ADVERTISEMENT

ಬಹುಸಂಖ್ಯಾತರಿಗೆ ದಕ್ಕದ ಅಧಿಕಾರ

ಅಂಬೇಡ್ಕರ್‌, ಬಾಬೂಜಿ ಜನ್ಮ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2022, 5:46 IST
Last Updated 26 ಏಪ್ರಿಲ್ 2022, 5:46 IST
ಗುಬ್ಬಿಯಲ್ಲಿ ತಮಟೆ ಬಾರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಶಾಸಕ ಎಸ್.ಆರ್. ಶ್ರೀನಿವಾಸ್
ಗುಬ್ಬಿಯಲ್ಲಿ ತಮಟೆ ಬಾರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಶಾಸಕ ಎಸ್.ಆರ್. ಶ್ರೀನಿವಾಸ್   

ಗುಬ್ಬಿ: ‘ದೇಶದಲ್ಲಿ ಶೇ 3ರಷ್ಟಿರುವ ಜನರು ಅಧಿಕಾರ ಹಿಡಿದು ಶೇ 87ರಷ್ಟಿರುವ ಬಹುಸಂಖ್ಯಾತರ ಮೇಲೆ ಅಧಿಕಾರ ಚಲಾಯಿಸುತ್ತಿರುವುದು ವಿಪರ್ಯಾಸ’ ಎಂದು ದಸಂಸ ರಾಜ್ಯ ಘಟಕದ ಸಂಘಟನಾ ಸಂಚಾಲಕಿ ಅಕ್ಷತಾ ವಿಷಾದಿಸಿದರು.

ಪಟ್ಟಣದಲ್ಲಿ ಸೋಮವಾರ ನಡೆದ ಡಾ.ಬಿ.ಆರ್. ಅಂಬೇಡ್ಕರ್ ಹಾಗೂ ಡಾ.ಬಾಬು ಜಗಜೀವನ್‌ ರಾಂ ಜಯಂತಿಯಲ್ಲಿ ಮಾತನಾಡಿದರು.

ಯಾವುದೇ ಸಂಘಟನೆಯಲ್ಲಿ ಫಲಾಪೇಕ್ಷೆ ಇಲ್ಲದೆ ಪಾಲ್ಗೊಂಡಾಗ ಮಾತ್ರ ಹೋರಾಟಗಳು ಯಶಸ್ವಿಯಾಗಲು ಸಾಧ್ಯ. ತನ್ನ ಜ್ಞಾನದಿಂದಲೇ ಉನ್ನತ ಸ್ಥಾನ ಪಡೆದ ಅಂಬೇಡ್ಕರ್ ಅವರು ಮನುವಾದಿ ವ್ಯವಸ್ಥೆ ವಿರುದ್ಧ ಶೋಷಿತರಲ್ಲಿ ಜಾಗೃತಿ ಮೂಡಿಸಿದ್ದಾರೆ. ಅವರ ಹೋರಾಟದ ಪ್ರತಿಫಲ ಅನುಭವಿಸುತ್ತಿರುವ ಪರಿಶಿಷ್ಟರು ಅವರ ಚಿಂತನೆಗಳನ್ನು ರೂಢಿಸಿಕೊಳ್ಳಬೇಕಿದೆ ಎಂದು ಹೇಳಿದರು.

ADVERTISEMENT

ಶಾಸಕಎಸ್.ಆರ್. ಶ್ರೀನಿವಾಸ್, ‘ಅಂಬೇಡ್ಕರ್ ಶೋಷಿತರ ಧ್ವನಿಯಾಗಿ ಸಾಮಾಜಿಕ ನ್ಯಾಯ ಕಾಪಾಡುವ ನಿಟ್ಟಿನಲ್ಲಿ ಉತ್ತಮವಾದ ಸಂವಿಧಾನ ನೀಡಿದ್ದಾರೆ. ಇಂಥ ಮಹಾನ್ ವ್ಯಕ್ತಿಗಳನ್ನು ಕೆಲವೇ ಸಮುದಾಯಕ್ಕೆ ಸೀಮಿತಗೊಳಿಸುವುದು ತರವಲ್ಲ. ಅವರ ಆದರ್ಶ, ಚಿಂತನೆಗಳು ನಮಗೆ ಮಾರ್ಗದರ್ಶಕವಾಗಿವೆ’ ಎಂದು ಹೇಳಿದರು.

ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಗೋವಿಂದರಾಜು ಮಾತನಾಡಿ, ಶಿಕ್ಷಣದಿಂದ ಮಾತ್ರ ನಿಗದಿತ ಗುರಿ ತಲುಪಲು ಸಾಧ್ಯ ಎನ್ನುವುದಕ್ಕೆ ಅಂಬೇಡ್ಕರ್ ಮಾದರಿಯಾಗಿದ್ದಾರೆ. ದೇಶದ ಹಿತದೃಷ್ಟಿಯಿಂದ ರಚಿಸಿರುವ ಸಂವಿಧಾನವನ್ನು ಕೆಲವರು ಬದಲಾಯಿಸಲು ಹೊರಟಿರುವುದು ಖಂಡನೀಯ ಎಂದು ಹೇಳಿದರು.

ಮುಖಂಡ ಕೊಟ್ಟ ಶಂಕರ್ ಮಾತನಾಡಿ, ಸ್ವಾತಂತ್ರ್ಯ ಬಂದ 70 ವರ್ಷಗಳ ನಂತರವೂ ಪರಿಶಿಷ್ಟರ ಮೇಲೆ ಶೋಷಣೆಗಳು ನಡೆಯುತ್ತಿವೆ. ಇತ್ತೀಚೆಗೆ ತಾಲ್ಲೂಕಿನಲ್ಲಿ ನಡೆದಿರುವ ಪರಿಶಿಷ್ಟ ಯುವಕರ ಹತ್ಯೆಯಿಂದ ಇಡೀ ನಾಗರಿಕ ಸಮಾಜ ತಲೆತಗ್ಗಿಸುವಂತಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ಅಣ್ಣಪ್ಪಸ್ವಾಮಿ, ಸದಸ್ಯರಾದ ಮಹಮ್ಮದ್ ಸಾಧಿಕ್,ಶೌಕತ್ ಅಲಿ, ಮಮತಾ, ಮುಖಂಡರಾದ ನರಸಿಂಹಮೂರ್ತಿ, ಜಗನ್ನಾಥ್, ಮಂಜುನಾಥ್, ಸಲೀಂ ಪಾಷಾ,ಗುರುರೇಣುಕಾರಾಧ್ಯ, ಪ್ರಸನ್ನಕುಮಾರ್, ರೈತ ಸಂಘದ ವೆಂಕಟೇಗೌಡ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಮಂಜಮ್ಮ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.