ADVERTISEMENT

ಮನು ಕೊಲೆ ಪ್ರಕರಣ; 12 ಜನರ ಬಂಧನ

ಶಾಸಕ ಗೋಪಾಲಯ್ಯ ಸಹೋದರ ಬಸವರಾಜು ಪುತ್ರಿ ಕರೆದುಕೊಂಡು ಹೋಗಿದ್ದ ಮನು

​ಪ್ರಜಾವಾಣಿ ವಾರ್ತೆ
Published 23 ಜನವರಿ 2019, 12:27 IST
Last Updated 23 ಜನವರಿ 2019, 12:27 IST

ತುಮಕೂರು: ‘ಕೊರಟಗೆರೆ ತಾಲ್ಲೂಕು ಸಿ.ಎಸ್‌.ದುರ್ಗ ಹೋಬಳಿ ಜಟ್ಟಿ ಅಗ್ರಹಾರದ ಸಮೀಪ ನಡೆದ ಮನು ಎಂಬುವವರ ಕೊಲೆ ಪ್ರಕರಣ ಸಂಬಂಧ 12 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ’ ಎಂದು ಕೇಂದ್ರ ವಲಯ ಐಜಿಪಿ ದಯಾನಂದ್ ಮಾಹಿತಿ ನೀಡಿದರು.

ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಜ.8ರಂದು ಡಾಬಸ್‌ಪೇಟೆ ಬಳಿ ಬೆಂಗಳೂರಿನ ಬಸವೇಶ್ವರ ನಗರದ ಧರ್ಮೇಂದ್ರ (46), ರಾಜಾಜಿನಗರದ ತಿಮ್ಮರಾಜು (35), ನೆಲಮಂಗಲ ತಾಲ್ಲೂಕಿನ ಕೋಡಿಹಳ್ಳಿಯ ಜಗದೀಶ್ (30), ಕೆಂಪಹನುಮಯ್ಯ (26), ಪೆಮ್ಮನಹಳ್ಳಿಯ ಶಿವಕುಮಾರ್ (23), ತುಮಕೂರು ತಾಲ್ಲೂಕು ಹೊನ್ನುಡಿಕೆಯ ಶ್ರೀನಿವಾಸ್ (20) ಅವರನ್ನು ಜ.8ರಂದು ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದರು’ ಎಂದು ಹೇಳಿದರು.

‘ಈ ಆರೋಪಿಗಳು ನೀಡಿದ ಮಾಹಿತಿ ಆಧರಿಸಿ ಬೆಂಗಳೂರಿನ ಕಾಮಾಕ್ಷಿಪಾಳ್ಯದ ಬಸವರಾಜು (48), ಮಂಜುನಾಥ್ (25), ಕುಮಾರ್ (32), ಚಂದ್ರ (45), ಲೋಕೇಶ್ (27) ಮತ್ತು ಪುರುಷೋತ್ತಮ (30) ಅವರನ್ನು ಜ.12ರಂದು ತುಮಕೂರು ತಾಲ್ಲೂಕಿನ ಅಣ್ಣಯ್ಯನಪಾಳ್ಯದಲ್ಲಿ ಬಂಧಿಸಲಾಯಿತು’ ಎಂದು ವಿವರಿಸಿದರು.

ADVERTISEMENT

ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ್ದ ಎರಡು ಲಾಂಗ್‌, ಒಂದು ಡ್ರಾಗರ್, ನಾಲ್ಕು ಕಾರುಗಳನ್ನು ವಶಪಡಿಸಿಕೊಳ್ಳಲಾಗಿದೆ. ಕೊಲೆಯಾದ ಮನು ಆರೋಪಿ ಬಸವರಾಜು ಮನೆಯಲ್ಲಿ ಕೆಲಸ ಮಾಡುತ್ತಿದ್ದ. ಅವರ ಮಗಳನ್ನು ಕರೆದುಕೊಂಡು ಹೋಗಿದ್ದ. ಈ ದ್ವೇಷದ ಕಾರಣಕ್ಕೆ ಬಸವರಾಜು ಮತ್ತು ಆತನ ಕಡೆಯವರು ಹತ್ಯೆ ನಡೆಸಿದ್ದಾರೆ ಎಂದು ಮಾಹಿತಿ ನೀಡಿದರು.

ಆರೋಪಿಗಳಾದ ಧರ್ಮೇಂದ್ರ ರೌಡಿಶೀಟರ್ ಆಗಿದ್ದಾನೆ. ತಿಮ್ಮರಾಜು ಮತ್ತು ಬಸವರಾಜು ಅವರ ವಿರುದ್ಧವೂ ಬೆಂಗಳೂರಿನ ಕಾಮಾಕ್ಷಿ ಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿವೆ. ಮನು ಸಹ ಈ ಹಿಂದೆ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದು ರೌಡಿಪಟ್ಟಿಯಲ್ಲಿ ಇದ್ದ ಎಂದರು.

ಎಲ್ಲ ಆರೋಪಿಗಳನ್ನು ಜ.31ರವರೆಗೆ ನ್ಯಾಯಾಂಗ ಬಂಧಕ್ಕೆ ಒಪ್ಪಿಸಲಾಗಿದೆ. ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ ಮುಂದಿನ ತನಿಖೆಯನ್ನು ಮಧುಗಿರಿ ಡಿವೈಎಸ್‌ಪಿ ಅವರಿಗೆ ವಹಿಸಲಾಗಿದೆ. ಆರೋಪಿಗಳನ್ನು ಬಂಧಿಸಿದ ತನಿಖಾ ತಂಡಕ್ಕೆ ₹ 25 ಸಾವಿರ ನಗದು ಬಹುಮಾನ ನೀಡಲಾಗುವುದು ಎಂದು ಹೇಳಿದರು.

ಶಾಸಕ ಗೋಪಾಲಯ್ಯ ಅವರ ಸಹೋದರ ಬಸವರಾಜು ಅವರ ಪುತ್ರಿಯನ್ನು ಕೊಲೆಯಾದ ಮನು ಕರೆದುಕೊಂಡು ಹೋಗಿದ್ದರು. ಈ ಪ್ರಕರಣ ರಾಜ್ಯದಾದ್ಯಂತ ತೀವ್ರ ಚರ್ಚೆಯನ್ನು ಹುಟ್ಟು ಹಾಕಿತ್ತು. ಶಾಸಕರನ್ನು ಪ್ರಕರಣದಲ್ಲಿ ಎಳೆದು ತಂದಿತ್ತು.

ಇನ್ನೂ ಪತ್ತೆಯಾಗದ ಹುಡುಗಿ
‘ಮನು ಕರೆದುಕೊಂಡು ಹೋಗಿದ್ದ ಬಸವರಾಜು ಅವರ ಪುತ್ರಿಯ ಬಗ್ಗೆ ಇನ್ನೂ ಮಾಹಿತಿ ದೊರೆತಿಲ್ಲ. ಆಕೆಯನ್ನು ಪತ್ತೆ ಹಚ್ಚುವ ದಿಸೆಯಲ್ಲಿ ತನಿಖಾ ತಂಡ ತೀವ್ರ ಪ್ರಯತ್ನ ನಡೆಸಿದೆ’ ಎಂದು ದಯಾನಂದ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.