ADVERTISEMENT

ಚೆಕ್‍ಡ್ಯಾಂ ನಿರ್ಮಾಣ; ಹಾಗಲವಾಡಿ ರೈತರ ವಿರೋಧ

​ಪ್ರಜಾವಾಣಿ ವಾರ್ತೆ
Published 1 ಜೂನ್ 2020, 17:29 IST
Last Updated 1 ಜೂನ್ 2020, 17:29 IST
ಗುಬ್ಬಿ ತಾಲ್ಲೂಕು ಹಾಗಲವಾಡಿ ದೊಡ್ಡಕೆರೆಗೆ ನೈಸರ್ಗಿಕವಾಗಿ ಹರಿದು ಬರುವ ನೀರಿಗೆ ಅಡ್ಡಲಾಗಿ ಚೆಕ್‍ಡ್ಯಾಂ ನಿರ್ಮಿಸಲು ಮುಂದಾಗಿರುವ ಸರ್ಕಾರದ ಕ್ರಮವನ್ನು ಖಂಡಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸದಸ್ಯರು ತುಮಕೂರು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು
ಗುಬ್ಬಿ ತಾಲ್ಲೂಕು ಹಾಗಲವಾಡಿ ದೊಡ್ಡಕೆರೆಗೆ ನೈಸರ್ಗಿಕವಾಗಿ ಹರಿದು ಬರುವ ನೀರಿಗೆ ಅಡ್ಡಲಾಗಿ ಚೆಕ್‍ಡ್ಯಾಂ ನಿರ್ಮಿಸಲು ಮುಂದಾಗಿರುವ ಸರ್ಕಾರದ ಕ್ರಮವನ್ನು ಖಂಡಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸದಸ್ಯರು ತುಮಕೂರು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು   

ತುಮಕೂರು: ಗುಬ್ಬಿ ತಾಲ್ಲೂಕು ಹಾಗಲವಾಡಿ ದೊಡ್ಡಕೆರೆಗೆ ನೈಸರ್ಗಿಕವಾಗಿ ನೀರು ಹರಿದು ಬರುತ್ತಿದ್ದು, ಇಲ್ಲಿನ ರಾಜಗಾಲುವೆಗೆ ಅಡ್ಡಲಾಗಿ ಚೆಕ್‍ಡ್ಯಾಂ ನಿರ್ಮಿಸಲು ಮುಂದಾಗಿರುವ ಸರ್ಕಾರದ ಕ್ರಮವನ್ನು ಖಂಡಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಸದಸ್ಯರು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.

‘ಹಾಗಲವಾಡಿ ಹೋಬಳಿಯು ಹೇಮಾವತಿ ನೀರಿನಿಂದ ವಂಚಿತವಾಗಿದ್ದು, ಈ ಭಾಗದ ಜನರು ಕಳೆದ 20 ವರ್ಷಗಳಿಂದ ಬರದ ಬವಣೆ ಎದುರಿಸುತ್ತಿದ್ದಾರೆ. ಚೆಕ್‍ಡ್ಯಾಂ ನಿರ್ಮಾಣದಿಂದ ಹಾಗಲವಾಡಿ ದೊಡ್ಡಕೆರೆಗೆ ನೈಸರ್ಗಿಕವಾಗಿ ಹರಿದು ಬರುವ ನೀರು ಸಹ ಬರದಿದ್ದರೆ ಈ ಭಾಗದ ರೈತರು ಸಂಕಷ್ಟಕ್ಕೆ ಒಳಗಾಗಲಿದ್ದಾರೆ’ ಎಂದು ರೈತ ಮುಖಂಡ ಹಾಗಲವಾಡಿ ಶಂಕರ್ ಆತಂಕ ವ್ಯಕ್ತಪಡಿಸಿದರು.

ಹಾಗಲವಾಡಿ ಕೆರೆಗೆ ಹೇಮಾವತಿ ನೀರು ಹರಿಸುವ ಕೆನಾಲ್ ಕಾಮಗಾರಿ ಕುಂಟುತ್ತ ಸಾಗಿದ್ದು, ಯೋಜನೆ ಚುರುಕುಗೊಳಿಸಬೇಕಿದೆ. ಅಲ್ಲಿಯವರೆಗೆ ದೊಡ್ಡಕೆರೆಗೆ ಸಂಪರ್ಕ ಕಲ್ಪಿಸುವ ರಾಜಗಾಲುವೆಗೆ ಚೆಕ್‍ಡ್ಯಾಂ, ಬಂಡ್‍ಗಳನ್ನು ನಿರ್ಮಿಸುವ ಯೋಜನೆಯನ್ನು ಕೈಬಿಡಬೇಕು. ಇಲ್ಲವಾದರೆ ಸುತ್ತಮುತ್ತಲಿನ 15ಕ್ಕೂ ಹೆಚ್ಚು ಹಳ್ಳಿಗಳ ರೈತರು, ಸಾರ್ವಜನಿಕರು ಸಂಕಷ್ಟ ಎದುರಿಸಬೇಕಾಗುತ್ತದೆ ಎಂದು ತಿಳಿಸಿದರು.

ADVERTISEMENT

ಕೆರೆಯು ಮಳೆ ನೀರಿನಿಂದ ತುಂಬುತ್ತಿದ್ದು, ಈ ನೀರಿನಿಂದಲೇ ರೈತರು ಉಸಿರಾಡುತ್ತಿದ್ದಾರೆ. ಚೆಕ್‍ಡ್ಯಾಂ ನಿರ್ಮಿಸುವುದನ್ನು ಕೈಬಿಡದೇ ಹೋದರೆ ರೈತರು ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.

ರೈತ ಮುಖಂಡರಾದ ನಿಂಗರಾಜು, ಅಜ್ಜಪ್ಪ ಮೇಷ್ಟ್ರು, ಸುಧಾ, ಗುರುಪಾದಣ್ಣ, ಗುರುಸಿದ್ದಯ್ಯ,ಕೃಷ್ಣಪ್ಪ ಜೇಟಿ, ಗುರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.