇಶದಿಂದ ನೀಲಗೊಂಡನಹಳ್ಳಿಗೆ ಒಂದು ಕಿಲೊ ಮೀಟರ್‌ ದೂರ ಆಗಲಿದೆ. ಅಲ್ಲಿಂದ ಬಿಂದಿಗೆಗಳಲ್ಲಿ ನೀರು ತರುತ್ತಿದ್ದೇವೆ. ಕುಡಿಯುವ ನೀರಿಗಾಗಿ ಪರಿತಪಿಸುವಂತಾಗಿದೆ. ಮಹಿಳೆಯರ ಸಮಸ್ಯೆ ಈ ಸಮಾಜಕ್ಕೆ ಯಾಕೆ ಅರ್ಥವಾಗುತ್ತಿಲ್ಲ. ಜಿಲ್ಲಾ ಉಸ್ತುವಾರಿ ಸಚಿವ ಜಿ.ಪರಮೇಶ್ವರ ಇದೇ ಕ್ಷೇತ್ರದ ಶಾಸಕರಾಗಿದ್ದರೂ ಸ್ಪಂದಿಸುತ್ತಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕೆಲವೇ ದಿನಗಳಲ್ಲಿ ನೀರು ಬೆಳಕಿನ ವ್ಯವಸ್ಥೆ ಮಾಡಲಾಗುವುದು. ಇಲಾಖೆಯ ವಸತಿ ನಿಲಯದಲ್ಲಿ ಮಕ್ಕಳ ಪ್ರವೇಶಕ್ಕೆ ಅವಕಾಶ ಕಲ್ಪಿಸಿದ್ದು ಎಲ್ಲರು ಇದರ ಪ್ರಯೋಜನ ಪಡೆಯಬೇಕು
ಎಸ್‌.ಕೃಷ್ಣಪ್ಪ ಜಂಟಿ ನಿರ್ದೇಶಕ ಸಮಾಜ ಕಲ್ಯಾಣ ಇಲಾಖೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.