ADVERTISEMENT

ಶಿರಾ: ಪೊಲೀಸರ ರಕ್ಷಣೆಯಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2023, 5:46 IST
Last Updated 19 ನವೆಂಬರ್ 2023, 5:46 IST
ಶಿರಾದ ವೈದ್ಯರ ಭವನದಲ್ಲಿ ಶನಿವಾರ ನಡೆದ ಸರ್ಕಾರಿ ಆಸ್ಪತ್ರೆಯ ಪ್ರಗತಿ ಪರಿಶೀಲನಾ ಸಭೆಯ ಹಿನ್ನೆಲೆಯಲ್ಲಿ ಕಟ್ಟದ ಮುಂದೆ ಜಮಾಯಿಸಿದ್ದ ಜನ
ಶಿರಾದ ವೈದ್ಯರ ಭವನದಲ್ಲಿ ಶನಿವಾರ ನಡೆದ ಸರ್ಕಾರಿ ಆಸ್ಪತ್ರೆಯ ಪ್ರಗತಿ ಪರಿಶೀಲನಾ ಸಭೆಯ ಹಿನ್ನೆಲೆಯಲ್ಲಿ ಕಟ್ಟದ ಮುಂದೆ ಜಮಾಯಿಸಿದ್ದ ಜನ   

ಶಿರಾ: ನಗರದಲ್ಲಿ ಶನಿವಾರ ನಡೆದ ಸರ್ಕಾರಿ ಆಸ್ಪತ್ರೆಯ ಪ್ರಗತಿ ಪರಿಶೀಲನಾ ಸಭೆಯನ್ನು ಮಾಧ್ಯಮದವರನ್ನು ದೂರವಿಟ್ಟು, ಪೊಲೀಸರ ರಕ್ಷಣೆಯಲ್ಲಿ ನಡೆಸಿದ್ದು ಕುತೂಹಲಕ್ಕೆ ಕಾರಣವಾಯಿತು.

ನಗರದಲ್ಲಿರುವ ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಹಾಗೂ ತಾಯಿ ಮತ್ತು ಮಗು ಆಸ್ಪತ್ರೆಯನ್ನು ವಿಲೀನಗೊಳಿಸಬೇಕು ಎನ್ನುವ ಕೂಗು ಕೇಳಿ ಬರುತ್ತಿದ್ದು, ಶಾಸಕರು ಸಹ ಎರಡು ಆಸ್ಪತ್ರೆಗಳ ವಿಲೀನಕ್ಕೆ‌ ಮುಂದಾಗಿದ್ದಾರೆ. ಈ ವಿಚಾರವಾಗಿ ರಾಜಕೀಯ ಮುಖಂಡರು ಮತ್ತು ಸಾರ್ವಜನಿಕರು ಪರ ಮತ್ತು ವಿರೋಧ ವ್ಯಕ್ತಪಡಿಸುತ್ತಿದ್ದು ಶಾಸಕರ ಮೇಲೆ ಒತ್ತಡ ತರುತ್ತಿದ್ದರಿಂದ ಸಭೆಗೆ ಹೆಚ್ಚು ಮಹತ್ವ ಬಂದಿತ್ತು.

ನಗರದ ವೈದ್ಯರ ಭವನದಲ್ಲಿ ಸಭೆ ನಡೆಯುತ್ತಿದ್ದ ಹಿನ್ನೆಲೆಯಲ್ಲಿ ಭವನದ ಮುಂದೆ ಜನರು ಗುಂಪು ಸೇರಿದ್ದರು. ಯಾರನ್ನು ಒಳಗೆ ಬಿಡದೆ ಪೊಲೀಸರು ಹೊರಗೆ ತಡೆದ ನಂತರ ಒಳಗೆ ಸಭೆ ನಡೆಸಿದರು.

ADVERTISEMENT

ಪ್ರಗತಿ ಪರಿಶೀಲನಾ ಸಭೆ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಶಾಸಕ ಟಿ.ಬಿ.ಜಯಚಂದ್ರ, ‘ಸಾರ್ವಜನಿಕ ಆಸ್ಪತ್ರೆ ಹಾಗೂ ತಾಯಿ ಮತ್ತು ಮಗು ಆಸ್ಪತ್ರೆಯಲ್ಲಿರುವ ವೈದ್ಯಾಧಿಕಾರಿಗಳು ಮತ್ತು ವೈದ್ಯರ ನಡುವೆ ಸಹಮತವಿಲ್ಲ. ಈ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬರುತ್ತಿವೆ. ಹಾಗಾಗಿ ಪೊಲೀಸರ ರಕ್ಷಣೆಯಲ್ಲಿ ಸಭೆ ನಡೆಸಬೇಕಾಗಿದೆ’ ಎಂದು ಸ್ಪಷ್ಟಪಡಿಸಿದರು.

‘ವೈದ್ಯರು ವೈಯಕ್ತಿಕ ಪ್ರತಿಷ್ಠೆ ಹಾಗೂ ರಾಜಕೀಯ ಮಾಡುವುದನ್ನು ಬಿಟ್ಟು ಜನರ ಸೇವೆ ಮಾಡಬೇಕು. ಆಸ್ಪತ್ರೆ ವಿಲೀನದ ಸಾಧಕ, ಬಾಧಕಗಳ ಬಗ್ಗೆ ಸಭೆಯಲ್ಲಿ ಚರ್ಚಿಸಿ ವರದಿ ನೀಡುವಂತೆ ತಿಳಿಸಲಾಗಿದೆ. ವರದಿ ನೀಡಿದ ನಂತರ ಬೆಂಗಳೂರಿನಲ್ಲಿರುವ ನನ್ನ ಕಚೇರಿಯಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿಗಳ ಜೊತೆ ಚರ್ಚೆ ನಡೆಸಿ, ಆಸ್ಪತ್ರೆ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು’ ಎಂದರು.

ಸಭೆಯಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಮಂಜುನಾಥ್, ಡಾ.ವೀಣಾ, ತಾಲ್ಲೂಕು ವೈದ್ಯಾಧಿಕಾರಿ ಡಾ.ಸಿದ್ದೇಶ್ವರ್, ಸಾರ್ವಜನಿಕ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ಶ್ರೀನಾಥ್, ತಾಯಿ ಮತ್ತು ಮಗು ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ಡಿ.ಎಂ.ಗೌಡ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.