ಗುಬ್ಬಿ: ತಾಲ್ಲೂಕಿನಲ್ಲಿ ಹೇಮಾವತಿ ಸಂಪರ್ಕ ಕಾಲುವೆ ನಿರ್ಮಾಣ ಮುಂದುವರೆಸುವ ನಿಟ್ಟಿನಲ್ಲಿ ಭಾನುವಾರ ಬೆಳಿಗ್ಗೆ ಗುತ್ತಿಗೆದಾರರು ಸುಮಾರು 25 ಲಾರಿಗಳಲ್ಲಿ ಬೃಹತ್ ಗಾತ್ರದ ಪೈಪ್‌ಗಳನ್ನು ತಾಲ್ಲೂಕಿನ ಗಂಗಸಂದ್ರದ ಬಳಿ ಸಂಗ್ರಹಿಸುತ್ತಿದ್ದು, ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ಮುಖಂಡ ಎಸ್.ಡಿ. ದಿಲೀಪ್ ಕುಮಾರ್, ರೈತ ಸಂಘದ ತಾಲ್ಲೂಕು ಘಟಕದ ಕಾರ್ಯದರ್ಶಿ ಲೋಕೇಶ್ ಸ್ಥಳದಲ್ಲಿ ಪ್ರತಿಭಟನೆ ನಡೆಸಿದರು.
ದಿಲೀಪ್ ಕುಮಾರ್ ಮಾತನಾಡಿ, ‘ಗುತ್ತಿಗೆದಾರರಿಂದ ಶಾಸಕ ಎಸ್.ಆರ್. ಶ್ರೀನಿವಾಸ್ ಕಮಿಷನ್ ಪಡೆದು ಅವರ ಪತ್ನಿ ಭಾರತಿ ಅವರನ್ನು ಕೆಎಂಎಫ್ ಚುನಾವಣೆಯಲ್ಲಿ ಗೆಲ್ಲಿಸಿಕೊಳ್ಳುವಲ್ಲಿ ನಿರತರಾಗಿದ್ದಾರೆ. ತಾಲ್ಲೂಕಿನ ಹಿತಕ್ಕಿಂತ ಅವರಿಗೆ ಸ್ವಹಿತಾಸಕ್ತಿಯೇ ಮುಖ್ಯವಾಗಿದೆ. ಪೈಪ್‌ಗಳನ್ನು ತಂದು ಸಂಗ್ರಹಿಸಲಾಗುತ್ತಿದ್ದರೂ ಇದರ ಬಗ್ಗೆ ಏನೂ ಗೊತ್ತಿಲ್ಲ ಎನ್ನುವಂತೆ ನಡೆದುಕೊಳ್ಳುತ್ತಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ಶಾಸಕರಿಗೆ ಹಣದ ಅಗತ್ಯವಿದ್ದರೆ ನಾನೇ ಹಣ ನೀಡುತ್ತೇನೆ. ಗುತ್ತಿಗೆದಾರರಿಂದ ಪಡೆದ ಹಣವನ್ನು ಹಿಂದಿರುಗಿಸಿ ತಾಲ್ಲೂಕಿನ ರೈತರ ಹಿತ ಕಾಪಾಡಲು ಸಂಪರ್ಕ ಕಾಲುವೆ ವಿರೋಧದ ಹೋರಾಟದಲ್ಲಿ ಭಾಗಿಯಾಗಲಿ’ ಎಂದು ಅಗ್ರಹಿಸಿದರು.
ಸ್ಥಳದಲ್ಲಿ ಪೈಪ್‌ಗಳನ್ನು ತುಂಬಿ ನಿಲ್ಲಿಸಿದ್ದ ಸುಮಾರು ಲಾರಿಗಳನ್ನು ವಾಪಸ್ ಕಳುಹಿಸಿದರು. ಪೊಲೀಸರು ಸ್ಥಳಕ್ಕೆ ತೆರಳಿ ಸ್ಥಳದಲ್ಲಿರುವ ಪೈಪ್‌ಗಳನ್ನು ವಾಪಸ್ ಕಳುಹಿಸುವುದಾಗಿ ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂಪಡೆದರು.
ರೈತ ಸಂಘದ ತಾಲ್ಲೂಕು ಘಟಕದ ಕಾರ್ಯದರ್ಶಿ ಲೋಕೇಶ್, ಪದಾಧಿಕಾರಿಗಳು, ನೂರಾರು ರೈತರು, ಸುತ್ತಮುತ್ತಲಿನ ಗ್ರಾಮಸ್ಥರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.