ADVERTISEMENT

ರಾಜ್ಯಾಂಗದಿಂದ ಮಾತ್ರ ಅಧಿಕಾರ: ಡಾ.ವಡ್ಡಗೆರೆ ನಾಗರಾಜಯ್ಯ ಅಭಿಮತ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2021, 3:53 IST
Last Updated 26 ಸೆಪ್ಟೆಂಬರ್ 2021, 3:53 IST
ತುಮಕೂರಿನಲ್ಲಿ ಜಿಲ್ಲಾ ಮಾದಿಗರ ಸ್ವಾಭಿಮಾನಿ ಸಮಾವೇಶದಲ್ಲಿ ಲೇಖಕರಾದ ಡಾ.ವಡ್ಡಗೆರೆ ನಾಗರಾಜಯ್ಯ, ಪ್ರೊ.ಅರವಿಂದ ಮಾಲಗತ್ತಿ, ಆಹಾರ ಇಲಾಖೆ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಬಿ.ಎಚ್.ಅನಿಲ್ ಕುಮಾರ್, ಸಮುದಾಯದ ಮುಖಂಡರಾದ ಗಂಗಹನುಮಯ್ಯ, ಕೆ.ಎಂ.ತಿಮ್ಮರಾಯಪ್ಪ, ವೈ.ಎಚ್.ಹುಚ್ಚಯ್ಯ, ಕೆಂಚಮಾರಯ್ಯ, ಡಾ.ವೈ.ಕೆ.ಬಾಲಕೃಷ್ಣಪ್ಪ, ಡಾ.ಮುರುಳೀಧರ, ಪಾವಗಡ ಶ್ರೀರಾಮ್, ಡಾ.ಓ.ನಾಗರಾಜು, ನರಸಿಂಹಮೂರ್ತಿ, ಶಿವನಂಜಪ್ಪ ಇತರರು ಇದ್ದರು
ತುಮಕೂರಿನಲ್ಲಿ ಜಿಲ್ಲಾ ಮಾದಿಗರ ಸ್ವಾಭಿಮಾನಿ ಸಮಾವೇಶದಲ್ಲಿ ಲೇಖಕರಾದ ಡಾ.ವಡ್ಡಗೆರೆ ನಾಗರಾಜಯ್ಯ, ಪ್ರೊ.ಅರವಿಂದ ಮಾಲಗತ್ತಿ, ಆಹಾರ ಇಲಾಖೆ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಬಿ.ಎಚ್.ಅನಿಲ್ ಕುಮಾರ್, ಸಮುದಾಯದ ಮುಖಂಡರಾದ ಗಂಗಹನುಮಯ್ಯ, ಕೆ.ಎಂ.ತಿಮ್ಮರಾಯಪ್ಪ, ವೈ.ಎಚ್.ಹುಚ್ಚಯ್ಯ, ಕೆಂಚಮಾರಯ್ಯ, ಡಾ.ವೈ.ಕೆ.ಬಾಲಕೃಷ್ಣಪ್ಪ, ಡಾ.ಮುರುಳೀಧರ, ಪಾವಗಡ ಶ್ರೀರಾಮ್, ಡಾ.ಓ.ನಾಗರಾಜು, ನರಸಿಂಹಮೂರ್ತಿ, ಶಿವನಂಜಪ್ಪ ಇತರರು ಇದ್ದರು   

ತುಮಕೂರು: ದೇಶದಲ್ಲಿ ಪಂಚಾಂಗ ಜಾರಿಯಾಗುತ್ತಿದೆಯೇ ಹೊರತು, ರಾಜ್ಯಾಂಗವಲ್ಲ. ಬುದ್ಧ, ಅಂಬೇಡ್ಕರ್, ಬಸವಣ್ಣ ಹುಟ್ಟಿದ ನಾಡಿನಲ್ಲಿ ಪಂಚಾಂಗ ನಡೆಯುವುದಿಲ್ಲ ಎಂಬುದನ್ನು ಈ ವೇದಿಕೆಯ ಮೂಲಕ ಹೇಳಬೇಕಾಗಿದೆ ಎಂದು ಚಿಂತಕ ಡಾ.ವಡ್ಡಗೆರೆ ನಾಗರಾಜಯ್ಯ ತಿಳಿಸಿದರು.

ನಗರದ ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಶನಿವಾರ ನಡೆದ ಜಿಲ್ಲಾ ಮಾದಿಗರ ಸ್ವಾಭಿಮಾನಿ ಸಮಾವೇಶ ಹಾಗೂ ಎಸ್ಸೆಸ್ಸೆಲ್ಸಿ, ಪಿಯುಸಿ, ಗ್ರಾಮ ಪಂಚಾಯಿತಿ ಸದಸ್ಯರಿಗೆ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

‘ಶೇ 4ರಷ್ಟಿರುವ ಜನ, ಶೇ 10ರಷ್ಟು ಮೀಸಲಾತಿಯನ್ನು ಯಾವುದೇ ಹೋರಾಟವಿಲ್ಲದೆ ಪಡೆದು ಅನುಭವಿಸುತ್ತಿದ್ದಾರೆ. ಆದರೆ ಶೇ 60ರಷ್ಟಿರುವ ಪರಿಶಿಷ್ಟ ಜಾತಿಯವರಿಗೆ ಶೇ 15ರಷ್ಟು ಮೀಸಲಾತಿ ನೀಡಿದ್ದು, ಅವಕಾಶಗಳಿಂದ ವಂಚಿತರಾಗುತ್ತಿದ್ದೇವೆ. ಈ ಬಗ್ಗೆ ಯುವ ಜನರಲ್ಲಿ ಜಾಗೃತಿ ಮೂಡಿಸಬೇಕು’ ಎಂದು ಸಲಹೆ ಮಾಡಿದರು.

ADVERTISEMENT

ಕಶಪ ಮಾತಂಗ ಮುನಿಯ ದಾರಿಯಲ್ಲಿ ಬುದ್ಧ, ಬಸವ, ಅಂಬೇಡ್ಕರ್ ಅವರಂತೆ ಪರಿಶಿಷ್ಟ ಜಾತಿಯ ಸಮುದಾಯ ನಡೆದಾಗ ಮಾತ್ರ ರಾಜಕೀಯ ಅಧಿಕಾರ ಪಡೆಯಲು ಸಾಧ್ಯ, ಅಂಬೇಡ್ಕರ್ ಆಶಯ ಸಹ ಬುದ್ಧನ ಹಾದಿಯಲ್ಲಿ ದೇಶದ ರಾಜಕಾರಣ ನಡೆಯಬೇಕು ಎಂಬುದಾಗಿತ್ತು. ಬುದ್ಧ, ಬಸವಣ್ಣ, ಅಂಬೇಡ್ಕರ್ ಅವರಂತೆ ಆತ್ಮವಿಮರ್ಶೆ ಮಾಡಿಕೊಳ್ಳಬೇಕು. ಹುಟ್ಟಿ, ಬೆಳೆದ ಪರಿಸರದ ಬಗ್ಗೆ ಕೀಳರಿಮೆಯಿಲ್ಲದೆ, ಅದನ್ನೇ ಒಪ್ಪಿಕೊಂಡು, ಅಪ್ಪಿಕೊಂಡು, ಸಮುದಾಯದ ಜತೆ ಬೆರೆತು ಕೆಲಸ ಮಾಡುವ ಧರ್ಮಗುರುಗಳು, ರಾಜಕಾರಣಿಗಳ ಅಗತ್ಯವಿದೆ ಎಂದು ಹೇಳಿದರು.

ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಬಿ.ಎಚ್.ಅನಿಲ್ ಕುಮಾರ್, ‘ಮಾದಿಗ ಸಮುದಾಯದ ಒಳಗಿರುವ ಒಡಕು ಸರಿಪಡಿಸಿಕೊಂಡು ರಾಜ್ಯಕ್ಕೆ ತುಮಕೂರು ಜಿಲ್ಲೆ ಮಾದರಿಯಾಗಿದೆ. ಇಂದು ಸಮುದಾಯಕ್ಕೆ ಗುರು ಇದ್ದಾರೆ, ಗುರಿಯೂ ಇದೆ. ಅದನ್ನು ಕಾರ್ಯಗತಗೊಳಿಸಲು ಸಮುದಾಯದ ಎಲ್ಲರೂ ಸಹಕಾರ ನೀಡಬೇಕು’ ಎಂದರು.

‘ಜಿಲ್ಲೆಯಲ್ಲಿ ಅತಿಹೆಚ್ಚು ಸಂಖ್ಯೆಯಲ್ಲಿ ಮಾದಿಗ ಸಮುದಾಯವಿದ್ದರೂ, ಅದನ್ನು ಶಕ್ತಿಯುತವಾಗಿ ಕಟ್ಟಲು ಯಾರು ಪ್ರಯತ್ನ ಮಾಡಿಲ್ಲ. 75 ವರ್ಷಗಳಲ್ಲಿ ಸರ್ಕಾರ ನೀಡಿರುವ ಸೌಲಭ್ಯಗಳನ್ನು ಸಮುದಾಯ ಪಡೆದುಕೊಂಡಿಲ್ಲ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಒಗ್ಗಟ್ಟಿನ ಹೋರಾಟ ಮಾಡಬೇಕಿದೆ’ ಎಂದು ತಿಳಿಸಿದರು.

ಶೋಷಿತ ಸಮುದಾಯಗಳ ಅಭಿವೃದ್ಧಿ ಶೋಷಿತರಿಂದ ಮಾತ್ರ ಸಾಧ್ಯ. ಬೇರೆ ಸಮುದಾಯಗಳು ಅಭಿವೃದ್ಧಿ ಮಾಡುತ್ತವೆ ಎನ್ನುವ ಭ್ರಮೆಯಿಂದ ಹೊರಬಂದು, ಒಟ್ಟಾಗಿ ಹೋರಾಟ ಮಾಡಿದಾಗ ಮಾತ್ರ ಸಾಧ್ಯ ಎನ್ನುವುದನ್ನು ಸಮುದಾಯ ಅರಿತುಕೊಳ್ಳಬೇಕು ಎಂದು ಎಚ್ಚರಿಸಿದರು.

ಲೇಖಕ ಪ್ರೊ.ಅರವಿಂದ ಮಾಲಗತ್ತಿ ಮಾತನಾಡಿ, ‘ಸಮುದಾಯ ಯಾವ ಕಡೆ ಇದೆ ಎನ್ನುವ ಪ್ರಶ್ನೆಯೇ ದಾರಿದೀಪವಾಗಿ, ಗುರುಗಳ ಮಾರ್ಗದರ್ಶನದಲ್ಲಿ ಸಮುದಾಯ ಅಭಿವೃದ್ಧಿಯಾಗಲಿದೆ’ ಎಂದರು.

ಮೇಲ್ವರ್ಗದವರು ಬರೆಯುವಾಗ ತಳ ಸಮುದಾಯಗಳ ಒಳ ಪಂಗಡಗಳ ಬಗ್ಗೆಉಲ್ಲೇಖಿಸದೆ ಕಡೆಗಣಿಸಲಾಗಿದೆ. ಯಜ್ಞದಲ್ಲಿ ಬಲಿ ನೀಡುತ್ತಿದ್ದ ಪ್ರಾಣಿಯ ಅಂಗಾಂಗವನ್ನು 36 ಭಾಗಮಾಡಿ, ಎಲ್ಲ ಜಾತಿಗಳಿಗೆ ನೀಡಲಾಗುತ್ತಿತ್ತು. ಮುಂದೆ ಅದೇ ಗೋವಿನಲ್ಲಿ 36 ಸಾವಿರ ಕೋಟಿ ದೇವರು ನೆಲೆಗೊಳ್ಳಲು ಕಾರಣವಾಯಿತು ಎಂದು ಹೇಳಿದರು.

ಮತಂಗ ಮುನಿಗಳು ರಾಜರಾಗಿ ಆಳಿದವರು. ಆದರೆ ಇಂದು ಮಾತಂಗ ಸಮುದಾಯ ಜೀತದವರಾಗಿದ್ದಾರೆ, ಎಡ– ಬಲದ ವರ್ಗೀಕರಣ ಸಾಂಪ್ರದಾಯಿಕವಾಗಿ ನೋಡಿದ್ದರಿಂದಾಗಿ ತಪ್ಪಾಗಿ ವ್ಯಾಖ್ಯಾನಿಸಲಾಗಿದೆ ಎಂದರು.

ಬಿಜೆಪಿ ಮುಖಂಡ ಗಂಗಹನುಮಯ್ಯ, ಜೆಡಿಎಸ್ ಮುಖಂಡ ಕೆ.ಎಂ.ತಿಮ್ಮರಾಯಪ್ಪ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾರ ವೈ.ಎಚ್.ಹುಚ್ಚಯ್ಯ, ಕೆಂಚಮಾರಯ್ಯ, ರೇಷ್ಮೆ ಇಲಾಖೆ ಉಪನಿರ್ದೇಶಕ ಡಾ.ವೈ.ಕೆ.ಬಾಲಕೃಷ್ಣಪ್ಪ, ಡಾ.ಮುರುಳೀಧರ,ಮುಖಂಡರಾದ ಪಾವಗಡ ಶ್ರೀರಾಮ್, ಡಾ.ಓ.ನಾಗರಾಜು, ನರಸಿಂಹಮೂರ್ತಿ, ಶಿವನಂಜಪ್ಪ, ಮಾರುತಿ ಗಂಗಹನುಮಯ್ಯ, ವಾಲೆಚಂದ್ರಯ್ಯ, ನರಸೀಯಪ್ಪ, ಎಂ.ಸಿ.ನರಸಿಂಹಮೂರ್ತಿ, ಎಂಜನಿಯರ್ ಚಿಕ್ಕಣ್ಣ, ತೋಟಗಾರಿಕೆ ಇಲಾಖೆ ಚಿಕ್ಕಣ್ಣ, ರಂಗಶಾಮಯ್ಯ, ಯೋಗೀಶ್ ಸೋರೆಕುಂಟೆ, ಜಟ್ಟಿ ಅಗ್ರಹಾರ ನಾಗರಾಜು, ರಂಜನ್, ಗಣೇಶ್, ಗುರುಪ್ರಸಾದ್ ಕಂಟಲಗೆರೆ, ಲಕ್ಷ್ಮಿರಂಗಯ್ಯ, ಮುಕುಂದ್, ರಂಗಸ್ವಾಮಿ ಮೊದಲಾದವರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.