ADVERTISEMENT

ಆನ್‌ಲೈನ್ ಬೆಟ್ಟಿಂಗ್: ನಾಲ್ಕು ಜನ ಬಂಧನ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2020, 15:41 IST
Last Updated 15 ಫೆಬ್ರುವರಿ 2020, 15:41 IST
ಆನ್‌ಲೈನ್ ಮೂಲಕ ಕುದುರೆ ರೇಸ್ ಬೆಟ್ಟಿಂಗ್ ನಡೆಸುತ್ತಿದ್ದ ನಾಲ್ಕು ಜನರನ್ನು ಬಂಧಿಸಿರುವ ಪೊಲೀಸರು.
ಆನ್‌ಲೈನ್ ಮೂಲಕ ಕುದುರೆ ರೇಸ್ ಬೆಟ್ಟಿಂಗ್ ನಡೆಸುತ್ತಿದ್ದ ನಾಲ್ಕು ಜನರನ್ನು ಬಂಧಿಸಿರುವ ಪೊಲೀಸರು.   

ತುಮಕೂರು: ಆನ್‌ಲೈನ್ ಮೂಲಕ ಕುದುರೆ ರೇಸ್ ಬೆಟ್ಟಿಂಗ್ ನಡೆಸುತ್ತಿದ್ದ ನಾಲ್ಕು ಜನರನ್ನು ಸಿ.ಇ.ಎನ್‌ ಠಾಣೆ ಪೊಲೀಸರು ಬಂಧಿಸಿ ₹ 11,400 ಹಾಗೂ 4 ಮೊಬೈಲ್‌ ವಶಕ್ಕೆ ಪಡೆದಿದ್ದಾರೆ.

ಕ್ಯಾತ್ಸಂದ್ರದ ತರುಣ್ (20), ರೇವಂತ್ (21), ಸಂಜಯ್ (19) ಹಾಗೂ ಕೆ.ಆರ್.ಚರಣ್ (21) ಬಂಧಿತರು. ತುಮಕೂರು ನಗರ ವ್ಯಾಪ್ತಿಯ ಸಾರ್ವಜನಿಕರಿಂದ ಮೊಬೈಲ್ ಮುಖಾಂತರ ಸ್ಪೆಕ್ಟಿಕುಲರ್ ಎಂಬ ಮೊಬೈಲ್‌ ಆ್ಯಪ್‌ನಲ್ಲಿ ಕುದುರೆ ರೇಸ್ ಆಟಗಳಲ್ಲಿ ಹಣವನ್ನು ಪಣವಾಗಿ ಕಟ್ಟಿಸಿಕೊಳ್ಳುತ್ತಿದ್ದರು. ಈ ಮೂಲಕ ಹಲವು ಸಾರ್ವಜನಿಕರಿಗೆ ವಂಚಿಸಿದ್ದರು.

ಜಾಲ ಮತ್ತು ಆರೋಪಿಗಳನ್ನು ಪತ್ತೆ ಹಚ್ಚಲು ಸಿ.ಇ.ಎನ್. ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ಎಂ.ವಿ.ಶೇಷಾದ್ರಿ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು. ಈ ತಂಡವು ಶುಕ್ರವಾರ (ಫೆ.14) ಕ್ಯಾತ್ಸಂದ್ರ ಬಳಿಯ ಶಿವರಾಮಕಾರಂತ ನಗರದ ಶ್ರೀರಾಜ್‌ ಚಿತ್ರಮಂದಿರದ ಬಳಿ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದೆ.

ADVERTISEMENT

ಚರಣ್ ಹೆಸರಿನಲ್ಲಿ ಖಾತೆ

ಆರೋಪಿಗಳು ತುಮಕೂರು ನಗರದ ಆಕ್ಸಿಸ್ ಬ್ಯಾಂಕ್‌ನಲ್ಲಿ ಚರಣ್ ಎಂಬಾತನ ಹೆಸರಿನಲ್ಲಿ ಖಾತೆ ತೆರೆದು ಅನ್‌ಲೈನ್‌ ಮೂಲಕ ಬೆಟ್ಟಿಂಗ್ ಹಣವನ್ನು ಈ ಖಾತೆಗೆ ಜಮೆ ಮಾಡುತ್ತಿದ್ದರು. ಅಲ್ಲದೆ, ಈ ಹಿಂದೆ ಕ್ರಿಕೆಟ್‌ ಬೆಟ್ಟಿಂಗ್‌ ಆರೋಪಿಗಳನ್ನು ದಸ್ತಗಿರಿ ಮಾಡಿದ ಸಂದರ್ಭದಲ್ಲಿ ಆರೋಪಿಗಳು ಬ್ಯಾಂಕ್‌ನಲ್ಲಿರುವ ಹಣವನ್ನು ಖಾಲಿ ಮಾಡಿ, ಕೈ ಬರವಣಿಗೆಯಲ್ಲಿ ಕುದುರೆ ರೇಸ್‌ ಚೀಟಿಗಳನ್ನು ಬರೆದುಕೊಳ್ಳುತ್ತಿದ್ದರು.

ಪ್ರಕರಣದಲ್ಲಿ ತುಮಕೂರಿನ ರಾಜೇಶ್, ದಿಲೀಪ, ಹಾಗೂ ಯಲ್ಲಾಪುರದ ಗಿರೀಶ, ಹುಲಿಯೂರುದುರ್ಗದ ದಯಾನಂದ ಹಾಗೂ ಶಿರಾದ ಹರಿ ಎಂಬುವವರು ಪ್ರಮುಖರಾಗಿದ್ದಾರೆ. ಅವರ ಸೂಚನೆ ಮೇರೆಗೆ ಈ ದಂಧೆ ನಡೆಸುತ್ತಿರುವುದಾಗಿ ಆರೋಪಿಗಳ ವಿಚಾರಣೆ ವೇಳೆ ತಿಳಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.