ಪಾವಗಡ: ಪುರಸಭೆ ಅಧಿಕಾರಿಗಳು, ಸಿಬ್ಬಂದಿ ಸಮರ್ಪಕವಾಗಿ ಕಾರ್ಯನಿರ್ವಹಿಸಬೇಕು ಎಂದು ಪುರಸಭೆ ಅಧ್ಯಕ್ಷ ರಾಜೇಶ್ ತಿಳಿಸಿದರು.
ಪಟ್ಟಣದಲ್ಲಿ ಬುಧವಾರ ನಡೆದ ಪುರಸಭೆ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ಕಂದಾಯ ವಸೂಲಿ, ಸ್ವಚ್ಛತೆ, ಕುಡಿಯುವ ನೀರಿನ ಪೂರೈಕೆ ವಿಚಾರದಲ್ಲಿ ಸಿಬ್ಬಂದಿ, ಅಧಿಕಾರಿಗಳು ಸಮರ್ಪಕವಾಗಿ ಕಾರ್ಯನಿರ್ವಹಿಸಬೇಕು. ಪಟ್ಟಣದ ಎಲ್ಲ ಬಡಾವಣೆಗಳ ಮೂಲ ಸವಲತ್ತುಗಳ ವಿಚಾರಕ್ಕೆ ಆದ್ಯತೆ ನೀಡಬೇಕು ಎಂದರು.
ಅಧಿಕಾರಿಗಳು ಸರಿಯಾದ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿಲ್ಲ. ಕಂದಾಯ ವಸೂಲಿ ಮಾಡುತ್ತಿಲ್ಲ, ಇದರಿಂದಾಗಿ ಲಕ್ಷಾಂತರ ರೂಪಾಯಿ ಕಂದಾಯ ಬಾಕಿ ಇದೆ. ಪುರಸಭೆ ಆದಾಯ ಕಡಿಮೆಯಾಗುತ್ತಿದೆ. ಸಮರ್ಪಕವಾಗಿ ಕೆಲಸ ಮಾಡದಿದ್ದಲ್ಲಿ ಸೂಕ್ತ ಕ್ರಮ ಕೈಗೊಳ್ಳಲು ಶಿಫಾರಸು ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ವಾಣಿಜ್ಯ ಮಳಿಗೆಗಳ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಇದರಿಂದ ಪುರಸಭೆಗೆ ಹೆಚ್ಚುವರಿ ಆದಾಯ ಬಂದಿದೆ. ಈ ಆದಾಯದಿಂದ ಪುರಸಭಾ ವ್ಯಾಪ್ತಿಯಲ್ಲಿ ಹಲವು ಅಬಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಬಹುದು ಎಂದರು.
ವಾಣಿಜ್ಯ ಮಳಿಗೆಗಳಿಗೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಹೋಗಿರುವ ಅಂಗಡಿ ಮಾಲೀಕರಿಗೆ ಪುರಸಭೆಯಿಂದ ಯಾವುದೇ ಸೌಲಭ್ಯಗಳನ್ನು ನೀಡಬಾರದು ಎಂದು ಸದಸ್ಯರು ಒತ್ತಾಯಿಸಿದರು.
ಚಳ್ಳಕೆರೆ ವೃತ್ತಕ್ಕೆ ಪುನೀತ್ ರಾಜಕುಮಾರ್ ವೃತ್ತ ಎಂದು ಹೆಸರಿಡಲು ಮಾಡಲು ತೀರ್ಮಾನಿಸಲಾಯಿತು.
ಉಪಾಧ್ಯಕ್ಷೆ ಗೀತಾ ಹನುಮಂತರಾಯಪ್ಪ, ಮುಖ್ಯಾಧಿಕಾರಿ ಜಾಫರ್ ಶರೀಫ್, ಸದಸ್ಯ ಸುದೇಶ್ ಬಾಬು, ವೇಲುರಾಜು,ರವಿ, ವೆಂಕಟರಮಣಪ್ಪ, ರಾಮಾಂಜಿನಪ್ಪ ವಿಜಯ್ ಕುಮಾರ್, ಮೊಹಮದ್ ಇಮ್ರಾನ್, ಗೊರ್ತಿನಾಗರಾಜ್, ಲಕ್ಷ್ಮಿ ಪ್ರಮೋದ್, ಜಾಹ್ನವಿ ವಿಶ್ವನಾಥ್, ಗಂಗಮ್ಮ ಗಂಗಾಧರ್, ರಾಮಲಿಂಗ, ಶ್ರೀನಿವಾಸ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.