ADVERTISEMENT

ಎಚ್‌ಎಎಲ್‌ ಘಟಕ ಉದ್ಘಾಟನೆಗೂ ಮುನ್ನ ಸಂತ್ರಸ್ತ ರೈತರ ಬೇಡಿಕೆ ಈಡೇರಿಸಲು ಆಗ್ರಹ

2019ರಲ್ಲಿ ಗುಬ್ಬಿ ಎಚ್ಎಎಲ್ ಘಟಕ ಉದ್ಘಾಟನೆ ಸೂಚನೆ ನೀಡಿದ ಪ್ರಧಾನಿ, ಜಿಲ್ಲಾಧಿಕಾರಿ ಸರ್ಕಾರದ ಗಮನ ಸೆಳೆಯಲು ಮಾಜಿ ಸಂಸದ ಜಿ.ಎಸ್.ಬಸವರಾಜ್ ಒತ್ತಾಯ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2018, 12:51 IST
Last Updated 22 ಅಕ್ಟೋಬರ್ 2018, 12:51 IST
ಜಿ.ಎಸ್.ಬಸವರಾಜ್
ಜಿ.ಎಸ್.ಬಸವರಾಜ್   

ತುಮಕೂರು: 'ಜಿಲ್ಲೆಯ ಗುಬ್ಬಿ ತಾಲ್ಲೂಕಿನ ಬಿದರೆಹಳ್ಳಿ ಕಾವಲ್‌ನಲ್ಲಿ ‘ಹಿಂದೂಸ್ತಾನ್ ಎರೋನಾಟಿಕ್ಸ್ ಲಿಮಿಟೆಡ್ (ಎಚ್ಎಎಲ್) ಕಂಪನಿಯ ಹೆಲಿಕಾಪ್ಟರ್ ತಯಾರಿಕಾ ಘಟಕವನ್ನು ಪ್ರಧಾನಿ ನರೇಂದ್ರ ಮೋದಿ ಅವರು 2019ರಲ್ಲಿ ಉದ್ಘಾಟನೆ ಮಾಡಲಿದ್ದು, ಅಷ್ಟರೊಳಗೆ ರೈತರ ಎಲ್ಲ ಬೇಡಿಕೆಗಳನ್ನು ಈಡೇರಿಸುವಲ್ಲಿ ಜಿಲ್ಲಾಧಿಕಾರಿ ಸರ್ಕಾರಕ್ಕೆ ಮನವರಿಕೆ ಮಾಡಿಕೊಡಬೇಕು' ಎಂದು ಮಾಜಿ ಸಂಸದ ಜಿ.ಎಸ್.ಬಸವರಾಜ್ ಒತ್ತಾಯ ಮಾಡಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಗುಬ್ಬಿ ಎಚ್ಎಎಲ್ ಘಟಕ ಪ್ರದೇಶದಲ್ಲಿ ಈಗಾಗಲೇ ಒಂದು ಕಟ್ಟಡವನ್ನು ಅಧಿಕಾರಿಗಳೇ ಸಾಂಕೇತಿಕವಾಗಿ ಉದ್ಘಾಟಿಸಿದ್ದಾರೆ. ಹೀಗಾಗಿ, 2019ರ ವೇಳೆಗೆ ಎಚ್ಎಎಲ್ ಘಟಕ ಉದ್ಘಾಟನೆ ಮಾಡುವ ಸೂಚನೆ ನೀಡಿದ್ದಾರೆ’ ಎಂದು ತಿಳಿಸಿದರು.

‘ಹೆಲಿಕಾಪ್ಟರ್ ಘಟಕ ಬರಲು ರೈತರು, ಆ ಭಾಗದ ಜನರ ಸಹಕಾರ ದೊಡ್ಡದಿದೆ. ಎಲ್ಲ ರೈತರಿಗೂ ಉಚಿತ ನಿವೇಶನ ಪತ್ರ ನೀಡಬೇಕು, ಅಗತ್ಯವಿದ್ದವರಿಗೆ ಹೌಸಿಂಗ್ ಫಾರ್ ಆಲ್–2022 ಯೋಜನೆಯಡಿ ಮನೆಗಳನ್ನು ನಿರ್ಮಿಸಿ ಕೊಡಬೇಕು ಎಂಬ ಬೇಡಿಕೆಗಳನ್ನು ಈಗಾಗಲೇ ಸರ್ಕಾರದ ಮುಂದಿಡಲಾಗಿದೆ’ ಎಂದು ತಿಳಿಸಿದರು.

ADVERTISEMENT

’ಘಟಕದ ಸುತ್ತಲಿರುವ ಎಲ್ಲ ಗ್ರಾಮಗಳಿಗೂ ಜನರ ಬೇಡಿಕೆಯಂತೆ ಎಚ್.ಎ.ಎಲ್‌ ವತಿಯಿಂದ ಕಾರ್ಪೊರೇಟ್ ಸಂಸ್ಥೆಗಳ ಸಾಮಾಜಿಕ ಹೊಣೆಗಾರಿಕೆಯಡಿ (ಸಿಎಸ್‌ಆರ್ ಫಂಡ್) ಅಭಿವೃದ್ಧಿ ಕಾಮಗಾರಿಗಳನ್ನು ಸಹ ಎಚ್.ಎ.ಎಲ್ ಘಟಕದ ಉದ್ಘಾಟನೆ ವೇಳೆಗೆ ಚಾಲನೆ ನೀಡಬೇಕು ಎಂದು ನಿಯೋಗದಲ್ಲಿ ತೆರಳಿ ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಂ ಅವರಿಗೆ ಮನವರಿಕೆ ಮಾಡಿಕೊಡಲಾಗುವುದು’ ಎಂದು ತಿಳಿಸಿದರು.

’ವಿಶೇಷವಾಗಿ ಅಲ್ಲಿನ ಅಕ್ಕಪಕ್ಕದ ಕೆರೆಗಳಿಗೆ ಹೇಮಾವತಿ ನೀರು ಮತ್ತು ಸಮಗ್ರ ಅಭಿವೃದ್ಧಿಗೆ ಚಾಲನೆ ನೀಡಲೇಬೇಕಿದೆ’ ಎಂದು ಹೇಳಿದರು.

ಸ್ಥಳೀಯರಿಗೆ ಉದ್ಯೋಗವಕಾಶಕ್ಕೆ ಮನವಿ: ’ಕೇಂದ್ರ ಸರ್ಕಾರದ ಯಾವುದೇ ಯೋಜನೆಯಾದರೂ ಭೂಮಿ ಕಳೆದುಕೊಂಡವರಿಗೆ ಮತ್ತು ಸ್ಥಳೀಯರಿಗೆ ಉದ್ಯೋಗ ನೀಡಲು ಲೋಕಸಭೆ ಮತ್ತು ರಾಜ್ಯ ಸಭೆಗಳಲ್ಲಿ ಚರ್ಚೆ ಮಾಡಲು ಪಕ್ಷಾತೀತವಾಗಿ ದೇಶದ ಎಲ್ಲ ಸಂಸದರಿಗೆ ಅಭಿವೃದ್ಧಿ ರೆವಲ್ಯೂಷನ್ ಫೋರಂನಿಂದ ಪತ್ರ ಬರೆದು ಮನವಿ ಮಾಡಲಾಗುವುದು’ ಎಂದು ತಿಳಿಸಿದರು.

ಎಚ್ಎಎಲ್ ಹೆಲಿಕಾಪ್ಟರ್ ಘಟಕ ಬರಲು ಸಹಕರಿಸಿದವರಿಗೆಲ್ಲ ಸಾರ್ವಜನಿಕ ಸನ್ಮಾನ ಮಾಡಲಾಗುವುದು. ಸರ್ಕಾರಿ ಭೂಮಿಯಾದರೂ ಉಳುಮೆ ಮಾಡಿ ಬಿಟ್ಟುಕೊಟ್ಟ ರೈತರಿಗೆ ಸನ್ಮಾನ ಮಾಡಲಾಗುವುದು ಎಂದು ಹೇಳಿದರು.

ಕುಂದರನಹಳ್ಳಿ ರಮೇಶ್, ಶಿವರುದ್ರಪ್ಪ, ಹೊನ್ನೇಶಕುಮಾರ್ ಗೋಷ್ಠಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.