ADVERTISEMENT

ಪಾವಗಡ: ಸುಸಜ್ಜಿತ ಸೌಕರ್ಯವಿಲ್ಲದ ಬಸ್‌ ನಿಲ್ದಾಣ

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2025, 7:29 IST
Last Updated 14 ಏಪ್ರಿಲ್ 2025, 7:29 IST
<div class="paragraphs"><p>ತಂಗುದಾಣದ ಬಳಿ ದ್ವಿಚಕ್ರ ವಾಹನಗಳನ್ನು ನಿಲ್ಲಿಸಿರುವುದು</p></div>

ತಂಗುದಾಣದ ಬಳಿ ದ್ವಿಚಕ್ರ ವಾಹನಗಳನ್ನು ನಿಲ್ಲಿಸಿರುವುದು

   

ಪಾವಗಡ: ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ವೈ.ಎನ್. ಹೊಸಕೋಟೆಯಲ್ಲಿ ಸುಸಜ್ಜಿತ ಬಸ್ ನಿಲ್ದಾಣವಿಲ್ಲದೆ ಜನರಿಗೆ ಸಮಸ್ಯೆಯಾಗುತ್ತಿದೆ.

ರೇಷ್ಮೆ ಸೀರೆಗಳಿಗೆ ಹೆಸರುವಾಸಿಯಾಗಿರುವ ಗ್ರಾಮದಿಂದ ರಾಜ್ಯ, ಆಂಧ್ರಪ್ರದೇಶ ಸೇರಿದಂತೆ ದೇಶ, ವಿದೇಶಗಳಿಗೂ ಇಲ್ಲಿನ ರೇಷ್ಮೆ ಸೀರೆಗಳು ರವಾನೆಯಾಗುತ್ತಿವೆ.

ADVERTISEMENT

ತಾಲ್ಲೂಕಿನ ಪ್ರಮುಖ ವಾಣಿಜ್ಯ ಕೇಂದ್ರವೂ ಆಗಿರುವ ಗ್ರಾಮಕ್ಕೆ ಹಲವು ಕೆಲಸಗಳಿಗಾಗಿ ನಿತ್ಯ ಆಂಧ್ರ ಹಾಗೂ ತಾಲ್ಲೂಕಿನ ವಿವಿಧೆಡೆಯಿಂದ ಜನರು ಬರುತ್ತಾರೆ. ಆದರೆ ಮೂಲಸೌಕರ್ಯವಿಲ್ಲದೆ ಸಾರ್ವಜನಿಕರು ಪರದಾಡಬೇಕಿದೆ.

ಆಂಧ್ರಕ್ಕೆ ಹೊಂದಿಕೊಂಡಿರುವ ಹೋಬಳಿ ಕೇಂದ್ರಕ್ಕೆ ನಿತ್ಯ ನೂರಾರು ಬಸ್‌ಗಳು ಬಂದು ಹೋಗುತ್ತವೆ. ಚಿತ್ರದುರ್ಗ, ಪಾವಗಡ, ತುಮಕೂರು, ಬೆಂಗಳೂರು, ಆಂಧ್ರದ ಕಲ್ಯಾಣದುರ್ಗ, ರಾಯದುರ್ಗ, ಬೆಸ್ತರಹಳ್ಳಿ, ಕುಂದುರ್ಪಿ ಸೇರಿದಂತೆ ವಿವಿಧ ಪ್ರದೇಶಗಳಿಗೆ ನಿತ್ಯ ಸಾವಿರಾರು ಮಂದಿ ಪ್ರಯಾಣಿಸುತ್ತಾರೆ.

ಬಸ್‌ಗಳಿಗಾಗಿ ಕಾಯುವ ಜನತೆ ಮಳೆಗಾಲದಲ್ಲಿ ಮಳೆಯಲ್ಲಿ ನೆನೆಯಬೇಕು, ಬೇಸಿಗೆಯಲ್ಲಿ ಬಿಸಲಿನ ಬೇಗೆಯಲ್ಲಿ ಬೇಯಬೇಕಿದೆ. ಬಸ್ ನಿಲ್ದಾಣದಲ್ಲಿ ಕನಿಷ್ಠ ಮೂಲ ಸೌಕರ್ಯಗಳಿಲ್ಲದೆ ಹಲವು ದಶಕಗಳಿಂದ ಯಥಾಸ್ಥಿತಿಯಲ್ಲಿ ಬಸ್ ನಿಲ್ದಾಣ ಇದೆ.

ದ್ವಿಚಕ್ರ ವಾಹನಗಳ ನಿಲ್ದಾಣವಾಗಿ ಮಾರ್ಪಟ್ಟ ತಂಗುದಾಣ: ಬಸ್ ನಿಲ್ದಾಣದಲ್ಲಿರುವ ತಂಗುದಾಣ ದ್ವಿಚಕ್ರ ವಾಹನಗಳು ನಿಲ್ಲಿಸುವ ಪಾರ್ಕಿಂಗ್ ಸ್ಥಳವಾಗಿ ಮಾರ್ಪಟ್ಟಿದೆ. ತಂಗುದಾಣದಲ್ಲಿ ಹತ್ತಾರು ದ್ವಿಚಕ್ರ ವಾಹನಗಳನ್ನು ನಿಲ್ಲಿಸಲಾಗಿರುತ್ತದೆ. ಬಿಸಿಲಿನಲ್ಲಿ ಕೆಲಕಾಲ ಕುಳಿತುಕೊಳ್ಳಲು ಪ್ರಾಯಾಣಿಕರಿಗೆ ಸಾಧ್ಯವಾಗುವುದಿಲ್ಲ. ರಾತ್ರಿಯ ವೇಳೆ ಅನೈತಿಕ ಚಟುವಟಿಕೆ ನಡೆಸುವವರ ನೆಚ್ಚಿನ ತಾಣವಾಗಿ ಬದಲಾಗುತ್ತದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ತಂಗುದಾಣ ಹೊರತುಪಡಿಸಿ ಕುಳಿತುಕೊಳ್ಳಲು ಪ್ರಯಾಣಿಕರಿಗೆ ಸ್ಥಳಾವಕಾಶ, ಆಸನಗಳ ವ್ಯವಸ್ಥೆ ಇಲ್ಲ. ಹೀಗಾಗಿ ಅಂಗಡಿಗಳ ಮುಂಭಾಗ ನಿಂತುಕೊಂಡು ಬಸ್‌ಗಳಿಗೆ ಕಾಯಬೇಕು. ಅಂಗಡಿಗಳ ಮಾಲೀಕರು ವ್ಯಾಪಾರಕ್ಕೆ ಅಡ್ಡವಾಗುತ್ತದೆ ಎಂದು ನಿಲ್ಲಲೂ, ಮುಂಭಾಗ ಕೂರಲು ಬಿಡುವುದಿಲ್ಲ ಎನ್ನುವುದು ಪ್ರಯಾಣಿಕರ ಅಳಲು.

ಕುಡಿಯುವ ನೀರಿನ ಸೌಲಭ್ಯ ಇಲ್ಲ: ಪೊಲೀಸ್ ಠಾಣೆ ಪಕ್ಕದಲ್ಲಿ ಕುಡಿಯುವ ನೀರಿಗಾಗಿ ನಿರ್ಮಿಸಿರುವ ತೊಟ್ಟಿ ಸಮರ್ಪಕ ನಿರ್ವಹಣೆ ಇಲ್ಲದೆ ವ್ಯರ್ಥವಾಗಿದೆ. ಇಲ್ಲಿನ ನೀರನ್ನು ಬಸ್ ಚಾಲಕ, ನಿರ್ವಾಹಕ, ಕ್ಲೀನರ್‌ಗಳು ಬಸ್‌ಗಳ ಸ್ವಚ್ಛತೆ ಸೇರಿದಂತೆ ಇತರೆ ಉದ್ದೇಶಗಳಿಗೆ ಬಳಸುತ್ತಾರೆ. ಹೀಗಾಗಿ ಪ್ರಯಾಣಿಕರು ಅಂಗಡಿಗಳಲ್ಲಿ ಕುಡಿಯುವ ನೀರನ್ನು ಖರೀದಿಸಿ ಕುಡಿಯಬೇಕಿದೆ.

ಶೌಚಾಲಯ ಸಾಕಾಗುತ್ತಿಲ್ಲ: ಬಸ್ ನಿಲ್ದಾಣದ ಬಳಿ ‘ಪೇ ಅಂಡ್ ಯೂಸ್’ ಶೌಚಾಲಯ ಇದೆ. ಶೌಚಾಲಯ ನಿರ್ವಹಣೆಯೂ ಉತ್ತಮವಾಗಿದೆ. ಆದರೆ ಇರುವ ಶೌಚಾಲಯಗಳು ಸಾಕಾಗುತ್ತಿಲ್ಲ. ಪ್ರಯಾಣಿಕರ ಸಂಖ್ಯೆಗೆ ಅನುಗುಣವಾಗಿ ಹೆಚ್ಚಿನ ಸಂಖ್ಯೆಯ ಶೌಚಾಲಯಗಳ ಅಗತ್ಯವಿದೆ ಎನ್ನುವುದು ಜನರ ಬೇಡಿಕೆ.

ವೈ.ಎನ್. ಹೊಸಕೋಟೆಯಲ್ಲಿ ನಿರುಪಯುಕ್ತವಾಗಿರುವ ಕುಡಿಯುವ ನೀರಿನ ಟ್ಯಾಂಕ್

ಬಸ್ ನಿಲ್ದಾಣ ಕಿರಿದಾಗಿರುವುದರಿಂದ ಬಸ್‌ಗಳು ನಿಲ್ಲಿಸಲೂ ಸಾಕಷ್ಟು ಸ್ಥಳಾವಕಾಶವಿಲ್ಲ. ಹೀಗಾಗಿ ಒಂದೇ ಬಾರಿ ಹತ್ತಾರು ಬಸ್‌ಗಳು ಬಂದಾಗ ಬಸ್ ಹತ್ತಿ, ಇಳಿಯಲೂ ಸಮಸ್ಯೆಯಾಗುತ್ತದೆ. ಹತ್ತಿ, ಇಳಿಯುವಾಗ ತರಾತುರಿಯಲ್ಲಿ ಬಸ್‌ಗಳಿಂದ ಪ್ರಯಾಣಿಕರು ಬಿದ್ದು ಗಾಯಗೊಂಡಿರುವ ಸಾಕಷ್ಟು ನಿದರ್ಶನಗಳಿವೆ.

ಈ ಹಿಂದೆ ಅಗಲವಾಗಿದ್ದ ಬಸ್ ನಿಲ್ದಾಣದ ಮಳಿಗೆಗಳು, ಪೆಟ್ಟಿಗೆ ಅಂಗಡಿಗಳು ಒತ್ತುವರಿ ಮಾಡಿಕೊಳ್ಳುತ್ತಿರುವ ಕಾರಣ ಕಿರಿದಾಗಿದೆ. ಬಸ್ ನಿಲ್ದಾಣದೊಳಗೆ ಪ್ರವೇಶಿಸಲು, ನಿಲ್ದಾಣದಿಂದ ಹೊರಬರಲು ಚಾಲಕರು ಹರಸಾಹಸ ಪಡಬೇಕಿದೆ. ಈ ಬಗ್ಗೆ ಗ್ರಾಮ ಪಂಚಾಯಿತಿ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗುತ್ತಿಲ್ಲ ಎನ್ನುವುದು ಗ್ರಾಮಸ್ಥರ ದೂರು.

ಮಳಿಗೆಗಳಿಂದ, ಬಸ್‌ಗಳಿಂದ ಸುಂಕ ವಸೂಲಿ ಮಾಡಲು ಅಧಿಕಾರಿಗಳಿಗೆ ಇರುವ ಆಸಕ್ತಿ, ಮೂಲ ಸೌಕರ್ಯಗಳನ್ನು ಕಲ್ಪಿಸಲು ಇಲ್ಲ ಎನ್ನುವುದು ಸಾರ್ವಜನಿಕರ ಆರೋಪ.

ವೈಎನ್ ಹೊಸಕೋಟೆ ಬಸ್ ನಿಲ್ದಾಣ

ವಿವಿಧೆಡೆಗಳಿಂದ ಬರುವ ಮಹಿಳೆಯರು ಮಕ್ಕಳಿಗೆ ಬಸ್ ನಿಲ್ದಾಣದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು. ಶುದ್ಧೀಕರಣ ಘಟಕ ಅಳವಡಿಸಿ ದಿನದ 24 ಗಂಟೆ ನೀರು ಸಿಗುವಂತೆ ಗಮನಹರಿಸಬೇಕು
ಮಂಜುನಾಥ್ ಮರಿದಾಸನಹಳ್ಳಿ
ವೈಎನ್ ಹೊಸಕೋಟೆ ಬಸ್ ನಿಲ್ದಾಣವನ್ನು ಅಭಿವೃದ್ಧಿ ಮಾಡಿ ಪ್ರಯಾಣಿಕರಿಗೆ ಮೂಲಸೌಕರ್ಯ ಕಲ್ಪಿಸಬೇಕು. ತಂಗುದಾಣದಲ್ಲಿ ಪ್ರಯಾಣಿಕರು ಕುಳಿತುಕೊಳ್ಳಲು ಸೂಕ್ತ ವ್ಯವಸ್ಥೆ ಮಾಡಬೇಕು.
ರಘುನಂದನ್ ವಕೀಲ
ಇರುವ ಶೌಚಾಲಯಗಳ ಜೊತೆಗೆ ಹೆಚ್ಚನ ಶೌಚಾಲಯಗಳ ಅಗತ್ಯವಿದೆ. ರಾತ್ರಿ ಬಸ್ ನಿಲ್ದಾಣದಲ್ಲಿ ಬಸ್‌ಗಳಿಗಾಗಿ ನಿರ್ಭೀತಿಯಿಂದ ಕಾಯಲು ಹೆಚ್ಚಿನ ವಿದ್ಯುತ್ ದೀಪಗಳನ್ನು ಅಳವಡಿಸಬೇಕು
ಶಿವಶಂಕರ್ ಓಬಳಾಪುರ
ಹೆಚ್ಚಿನ ಸಂಖ್ಯೆಯ ಬಸ್‌ಗಳು ಒಂದೇ ಸಮಯದಲ್ಲಿ ನಿಂತುಕೊಳ್ಳುವಂತೆ ಸುಸಜ್ಜಿತ ಬಸ್ ನಿಲ್ದಾಣ ನಿರ್ಮಿಸಬೇಕಿದೆ. ಆಸನ ನೆರಳಿನ ವ್ಯವಸ್ಥೆ ಹಾಗೂ ಸುಲಭವಾಗಿ ನಿಲ್ದಾಣದೊಳಗೆ ಪ್ರವೇಶಿಸುವಂತೆ ಅಗಲವಾದ ರಸ್ತೆ ನಿರ್ಮಿಸಬೇಕಿದೆ
ನಾಗರಾಜು ವೈಎನ್ ಹೊಸಕೋಟೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.