ADVERTISEMENT

ದಿನಕ್ಕೆ 5 ಪರೀಕ್ಷೆ: ವಿದ್ಯಾರ್ಥಿಗಳ ಆಕ್ಷೇಪ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2025, 14:18 IST
Last Updated 5 ಫೆಬ್ರುವರಿ 2025, 14:18 IST

ಪ್ರಜಾವಾಣಿ ವಾರ್ತೆ

ಪಾವಗಡ: ಕಳೆದ ಹಲವು ದಿನಗಳಿಂದ ನಡೆಯುತ್ತಿರುವ ಪದವಿ ಪರೀಕ್ಷಗಳ ವ್ಯವಸ್ಥೆ ಬಗ್ಗೆ ವಿದ್ಯಾರ್ಥಿಗಳು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ನಿತ್ಯ ಐದು ಹಂತದಲ್ಲಿ ಪರೀಕ್ಷೆ ನಡೆಸಲಾಗುತ್ತಿದೆ. ಇದರಿಂದ ವಿದ್ಯಾರ್ಥಿಗಳು ಯಾವ ಪರೀಕ್ಷೆ ಬರೆಯಬೇಕು, ಯಾವುದನ್ನು ಬಿಡಬೇಕು ಎಂಬ ಗೊಂದಲದಲ್ಲಿದ್ದಾರೆ.

ADVERTISEMENT

ತುಮಕೂರು ವಿಶ್ವವಿದ್ಯಾಲಯ ತರಾತುರಿಯಲ್ಲಿ ಪರೀಕ್ಷೆ ಮುಗಿಸುವ ಉದ್ದೇಶದಿಂದ ಎನ್‌ಇಪಿ, ಪರಿಷ್ಕೃತ ಎನ್‌ಇಪಿ, ಸಿಬಿಸಿಎಸ್ ಪರೀಕ್ಷಗಳನ್ನು ಏಕಕಾಲಕ್ಕೆ ನಡೆಸುತ್ತಿದೆ. ಇದರಿಂದ ಬೆಳಿಗ್ಗೆ 9.30ಕ್ಕೆ ಆರಂಭವಾಗುವ ಪರೀಕ್ಷೆ ಸಂಜೆ 5.30ಕ್ಕೆ ಮುಕ್ತಾಯವಾಗುತ್ತದೆ.

ಬೆಳಿಗ್ಗೆ 9.30ರಿಂದ 11.30ರವರೆಗೆ ಎನ್‌ಇಪಿ ಪರೀಕ್ಷೆ, 10ರಿಂದ 1ರ ವರೆಗೆ ಪರಿಷ್ಕೃತ ಎನ್‌ಇಪಿ, ಸಿಬಿಸಿಎಸ್ ಪರೀಕ್ಷೆ, 12.30 ರಿಂದ 2.30ರ ವರೆಗೆ ಮತ್ತೆ ಎನ್‌ಇಪಿ ಪರೀಕ್ಷೆ, 2ರಿಂದ 5ರ ವರೆಗೆ ಪರಿಷ್ಕೃತ ಎನ್‌ಇಪಿ, ಸಿಬಿಸಿಎಸ್ ಪರೀಕ್ಷೆ, 3.30ರಿಂದ 5.30ರ ವರೆಗೆ ಎನ್‌ಇಪಿ ಪರೀಕ್ಷೆ ನಡೆಸಲಾಗುತ್ತಿದೆ.

ಹೀಗಾಗಿ ಒಂದೇ ದಿನದಲ್ಲಿ ಇಷ್ಟು ಪರೀಕ್ಷೆಗಳನ್ನು ನಡೆಸುತ್ತಿರುವುದರಿಂದ ಬಾಕಿ ಉಳಿಸಿಕೊಂಡಿರುವ ವಿಷಯಗಳನ್ನು ಬರೆಯಲು ಸಾಧ್ಯವಾಗುತ್ತಿಲ್ಲ. ಕನಿಷ್ಟ ಬಾಕಿ ವಿಷಯಗಳನ್ನು ಓದಲು ಇರಲಿ ಒಂದು ಪರೀಕ್ಷೆಗೂ ಮತ್ತೊಂದು ಪರೀಕ್ಷೆ ನಡುವೆ ಅಂತರವೂ ಇಲ್ಲ ಇಂತಹ ಪರೀಕ್ಷಾ ವ್ಯವಸ್ಥೆಯಿಂದ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿದೆ ಎಂದು ಮಕ್ಕಳು ದೂರಿದ್ದಾರೆ.

ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿರುವ ಕಾಲೇಜುಗಳಲ್ಲಿ ಒಂದೇ ಡೆಸ್ಕ್‌ನಲ್ಲಿ 3 ಮಂದಿ ಕೂಡಿಸಿ ಪರೀಕ್ಷೆ ಬರೆಸಲಾಗುತ್ತಿದೆ. ಇದರಿಂದ ಪರೀಕ್ಷಾ ಪಾವಿತ್ರ್ಯತೆ ಹಾಳಾಗುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿವೆ.

ಒಂದು ಪರೀಕ್ಷೆ ಮುಗಿಯುವ ಮುನ್ನವೆ ಮತ್ತೊಂದು ಪರೀಕ್ಷೆ ಆರಂಭಿಸಲು ಬೆಲ್ ಮಾಡುವುದರಿಂದ ಯಾವ ಬೆಲ್ ಏನಕ್ಕೆ ಮಾಡಲಾಗುತ್ತಿದೆ. ಪರೀಕ್ಷೆ ಅವಧಿ ಮುಕ್ತಾಯವಾಗಿದೆಯೇ ಎಂಬ ಗೊಂದಲದಿಂದ ಸಾಕಷ್ಟು ವಿದ್ಯಾರ್ಥಿಗಳು ಪರೀಕ್ಷಾ ಕೊಠಡಿಯಿಂದ ಎದ್ದು ಹೊರ ಹೋಗುತ್ತಿದ್ದಾರೆ. ಇಷ್ಟೆಲ್ಲ ಗೊಂದಲಗಳ ನಡುವೆ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಕಷ್ಟಪಡಬೇಕಿದೆ ಎಂದು ದೂರಿದ್ದಾರೆ.

ವಿಶ್ವವಿದ್ಯಾಲಯದ ಅಧಿಕಾರಿಗಳು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ವೈಜ್ಞಾನಿಕವಾಗಿ ಪರೀಕ್ಷೆ ನಡೆಸಬೇಕು. ವಿದ್ಯಾರ್ಥಿಗಳ ಗೊಂದಲ ಬಗೆಹರಿಸಬೇಕು ಎಂದು ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.