ತುಮಕೂರು: ಜಿಲ್ಲೆಯ ಗುಬ್ಬಿ, ಮಧುಗಿರಿ, ಶಿರಾ, ತುರುವೇಕೆರೆ ತಾಲ್ಲೂಕು ವ್ಯಾಪ್ತಿಯಲ್ಲಿ ಹಕ್ಕು ಪತ್ರ ವಿತರಣೆಗೆ ಸಂಬಂಧಿಸಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಅರ್ಜಿಗಳು ಬಾಕಿಯಿದ್ದು, ಒಂದು ವಾರದಲ್ಲಿ ವಿಲೇವಾರಿ ಮಾಡುವಂತೆ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅಧಿಕಾರಿಗಳಿಗೆ ನಿರ್ದೇಶಿಸಿದ್ದಾರೆ.
ಕಂದಾಯ ಇಲಾಖೆ ಪ್ರಗತಿ ಪರಿಶೀಲನೆಯನ್ನು ಸೋಮವಾರ ನಡೆಸಿದರು. ಹಕ್ಕು ಪತ್ರ ವಿತರಣೆಯ ಪ್ರಗತಿ ವರದಿಯನ್ನು ಪ್ರತಿ ದಿನವೂ ಸಲ್ಲಿಸುವಂತೆ ಉಪವಿಭಾಗಾಧಿಕಾರಿಗಳಿಗೆ ಸೂಚಿಸಿದರು.
ರೈತರಿಗೆ ಮಂಜೂರಾದ ಜಮೀನಿನ ದುರಸ್ತಿ ಪ್ರಕ್ರಿಯೆ ತ್ವರಿತಗೊಳಿಸಬೇಕು. ಸರ್ವೇ ಇಲಾಖೆಯಿಂದ ಅಳತೆ ಮಾಡಿ ತಹಶೀಲ್ದಾರ್ ಅನುಮೋದನೆಗೆ ಸಲ್ಲಿಸಿರುವ ಪ್ರಕರಣಗಳಿಗೆ ಅರಣ್ಯ ಇಲಾಖೆಯಿಂದ ಒಪ್ಪಿಗೆ ಪಡೆದು ಮೂರು ದಿನದಲ್ಲಿ ಪಹಣಿ ಪತ್ರ ಮುದ್ರಿಸಬೇಕು ಎಂದರು.
ರೈತರ ಪಹಣಿಗಳಿಗೆ ಆಧಾರ್ ಜೋಡಣೆಯನ್ನು ಆದ್ಯತೆ ಮೇಲೆ ಮಾಡಬೇಕು. ತಾಲ್ಲೂಕು ಕಚೇರಿಗಳಲ್ಲಿ ನಡೆಯುತ್ತಿರುವ ಅಭಿಲೇಖಾಲಯದ ದಾಖಲೆಗಳ ಸ್ಕ್ಯಾನಿಂಗ್, ಡಿಜಿಟಲೀಕರಣವನ್ನು ಚುರುಕುಗೊಳಿಸಬೇಕು. ಪ್ರತಿ ತಾಲ್ಲೂಕಿನಲ್ಲಿ ಪ್ರತಿ ದಿನ 10 ಸಾವಿರ ಪುಟಗಳನ್ನು ಸ್ಕ್ಯಾನಿಂಗ್ ಮಾಡುವ ಮೂಲಕ ನಿಗದಿತ ಸಮಯದಲ್ಲಿ ಗುರಿ ತಲುಪಬೇಕು ಎಂದು ಹೇಳಿದರು.
ಪರಿಭಾವಿತ ಅರಣ್ಯ ಪ್ರದೇಶವೆಂದು ಗುರುತಿಸಲಾದ ಜಮೀನುಗಳನ್ನು ಕಂದಾಯ, ಅರಣ್ಯ, ಸರ್ವೇ ಇಲಾಖೆಗಳು ಜಂಟಿಯಾಗಿ ಪರಿಶೀಲನೆ ನಡೆಸಬೇಕು. ಅರಣ್ಯ ಪ್ರದೇಶಕ್ಕೆ ಒಳಪಡುವ ಹಾಗೂ ಒಳಪಡದಿರುವ ಜಮೀನುಗಳನ್ನು ಸೂಕ್ತ ರೀತಿಯಲ್ಲಿ ಪರಿಶೀಲಿಸಿ ಜಿಪಿಎಸ್ ಆಧಾರಿತ ಛಾಯಾಚಿತ್ರಗಳ ನಕ್ಷೆ ತಯಾರಿಸಬೇಕು ಎಂದು ತಿಳಿಸಿದರು.
ತಾಂಡಾ, ಹಟ್ಟಿಗಳಲ್ಲಿ ವಾಸಿಸುತ್ತಿರುವವರಿಗೆ ಹಕ್ಕು ಪತ್ರ ಸೇರಿದಂತೆ ಅಗತ್ಯ ಕಂದಾಯ ದಾಖಲೆಗಳನ್ನು ತ್ವರಿತವಾಗಿ ನೀಡಬೇಕು. ಗ್ರಾಮ ಆಡಳಿತಾಧಿಕಾರಿ, ಸರ್ವೇಯರ್‌ಗಳು ಸ್ಥಳಕ್ಕೆ ಭೇಟಿ ನೀಡಿ ಆದ್ಯತೆ ಮೇಲೆ ಹಕ್ಕು ಪತ್ರ ನೀಡಬೇಕು ಎಂದರು.
ಹೆಚ್ಚುವರಿ ಜಿಲ್ಲಾಧಿಕಾರಿ ಎನ್.ತಿಪ್ಪೇಸ್ವಾಮಿ, ಉಪವಿಭಾಗಾಧಿಕಾರಿ ಗೌರವ್ ಕುಮಾರ್ ಶೆಟ್ಟಿ, ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಾಹಕ ಎಂಜಿನಿಯರ್ ಹರೀಶ್, ಭೂದಾಖಲೆಗಳ ಇಲಾಖೆ ಉಪನಿರ್ದೇಶಕ ನಿರಂಜನ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.