ADVERTISEMENT

ದೌರ್ಜನ್ಯ ಪ್ರಕರಣ ವಿಚಾರಣೆ ನ್ಯಾಯ ಸಮ್ಮತವಾಗಿರಲಿ

ಪರಿಶಿಷ್ಟ ಜಾತಿಗಳ ರಾಷ್ಟ್ರೀಯ ಆಯೋಗದ ಉಪಾಧ್ಯಕ್ಷ ಮುರುಗನ್ ಪತ್ರಿಕಾಗೋಷ್ಠಿಯಲ್ಲಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2018, 13:39 IST
Last Updated 26 ಅಕ್ಟೋಬರ್ 2018, 13:39 IST
ಮುರುಗನ್
ಮುರುಗನ್   

ತುಮಕೂರು: ‘ಪರಿಶಿಷ್ಟ ಜಾತಿ ಜನರ ಮೇಲಿನ ದೌರ್ಜನ್ಯ(ಅಟ್ರಾಸಿಟಿ) ಪ್ರಕರಣಗಳ ವಿಚಾರಣೆಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಮುಕ್ತ ಮತ್ತು ನ್ಯಾಯ ಸಮ್ಮತವಾಗಿ ನಡೆಸಬೇಕು. ಸಾಕ್ಷಿಗಳಿಗೆ ಸೂಕ್ತ ಭದ್ರತೆ ಒದಗಿಸಬೇಕು. ಈ ಪ್ರಕರಣಗಳ ಪ್ರಗತಿಯನ್ನು ಜಿಲ್ಲಾಧಿಕಾರಿ ಕಾಲ ಕಾಲಕ್ಕೆ ಪರಿಶೀಲನೆ ನಡೆಸಬೇಕು ಎಂದು ಸೂಚಿಸಲಾಗಿದೆ’ ಎಂದು ಪರಿಶಿಷ್ಟ ಜಾತಿಗಳ ರಾಷ್ಟ್ರೀಯ ಆಯೋಗದ ಉಪಾಧ್ಯಕ್ಷ ಮುರುಗನ್ ಹೇಳಿದರು.

ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆ ನಡೆಸಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಮೂರು ಪರಿಶಿಷ್ಟ ಜಾತಿ ದೌರ್ಜನ್ಯ ಪ್ರಕರಣಗಳಲ್ಲಿ ಆರೋಪಿಗಳು ನಿರ್ದೋಷಿಗಳಾಗಿದ್ದಾರೆ. ಯಾರಿಗೂ ಶಿಕ್ಷೆಯಾಗಿಲ್ಲ ಎಂದು ವರದಿ ಸಲ್ಲಿಸಲಾಗಿದೆ ಎಂದು ಹೇಳಿದರು.

ADVERTISEMENT

ಜಿಲ್ಲೆಯಲ್ಲಿ 150 ಕ್ವಾರಿಗಳಿದ್ದು, ಇವುಗಳಲ್ಲಿ ವಲಸೆ, ಗುತ್ತಿಗೆ ಕಾರ್ಮಿಕರು, ಬಾಲ ಕಾರ್ಮಿಕರು ಎಷ್ಟು ಜನ ಕೆಲಸ ಮಾಡುತ್ತಿದ್ದಾರೆ? ಅವರಿಗೆ ಕಾರ್ಮಿಕ ಕಾಯ್ದೆ ಪ್ರಕಾರ ಸೌಕರ್ಯಗಳನ್ನು ಕಲ್ಪಿಸಲಾಗಿದೆಯೇ ಎಂಬುದನ್ನು ಪರಿಶೀಲನೆ ನಡೆಸಲು ಕಾರ್ಯಪಡೆ ರಚನೆ ಮಾಡಲು ಜಿಲ್ಲಾಧಿಕಾರಿಗೆ ಸೂಚಿಸಲಾಗಿದೆ ಎಂದು ಹೇಳಿದರು.

ವಿಶೇಷ ಘಟಕ ಯೋಜನೆಯಡಿ ಲಭಿಸಿದ ಅನುದಾನದಲ್ಲಿ ಸಮರ್ಪಕವಾಗಿ ಕೆಲಸ ಮಾಡದೇ ಆಯೋಗಕ್ಕೂ ತಪ್ಪು ಮಾಹಿತಿ ನೀಡಿದ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ನೋಟಿಸ್ ಕೊಡಲು ಜಿಲ್ಲಾಧಿಕಾರಿಗೆ ಆದೇಶಿಸಿದ್ದೇನೆ. ಹಾಗೆಯೇ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ವಿಶೇಷ ಘಟಕ ಯೋಜನೆಯಡಿ ಶೇ 82ರಷ್ಟು ಅನುದಾನ ಲಭಿಸಿದೆ. ಆದರೆ, ನಿರೀಕ್ಷಿತ ಮಟ್ಟದಲ್ಲಿ ಕೆಲಸ ಆಗಿಲ್ಲ. ಈ ಬಗ್ಗೆ ಸಮಗ್ರ ಮಾಹಿತಿ ಸಲ್ಲಿಸಲು ಸೂಚಿಸಿದ್ದೇನೆ ಎಂದು ಹೇಳಿದರು.

ಪರಿಶಿಷ್ಟ ಜಾತಿಯವರಿಗೆ ಪ್ರವಾಸೋದ್ಯಮ ಇಲಾಖೆಯಿಂದ ಒದಗಿಸಿದ ಟೂರಿಸ್ಟ್ ಟ್ಯಾಕ್ಸಿಗಳನ್ನು ಜಿಲ್ಲಾಡಳಿತವು ಅಗತ್ಯಕ್ಕನುಗುಣವಾಗಿ ಗುತ್ತಿಗೆ ಆಧಾರದ ಮೇಲೆ ಬಳಸಿಕೊಂಡರೆ ಸಂಬಂಧಪಟ್ಟ ಫಲಾನುಭವಿಗಳ ಜೀವನಕ್ಕೆ ಸಹಾಯವಾಗುತ್ತದೆ. ಈ ದಿಶೆಯಲ್ಲಿ ಗಮನಹರಿಸಬೇಕು ಎಂದು ತಿಳಿಸಲಾಗಿದೆ ಎಂದು ತಿಳಿಸಿದರು.

ಪರಿಶಿಷ್ಟ ಜಾತಿ ಜನರ ಮೇಲಿನ ದೌರ್ಜನ್ಯಕ್ಕೆ (ಅಟ್ರಾಸಿಟಿ) ಸಂಬಂಧಪಟ್ಟ 14 ಪ್ರಕರಣಗಳಲ್ಲಿ ಮರಣ ಸಂಭವಿಸಿದ್ದು, ಎಲ್ಲ ಪ್ರಕರಣಗಳಲ್ಲಿ ಅವಲಂಬಿತ ಕುಟುಂಬಗಳಿಗೆ ಈಗಾಗಲೇ ಪರಿಹಾರ ಧನ ನೀಡಲಾಗಿದೆ. ಹೊಸ ಕಾಯ್ದೆಯನ್ವಯ 2 ಎಕರೆ ಜಮೀನು, ಉಚಿತ ಶಿಕ್ಷಣ, ಹೆಚ್ಚುವರಿ ಪರಿಹಾರ ಧನ ನೀಡಲು 2 ತಿಂಗಳಲ್ಲಿ ಕ್ರಮ ಕೈಗೊಳ್ಳಬೇಕು. ಸರ್ಕಾರದ ಜೊತೆಗೆ ಚರ್ಚಿಸಿ ಮೂರು ತಿಂಗಳಲ್ಲಿ ಸರ್ಕಾರಿ ಕೆಲಸವನ್ನು ದೊರಕಿಸಿಕೊಡಲು ಜಿಲ್ಲಾಧಿಕಾರಿಗೆ ಸೂಚಿಸಿದ್ದೇನೆ ಎಂದು ಹೇಳಿದರು.

ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್‌ಕುಮಾರ್, ಡಾ.ದಿವ್ಯಾ ಗೋಪಿನಾಥ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.