ADVERTISEMENT

ಬರಮುಕ್ತ ಜಿಲ್ಲೆ ಮಾಡುವಲ್ಲಿ ವಿಫಲ

ಕೆ.ಆರ್‌.ಎಸ್‌.ಪಕ್ಷ ಬೆಂಬಲಿತ ಪಕ್ಷೇತರ ಅಭ್ಯರ್ಥಿ ಬಿ.ಎಸ್‌.ಮಲ್ಲಿಕಾರ್ಜುನಯ್ಯ ಆರೋಪ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2019, 17:40 IST
Last Updated 11 ಏಪ್ರಿಲ್ 2019, 17:40 IST
ಬಿ.ಎಸ್‌.ಮಲ್ಲಿಕಾರ್ಜುನಯ್ಯ
ಬಿ.ಎಸ್‌.ಮಲ್ಲಿಕಾರ್ಜುನಯ್ಯ   

ತುಮಕೂರು: ‘ಹಿರಿಯ ರಾಜಕಾರಣಿಗಳು ತಾವಷ್ಟೇ ಚುನಾವಣೆಯಲ್ಲಿ ಸ್ಪರ್ಧಿಸುವ ಬದಲು ಸ್ಥಳೀಯರು, ಕೃಷಿಕರು ಹಾಗೂ ಯುವ ಜನರಿಗೂ ಸ್ಪರ್ಧಿಸಲು ಅವಕಾಶ ಮಾಡಿಕೊಡುವ ಮೂಲಕ ಚುನಾವಣೆಯಿಂದ ಹಿಂದೆ ಸರಿಯಿರಿ’ ಎಂದು ಕೆ.ಆರ್‌.ಎಸ್‌. ಪಕ್ಷ ಬೆಂಬಲಿತ ಪಕ್ಷೇತರ ಅಭ್ಯರ್ಥಿ ಬಿ.ಎಸ್‌.ಮಲ್ಲಿಕಾರ್ಜುನಯ್ಯ ಒತ್ತಾಯಿಸಿದರು.

ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ದೇವೇಗೌಡರ ಕುಟುಂಬ ಒಂದೇ ಕುಟುಂಬ ರಾಜಕಾರಣ ಮಾಡುತ್ತಿಲ್ಲ. ಎಲ್ಲ ಪಕ್ಷದವರೂ ಅದೇ ಹಾದಿಯಲ್ಲಿದ್ದಾರೆ’ ಎಂದು ಆರೋಪಿಸಿದರು.

‘ಕಾಂಗ್ರೆಸ್‌ನಿಂದ ಮಾಜಿ ಸಚಿವ ಟಿ.ಬಿ.ಜಯಚಂದ್ರ ಹಾಗೂ ಕೆ.ಎನ್‌.ರಾಜಣ್ಣ ಅವರು ತಮ್ಮ ಮಕ್ಕಳನ್ನು ರಾಜಕೀಯಕ್ಕೆ ತರುತ್ತಿದ್ದಾರೆ. ಇವರದ್ದು ಕುಟುಂಬ ರಾಜಕಾರಣ ಅಲ್ಲವೇ. ಯಾರೂ ಕುಟುಂಬ ರಾಜಕಾರಣದಿಂದ ಹಿಂದೆಸರಿದಿಲ್ಲ’ ಎಂದು ಟೀಕಿಸಿದರು.

ADVERTISEMENT

‘ಚುನಾವಣೆ ಸಂದರ್ಭದಲ್ಲಿ ಮಾತ್ರ ಎಲ್ಲ ಜನಪ್ರತಿನಿಧಿಗಳಿಗೆ ಸಮಸ್ಯೆಗಳು ಕಣ್ಣು ಮುಂದೆ ಕಾಣುತ್ತವೆ. ಆಗ ಮಾತ್ರ ನೀರಾವರಿ ಬಗ್ಗೆ ಮಾತನಾಡುತ್ತಾರೆ. ಬಳಿಕ ನಮಗೂ ಅದಕ್ಕೂ ಸಂಬಂಧವಿಲ್ಲದವರಂತೆ ಮನೆಯಲ್ಲಿ ಮಲಗುತ್ತಾರೆ’ ಎಂದು ಆರೋಪಿಸಿದರು.

ಹಸಿರು ಕ್ರಾಂತಿಯ ಉಪ ಉತ್ಪನ್ನವಾಗಿ ದೇವೇಗೌಡ ಅವರು ರೈತ ರಾಜಕಾರಣ ಮಾಡಿಕೊಂಡು ಬಂದಿದ್ದಾರೆ. ಇದರಿಂದ ಇವರ ಕುಟುಂಬ ಬೆಳೆವಣಿಗೆ ಬಿಟ್ಟರೆ, ರೈತರಿಗೆ ಯಾವ ಫಲ ಸಿಕ್ಕಿಲ್ಲ ಎಂದು ಟೀಕಿಸಿದರು.

ಪಶುಪಾಲನೆಯಲ್ಲಿ ತುಮಕೂರು ರಾಜ್ಯದಲ್ಲಿ ಪ್ರಥಮ ಸ್ಥಾನದಲ್ಲಿದೆ. ಗೋಮಾತೆ ಬಗ್ಗೆ ಮಾತನಾಡುವವರು ಜಿಲ್ಲೆಯ ಪಶುಗಳಿಗೆ ಆಹಾರ ಒದಗಿಸಲು ಆಗಿಲ್ಲ. ಸತತ 20 ವರ್ಷಗಳಿಂದ ಜಿಲ್ಲೆ ಬರಗಾಲಕ್ಕೆ ತುತ್ತಾಗಿದ್ದರೂ ಬರಮುಕ್ತ ಮಾಡಲು ಯಾರಿಗೂ ಆಗಿಲ್ಲ. ದೇವೇಗೌಡ ಹಾಗೂ ಅವರ ಸೊಸೆ ಅನಿತಾ ಕುಮಾರಸ್ವಾಮಿ ಅವರ ಕೊಡುಗೆ ಏನು ಎಂಬುದನ್ನು ಮತದಾರರು ಗಮನಿಸಬೇಕಿದೆ ಎಂದು ಹೇಳಿದರು.

ಜಿಲ್ಲೆಯಲ್ಲಿ ನೀರಾವರಿ ಹಾಗೂ ಪವರ್‌ಗ್ರಿಡ್‌ ಕಾಮಗಾರಿಗಳಿಗಾಗಿ ರೈತರಿಂದ ಬಲವಂತವಾಗಿ ಜಮೀನು ವಶಪಡಿಸಿಕೊಳ್ಳಲಾಗಿದೆ. ಅದಕ್ಕೂ ಈವರೆಗೂ ಪರಿಹಾರ ಧನ ನೀಡದೆ ಇರುವುದು ವಿಷಾದನೀಯ ಎಂದರು.

ಮತ ಹಾಕದಿದ್ದರೆ ಪಡಿತರ ಚೀಟಿ ಸೇರಿ ಇನ್ನಿತರ ಸೌಲಭ್ಯಗಳನ್ನು ನೀಡುವುದಿಲ್ಲ ಎಂದು ಜಿಲ್ಲೆಯಲ್ಲಿ ಮತದಾರರಿಗೆ ಬೆದರಿಸಿ ಮತ ಹಾಕಿಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.

ಮುಖಂಡರಾದ ಬಿ.ಸಿ.ಮಲ್ಲಿಕಾರ್ಜುನಯ್ಯ, ನಾಗಭೂಷಣ್, ತಿಮ್ಮಯ್ಯ, ಡಮರುಗ ಮಹೇಶ್‌ ಗೋಷ್ಠಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.