ಪಾವಗಡ: ಪಟ್ಟಣದ ಶನೈಶ್ಚರ ದೇಗುಲದಲ್ಲಿ ಮೊದಲನೇ ಶ್ರಾವಣ ಶನಿವಾರ ನಡೆದ ವಿಶೇಷ ಕಾರ್ಯಕ್ರಮಗಳಲ್ಲಿ ವಿವಿಧೆಡೆಯಿಂದ ಬಂದಿದ್ದ ಸಹಸ್ರಾರು ಭಕ್ತರು ಭಾಗವಹಿಸಿದ್ದರು.
₹7 ಕೋಟಿ ವೆಚ್ಚದಲ್ಲಿ ದೇಗುಲದ ಗರ್ಭಗುಡಿ, ಪ್ರಾಂಗಣಕ್ಕೆ ಚಿನ್ನದ ಲೇಪನ ಮಾಡಿರುವುದನ್ನು ಭಕ್ತರು ಕಣ್ತುಂಬಿಕೊಂಡರು. ಮುಂಜಾನೆ 4 ಗಂಟೆಯಿಂದಲೇ ಅಭಿಷೇಕ, ತೈಲಾಭಿಷೇಕ, ಕುಂಕುಮಾರ್ಚನೆ, ಸರ್ವಸೇವೆ, ತಾಳಿ ಪೂಜೆ ಇತ್ಯಾದಿ ಪೂಜೆ ನಡೆದವು.
ಸಂಘ ಸಂಸ್ಥೆಗಳ ಪದಾಧಿಕಾರಿಗಳು ಭಕ್ತರಿಗೆ ಉಪಹಾರ ವಿತರಿಸಿದರು. ದೇಗುಲದ ಎಸ್‌ಎಸ್‌ಕೆ ಅನ್ನದಾಸೋಹ ಭವನದಲ್ಲಿ ಶುಕ್ರವಾರದಿಂದ ಸಹಸ್ರಾರು ಸಂಖ್ಯೆಯ ಭಕ್ತರಿಗೆ ಉಚಿತ ಪ್ರಸಾದ ವಿತರಿಸಲಾಯಿತು.
ಬೆಳಿಗಿನ ಜಾವದಿಂದಲೇ ಸಂಜೆಯವರೆಗೆ ಸರದಿಯಲ್ಲಿ ನಿಂತು ದರ್ಶನ ಪಡೆದರು. ತರಹೇವಾರಿ ಹೂವುಗಳಿಂದ ಇಡೀ ದೇಗುಲವನ್ನು ಅಲಂಕರಿಸಲಾಗಿತ್ತು. ಶುಕ್ರವಾರವೇ ವಿವಿಧೆಡೆಯಿಂದ ಭಕ್ತರು ಬಂದಿದ್ದರಿಂದ ವಾಹನ ದಟ್ಟಣೆ ಹೆಚ್ಚಿತ್ತು.
ಶನಿವಾರ ಬಳ್ಳಾರಿ ರಸ್ತೆ, ತುಮಕೂರು ರಸ್ತೆಯಲ್ಲಿ ವಾಹನ ದಟ್ಟಣೆ ಹೆಚ್ಚಿದ್ದರಿಂದ ಪಟ್ಟಣದಲ್ಲಿ ಒಂದೆಡೆಯಿಂದ ಮತ್ತೊಂದೆಡೆಗೆ ಸಂಚರಿಸುವುದು ಕಷ್ಟಸಾಧ್ಯವಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.