ADVERTISEMENT

ಪಿಎಫ್ಐ ಅಧ್ಯಕ್ಷ ಪೊಲೀಸರ ವಶಕ್ಕೆ

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2022, 5:08 IST
Last Updated 28 ಸೆಪ್ಟೆಂಬರ್ 2022, 5:08 IST

ತುಮಕೂರು: ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಪಿಎಫ್‌ಐ ಸಂಘಟನೆ ಮೇಲೆ ಮಂಗಳವಾರ ಪೊಲೀಸರು ದಾಳಿ ನಡೆಸಿದ್ದು, ಪಿಎಫ್‌ಐ ಜಿಲ್ಲಾ ಘಟಕದ ಅಧ್ಯಕ್ಷ ರಿಯಾನ್ ಖಾನ್ ಎಂಬುವರನ್ನು ವಶಕ್ಕೆ ಪಡೆದಿದ್ದಾರೆ.

ನಗರದ ಸದಾಶಿವನಗರದಲ್ಲಿರುವ ರಿಯಾನ್ ಖಾನ್ ಮನೆಯ ಮೇಲೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಕೆ. ಶಹಪೂರವಾಡ್ ನೇತೃತ್ವದಲ್ಲಿ ಪೊಲೀಸರು ದಾಳಿ‌ ನಡೆಸಿದ್ದರು. ರಿಯಾನ್ ಖಾನ್ ಅವರನ್ನು ವಶಕ್ಕೆ ಪಡೆದುಕೊಂಡ ನಂತರ ತಹಶೀಲ್ದಾರ್ ಎದುರು ಹಾಜರು ಪಡಿಸಲಾಯಿತು. ನಂತರ ವಿಚಾರಣೆಗಾಗಿ ಪೊಲೀಸರ ವಶಕ್ಕೆ ನೀಡಲಾಯಿತು. ಅ. 2ರ ವರೆಗೆ ಪೊಲೀಸರು ವಿಚಾರಣೆ ನಡೆಸಲು ಅವಕಾಶ ನೀಡಲಾಗಿದೆ.

ರಾಜ್ಯದ ವಿವಿಧೆಡೆ ಪಿಎಫ್‌ಐ, ಎಸ್‌ಡಿಪಿಐ ಸಂಘಟನೆಗಳ ಕಚೇರಿ, ಮುಖಂಡರ ಮನೆಗಳ ಮೇಲೆ ಸೆ. 22ರಂದು ದಾಳಿ ನಡೆದಿದ್ದರೂ ಜಿಲ್ಲೆಯಲ್ಲಿ ಈವರೆಗೂ ಯಾವುದೇ ದಾಳಿ ನಡೆದಿರಲಿಲ್ಲ. ಮಂಗಳವಾರ ರಾಜ್ಯದ ವಿವಿಧೆಡೆ ಪೊಲೀಸರು ದಾಳಿ ನಡೆಸಿದ್ದು, ಅದರಂತೆ ಜಿಲ್ಲೆಯಲ್ಲೂ ದಾಳಿ ನಡೆಸಲಾಗಿದೆ. ಪಿಎಫ್‌ಐ ಜಿಲ್ಲಾ ಘಟಕದ ಅಧ್ಯಕ್ಷರೊಬ್ಬರ ಮನೆ ಮೇಲೆ ಮಾತ್ರ ದಾಳಿ ಮಾಡಲಾಗಿದೆ. ಬೇರೆಲ್ಲೂ ದಾಳಿ ನಡೆದಿಲ್ಲ ಎಂದು ಮೂಲಗಳು ಖಚಿತ
ಪಡಿಸಿವೆ.

ADVERTISEMENT

ಜಿಲ್ಲೆಯಲ್ಲಿ ಪಿಎಫ್‌ಐ, ಎಸ್‌ಡಿಪಿಐ ಸಂಘಟನೆಗಳು ಸಕ್ರಿಯವಾಗಿದ್ದರೂ, ಹೇಳಿಕೊಳ್ಳುವಂತಹ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರಲಿಲ್ಲ. ಸಂಘಟನೆ ಅಥವಾ ಕಾರ್ಯಕರ್ತರಿಂದ ಗುರುತರವಾದಂತಹ ಘಟನೆಗಳು ನಡೆದಿಲ್ಲ. ಅವರ ಬಗ್ಗೆ ಹೆಚ್ಚಿನ ಆರೋಪಗಳೂ ಕೇಳಿ ಬಂದಿರಲಿಲ್ಲ. ಆದರೂ ಮುಂಜಾಗ್ರತೆ ಸಲುವಾಗಿ ದಾಳಿ ಮಾಡಲಾಗಿದೆ. ಅಗತ್ಯ ನೋಡಿಕೊಂಡು ಇನ್ನಷ್ಟು ದಾಳಿ ನಡೆಸಬೇಕಾಗಬಹುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.