ADVERTISEMENT

ರಾಜಕೀಯ ಪ್ರಾತಿನಿಧ್ಯಕ್ಕೆ ತಿಗಳರ ಬೇಡಿಕೆ

ತಿಗಳ ಸಮುದಾಯದ ಜನಪ್ರತಿನಿಧಿಗಳಿಗೆ ಅಭಿನಂದನೆ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2021, 16:12 IST
Last Updated 28 ಫೆಬ್ರುವರಿ 2021, 16:12 IST
ತುಮಕೂರಿನಲ್ಲಿ ತಿಗಳ ಸಮುದಾಯದ ಗ್ರಾ.ಪಂ ಸದಸ್ಯರನ್ನು ಸನ್ಮಾನಿಸಲಾಯಿತು
ತುಮಕೂರಿನಲ್ಲಿ ತಿಗಳ ಸಮುದಾಯದ ಗ್ರಾ.ಪಂ ಸದಸ್ಯರನ್ನು ಸನ್ಮಾನಿಸಲಾಯಿತು   

ತುಮಕೂರು: ಕರ್ನಾಟಕ ಅಗ್ನಿಬನ್ನಿರಾಯ ತಿಗಳ ಮಹಾಸಭಾ, ಅಗ್ನಿಕುಲ ತಿಗಳ ಜನಾಂಗ ಮತ್ತು ಕೋಟೆ ಕೊಲ್ಲಾಪುರದಮ್ಮ ಅಭಿವೃದ್ಧಿ ಸಮಿತಿ ವತಿಯಿಂದ ತಿಗಳ ಸಮುದಾಯದ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷರು, ಸದಸ್ಯರನ್ನು ಭಾನುವಾರ ಸನ್ಮಾನಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಅಗ್ನಿಬನ್ನಿರಾಯ ತಿಗಳ ಮಹಾಸಭಾ ಅಧ್ಯಕ್ಷ ಎಂ.ಆಂಜನೇಯ ಮಾತನಾಡಿ, ‘ತಿಗಳ ಜನಾಂಗಕ್ಕೆ ರಾಜಕೀಯ ಪ್ರಾತಿನಿಧ್ಯ ಬೇಕಾಗಿದೆ. ಅದಕ್ಕಾಗಿ ಸಮುದಾಯ ಒಟ್ಟಾಗಬೇಕು. ಹೋರಾಟದ ಮೂಲಕ ರಾಜಕೀಯ ಪ್ರಾತಿನಿಧ್ಯ ಪಡೆದುಕೊಳ್ಳಬೇಕಾಗಿದೆ’ ಎಂದು ಹೇಳಿದರು.

ಸಮುದಾಯದವರು ಕಷ್ಟಪಟ್ಟು ಅಲ್ಪಸ್ವಲ್ಪ ಜಮೀನಿನಲ್ಲಿ ತರಕಾರಿ, ಹೂ, ಹಣ್ಣು ಸೇರಿದಂತೆ ಹಲವು ಆಹಾರ ಪದಾರ್ಥಗಳನ್ನು ಬೆಳೆದು ಸಮಾಜಕ್ಕೆ ತಮ್ಮದೇ ರೀತಿಯಲ್ಲಿ ಕೊಡುಗೆ ನೀಡುತ್ತಿದ್ದಾರೆ ಎಂದು ಸ್ಮರಿಸಿದರು.

ADVERTISEMENT

ಕಾರ್ಯಕ್ರಮ ಉದ್ಘಾಟಿಸಿದ ಮಹಾನಗರ ಪಾಲಿಕೆ ಸದಸ್ಯೆ ಲಲಿತಾ ರವೀಶ್, ‘ತಿಗಳ ಸಮುದಾಯ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ರಾಜ ಕೀಯವಾಗಿ ಹಿಂದುಳಿದಿದೆ. ಸಮಾಜದ ಮುಖ್ಯವಾಹಿನಿಗೆ ಬರಲು ಸಂಘಟಿತ ರಾಗಬೇಕು’ ಎಂದು ಸಲಹೆ ಮಾಡಿದರು.

ಪಾಲಿಕೆ ಸದಸ್ಯ ಟಿ.ಕೆ.ನರಸಿಂಹಮೂರ್ತಿ, ‘ತುಮಕೂರು ಜಿಲ್ಲೆ ಸೇರಿದಂತೆ ಬೆಂಗಳೂರು ಗ್ರಾಮಾಂತರ, ಹಾಸನ ಜಿಲ್ಲೆಗಳಲ್ಲಿ ಸುಮಾರು 300ಕ್ಕೂ ಹೆಚ್ಚು ತಿಗಳ ಸಮುದಾಯದ ಗ್ರಾ.ಪಂ ಸದಸ್ಯರು ಆಯ್ಕೆಯಾಗಿದ್ದಾರೆ. ಅವರನ್ನು ಅಭಿನಂದಿಸಲಾಗುತ್ತಿದೆ’
ಎಂದರು.

ರಾಜ್ಯದಲ್ಲಿ ಸುಮಾರು 40 ಲಕ್ಷದಷ್ಟು ತಿಗಳ ಸಮುದಾಯವಿದೆ. ನೆರೆ ರಾಜ್ಯ ತಮಿಳುನಾಡಲ್ಲಿ ತಿಗಳ ಜನಾಂಗ ರಾಜಕೀಯ, ಆರ್ಥಿಕ, ಸಾಮಾಜಿಕ ರಂಗಗಳಲ್ಲಿ ಸಾಕಷ್ಟು ಮುಂದುವರಿದಿದೆ. ಅದೇ ಮಾದರಿಯಲ್ಲಿ ರಾಜ್ಯ ಸರ್ಕಾರ ಸಹ ಉತ್ತೇಜನ ನೀಡಬೇಕು ಎಂದು ಆಗ್ರಹಿಸಿದರು.

ಪಾಲಿಕೆ ಮಾಜಿ ಸದಸ್ಯ ಪ್ರೆಸ್ ರಾಜಣ್ಣ, ನಿವೃತ್ತ ಶಿಕ್ಷಕ ಎ.ರಾಮುಸ್ವಾಮಿ, ಎನ್.ಡಿ.ಅನಂತರಾಜು ಮಾತನಾಡಿದರು. ಯಜಮಾನರುಗಳಾದ ಟಿ.ಎಲ್.ಹನುಮಣ್ಣ, ಸಂಜೀವಣ್ಣ, ಸರ್ಕಾರಿ ನೌಕರರಾಗಿ ನಿವೃತ್ತಿ ಹೊಂದಿದ ಎನ್.ಡಿ.ಅನಂತರಾಜು, ಲೆಂಕಪ್ಪ, ಲಿಂಗದೇವರು, ಸಿದ್ಧಗಂಗಮ್ಮ, ಮಣಿ, ಗಂಗಾಧರಯ್ಯ ಅವರನ್ನು ಗೌರವಿಸಲಾಯಿತು.

ಪಾಲಿಕೆ ಮಾಜಿ ಉಪಮೇಯರ್ ಶಶಿಕಲಾ ಗಂಗಹನುಮಯ್ಯ, ಎ.ಶ್ರೀನಿವಾಸ್, ಜಿಲ್ಲಾ ಪಂಚಾಯಿತಿ ಸದಸ್ಯ ಲಕ್ಷ್ಮಿನರಸಯ್ಯ, ಅಗ್ನಿ ಬನ್ನಿರಾಯಸ್ವಾಮಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಟಿ.ಎಲ್.ಕುಂಭಯ್ಯ, ಅಗ್ನಿಕುಲ ತಿಗಳ ಜನಾಂಗದ ಅಧ್ಯಕ್ಷ ಡಿ.ಕುಂಭಿನರಸಯ್ಯ, ಸಮಾಜ ಸೇವಕರಾದ ರವೀಶ್ ಜಾಂಗೀರ್, ಎನ್.ಎಸ್.ಶಿವಣ್ಣ, ಕೆ.ಸಿ.ಕೃಷ್ಣಮೂರ್ತಿ, ಟಿ.ಎಚ್.ಜಯರಾಮ್, ಕೋಟೆ ಕೊಲ್ಲಾಪುರದಮ್ಮ ದೇವಸ್ಥಾನ ಅಭಿವೃದ್ಧಿ ಸಮಿತಿ ಅಧ್ಯಕ್ಷ ವಸಂತಕುಮಾರ್, ಮಾರುತಿ ಉಪಸ್ಥಿತರಿದ್ದರು.

ಯಜಮಾನರುಗಳಾದ ಟಿ.ಎಸ್.ಶಿವಕುಮಾರ್, ಟಿ.ಎಚ್.ಹನುಮಂತರಾಜು, ದಾಸೇಗೌಡ, ಕೃಷ್ಣಪ್ಪ, ಮಂಜಣ್ಣ, ಗಂಗಹನುಮಯ್ಯ, ಜಗದೀಶ್, ಸಣ್ಣಹನುಮಂತಯ್ಯ, ಧರ್ಮಯ್ಯ, ರಂಗಪ್ಪ, ನಾರಾಯಣಪ್ಪ ನೇತೃತ್ವ ವಹಿಸಿದ್ದರು.

300ಕ್ಕೂ ಹೆಚ್ಚು ತಿಗಳ ಸಮುದಾಯದ ಗ್ರಾ.ಪಂ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರನ್ನು ಸನ್ಮಾನಿಸಲಾಯಿತು. ಕರ್ನಾಟಕ ರಾಜ್ಯ ಅಗ್ನಿವಂಶ ಕ್ಷತ್ರಿಯ ತಿಗಳ ಯೂತ್ ಫೋರ್ಸ್ ಉದ್ಘಾಟನೆ, ಲಾಂಛನ ಬಿಡುಗಡೆ ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.