ADVERTISEMENT

ಎಕ್ಸ್‌ಪ್ರೆಸ್‌ ಕೆನಾಲ್‌ ಕಾಮಗಾರಿಗೆ ಸಿದ್ಧತೆ: ವಿರೋಧಕ್ಕೆ ಸ್ಥಳೀಯರು ಸಜ್ಜು

​ಪ್ರಜಾವಾಣಿ ವಾರ್ತೆ
Published 22 ಮೇ 2025, 15:20 IST
Last Updated 22 ಮೇ 2025, 15:20 IST
ಗುಬ್ಬಿ ತಾಲ್ಲೂಕಿನ ಸುಂಕಾಪುರದ ಬಳಿ ಸಂಪರ್ಕ ಕಾಲುವೆ ನಿರ್ಮಾಣ ಜಾಗದಲ್ಲಿ ಬ್ಯಾರಿಕೇಡ್ ಹಾಕಲಾಗಿದೆ
ಗುಬ್ಬಿ ತಾಲ್ಲೂಕಿನ ಸುಂಕಾಪುರದ ಬಳಿ ಸಂಪರ್ಕ ಕಾಲುವೆ ನಿರ್ಮಾಣ ಜಾಗದಲ್ಲಿ ಬ್ಯಾರಿಕೇಡ್ ಹಾಕಲಾಗಿದೆ   

ಗುಬ್ಬಿ: ತಾಲ್ಲೂಕಿನ ಸುಂಕಾಪುರದಲ್ಲಿ ಶುಕ್ರವಾರದಿಂದ ಎಕ್ಸ್‌ಪ್ರೆಸ್ ಕೆನಾಲ್‌ ನಿರ್ಮಾಣಕ್ಕೆ ಸರ್ಕಾರ ಮುಂದಾಗಿರುವುದನ್ನು ತಾಲ್ಲೂಕಿನ ರೈತರು ಹಾಗೂ ಸ್ಥಳೀಯರು ವಿರೋಧಿಸಿದ್ದಾರೆ.

ಸರ್ಕಾರದ ನಿರ್ದೇಶನದಂತೆ ಗುತ್ತಿಗೆದಾರರು ಈಗಾಗಲೇ ಅಗತ್ಯವಿರುವ ಪೈಪ್‌ಗಳನ್ನು ಕಾಮಗಾರಿ ನಡೆಸಲು ಉದ್ದೇಶಿಸಿರುವ ಸ್ಥಳಗಳಲ್ಲಿ ತಂದು ಸಂಗ್ರಹಿಸಿದ್ದಾರೆ.

ಪ್ರತಿಭಟನೆ ಹತ್ತಿಕ್ಕಲು ಸಾವಿರಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ. ಇದಕ್ಕೆ ಪೂರಕವಾಗುವಂತೆ ಗುರುವಾರ ಜಿಲ್ಲಾ ವರಿಷ್ಠಾಧಿಕಾರಿ ಕಾಮಗಾರಿ ಸ್ಥಳದಲ್ಲಿ ಅಗತ್ಯ ಬಂದೋಬಸ್ತ್ ಮಾಡಲು ಸಂಬಂಧಿಸಿದ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದಾರೆ. ಅಗತ್ಯವಿರುವೆಡೆ ಬಾರಿಕ್ಯಾಡ್‌ಗಳನ್ನು ನಿಲ್ಲಿಸಿ ಜನರ ಪ್ರವೇಶ ತಡೆಯಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.

ADVERTISEMENT

ಕಾಮಗಾರಿ ನಡೆಯುವ ಸುತ್ತಮುತ್ತಲಿನ ಗ್ರಾಮಸ್ಥರು, ರೈತರು ಹಾಗೂ ರಾಜಕೀಯ ಮುಖಂಡರು ಕಾಮಗಾರಿ ತಡೆಯಲು ಅಗತ್ಯ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಕಾಮಗಾರಿ ವಿರೋಧಿ ಹೋರಾಟಗಾರರು, ಮುಖಂಡರು ಸುತ್ತಮುತ್ತಲ ಗ್ರಾಮಗಳಲ್ಲಿ ಡಂಗೂರ ಸಾರಿಸಿ ಗ್ರಾಮಸ್ಥರು ಅಪಾರ ಸಂಖ್ಯೆಯಲ್ಲಿ ಕಾಮಗಾರಿ ಸ್ಥಳಕ್ಕೆ ಬರುವಂತೆ ತಿಳಿಸಿದ್ದಾರೆ.

ಯಾವುದೇ ಕಾರಣಕ್ಕೂ ಎಕ್ಸ್‌ಪ್ರೆಸ್ ಕೆನಾಲ್‌ ನಿರ್ಮಿಸಿ ನೀರು ತೆಗೆದುಕೊಂಡು ಹೋಗಲು ಬಿಡುವುದಿಲ್ಲ. ನೀರಿನ ಅಗತ್ಯವಿದ್ದಲ್ಲಿ ಪ್ರಸ್ತುತ ಇರುವ ನಾಲೆಯ ಮೂಲಕ ತೆಗೆದುಕೊಂಡು ಹೋಗಲಿ. ಸರ್ಕಾರ ತಾಲ್ಲೂಕು ಹಾಗೂ ಜಿಲ್ಲೆಯ ಹಿತ ಕಡೆಗಣಿಸಿ ನೀರು ತೆಗೆದುಕೊಂಡು ಹೋಗಲು ಮುಂದಾಗಿರುವ ಜೊತೆಗೆ ಅವೈಜ್ಞಾನಿಕವಾಗಿ ನಾಲೆ ನಿರ್ಮಿಸುತ್ತಿರುವುದು ಖಂಡನೀಯ. ಯಾವುದೇ ಕಾರಣಕ್ಕೂ ನೀರು ತೆಗೆದುಕೊಂಡು ಹೋಗಲು ಬಿಡುವುದಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಾಲ್ಲೂಕಿನ ಜೀವನಾಡಿಯಾಗಿರುವ ಹೇಮಾವತಿ ನಾಲೆಯಿಂದ ಎಕ್ಸ್‌ಪ್ರೆಸ್ ಕೆನಾಲ್‌ ನಿರ್ಮಿಸಲು ಬಿಟ್ಟಲ್ಲಿ ಮುಂದಿನ ದಿನಗಳಲ್ಲಿ ಹೆಚ್ಚಿನ ತೊಂದರೆ ಅನುಭವಿಸಬೇಕಾಗುವುದು. ಪ್ರಸ್ತುತ ಕಾಮಗಾರಿ ತಡೆಯದಿದ್ದರೆ ಸಂಕಷ್ಟ ಎದುರಿಸಬೇಕಾಗುತ್ತದೆ. ಕಾಮಗಾರಿ ಹತ್ತಿಕ್ಕುವ ನಿಟ್ಟಿನಲ್ಲಿ ಶುಕ್ರವಾರ ತಾಲ್ಲೂಕಿನ ರೈತರು ಅಪಾರ ಸಂಖ್ಯೆಯಲ್ಲಿ ಕಾಮಗಾರಿ ಸ್ಥಳಕ್ಕೆ ಮುತ್ತಿಗೆ ಹಾಕಿ ಕಾಮಗಾರಿ ತಡೆಯಲು ಉದ್ದೇಶಿಸಿದ್ದೇವೆ ಎಂದು ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ವೆಂಕಟೇಗೌಡ ತಿಳಿಸಿದರು.

ಸಾಕಷ್ಟು ವಿರೋಧದ ನಡುವೆಯೂ ಸರ್ಕಾರ ಎಕ್ಸ್‌ಪ್ರೆಸ್ ಕೆನಾಲ್‌ ನಿರ್ಮಾಣಕ್ಕೆ ಮುಂದಾಗಿರುವುದು ದುರಾದೃಷ್ಟಕರ. ಜಿಲ್ಲೆಯ ಜನರ ಹಿತಕ್ಕಾಗಿ ಯಾವುದೇ ಹೋರಾಟಕ್ಕೂ ಸಿದ್ಧ. ಕಾಮಗಾರಿ ಮಾಡಲು ಉದ್ದೇಶಿಸಿರುವ ಸುಂಕಾಪುರದ ಬಳಿಗೆ ಶುಕ್ರವಾರ ಬೆಳಿಗ್ಗೆ ಅಪಾರ ಸಂಖ್ಯೆಯಲ್ಲಿ ಸುತ್ತಮುತ್ತಲಿನ ಗ್ರಾಮಸ್ಥರು, ರೈತರು, ರಾಜಕೀಯ ಮುಖಂಡರು ತೆರಳಬೇಕು ಎಂದು ಮುಖಂಡ ಸೊಗಡು ಶಿವಣ್ಣ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.