ತುಮಕೂರು: ಬೆಂಗಳೂರು–ತುಮಕೂರು ಮೆಟ್ರೊ ಯೋಜನೆಗೆ ವಿರೋಧ ವ್ಯಕ್ತಪಡಿಸುತ್ತಿರುವ ಸಂಸದರ ಜತೆಗೆ ಚರ್ಚಿಸಲಾಗುವುದು. ಬೆಂಗಳೂರು ಈಗಾಗಲೇ ತುಂಬಾ ಬೆಳೆದಿದೆ. ಮತ್ತಷ್ಟು ಬೆಳೆದು ಅಸಹ್ಯಕರವಾದ ವ್ಯವಸ್ಥೆ ನಿರ್ಮಾಣ ಆಗುವುದು ಬೇಡ ಎಂದು ಕೇಂದ್ರ ಜಲ ಶಕ್ತಿ, ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಹೇಳಿದರು.
ನಗರದಲ್ಲಿ ಭಾನುವಾರ ಸುದ್ದಿಗಾರರ ಜತೆ ಮಾತನಾಡಿ, ಸಂಸದರಾದ ಪಿ.ಸಿ.ಮೋಹನ್, ತೇಜಸ್ವಿ ಸೂರ್ಯ ಮೆಟ್ರೊ ಕುರಿತು ಅವರ ಭಾವನೆ ವ್ಯಕ್ತಪಡಿಸಿದ್ದಾರೆ. ರಾಜಧಾನಿಗೆ ಹತ್ತಿರದಲ್ಲಿರುವ ತುಮಕೂರಿನಲ್ಲಿ ಎಲ್ಲ ರೀತಿಯ ಸೌಲಭ್ಯಗಳಿವೆ. ಜಿಲ್ಲೆಗೆ ಮೆಟ್ರೊ ಯೋಜನೆಯ ಅವಶ್ಯಕತೆಯೂ ಇದೆ. ಎಲ್ಲರು ವಾಸ್ತವಾಂಶಕ್ಕೆ ಆದ್ಯತೆ ನೀಡಬೇಕು. ಎಲ್ಲ ವಿಚಾರಗಳ ಕುರಿತು ಸಂಸದರ ಜತೆಗೆ ಚರ್ಚಿಸಲಾಗುವುದು ಎಂದರು.
ರಾಜ್ಯದಲ್ಲಿ ಜೆ.ಎಚ್.ಪಾಟೀಲರ ಕಾಲದಲ್ಲಿ ಮೆಟ್ರೊ ಯೋಜನೆ ಅನುಷ್ಠಾನಗೊಳಿಸಲಾಯಿತು. ಆಗ ನಾನು ನಗರಾಭಿವೃದ್ಧಿ ಮಂತ್ರಿಯಾಗಿದ್ದೆ. ಈಗ ತುಮಕೂರು ಲೋಕಸಭಾ ಕ್ಷೇತ್ರದ ಜನರು ನನ್ನನ್ನು ಆಯ್ಕೆ ಮಾಡಿದ್ದಾರೆ. ನಗರಕ್ಕೆ ಮೆಟ್ರೊ ಯೋಜನೆ ವಿಸ್ತರಿಸುವ ಕುರಿತು ಕೇಂದ್ರ ಸರ್ಕಾರದ ಒಪ್ಪಿಗೆ ಪಡೆಯಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.