ಪಾವಗಡ: ಹೂವು ಬೆಳೆಗಾರರಿಗೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಿ ರೈತರು ಸೋಮವಾರ ಪಟ್ಟಣದ ತಹಶೀಲ್ದಾರ್ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು.
ರೈತರು ಸಾಲ ಸೋಲ ಮಾಡಿ ಹೂ ಬೆಳೆಯುತ್ತಿದ್ದು, ಬೆಳೆದ ಹೂವನ್ನು ಮಾರಾಟ ಮಾಡಲು ಸೂಕ್ತ ಸ್ಥಳ ಇಲ್ಲ. ಇದರಿಂದ ತೀವ್ರ ನಷ್ಟ ಅನುಭವಿಸುವಂತಾಗಿದೆ. ಈ ಹಿಂದೆ ಬಸ್ ನಿಲ್ದಾಣ ಮಾರ್ಗದಲ್ಲಿ ಹೂವು ಮಾರಾಟ ಮಾಡಲಾಗುತ್ತಿತ್ತು. ಇದೀಗ ಸ್ಥಳ ಬದಲಾವಣೆ ಮಾಡಿ ಪುರಸಭೆ ಮುಖ್ಯಾಧಿಕಾರಿ ರೈತರ ಹೊಟ್ಟೆಯ ಮೇಲೆ ತಣ್ಣೀರ ಬಟ್ಟೆ ಹಾಕಿದ್ದಾರೆ ಎಂದು ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಜಿಲ್ಲಾ ಅಧ್ಯಕ್ಷ ಪೂಜಾರಪ್ಪ ಆರೋಪಿಸಿದರು.
ಈ ಹಿಂದೆ ಬಸ್ ನಿಲ್ದಾಣದ ಬಳಿ ವಿವಿಧೆಡೆಯಿಂದ ಬೆಳೆದ ಹೂವನ್ನು ತಂದು ಮಾರಾಟ ಮಾಡುತ್ತಿದ್ದರು. ಯಾವುದೇ ಸಮಸ್ಯೆ ಇರಲಿಲ್ಲ. ಹಲವು ವರ್ಷಗಳಿಂದ ಸಾರ್ವಜನಿಕರಿಗೆ ತೊಂದರೆಯಾಗದಂತೆ ರೈತರು ಮಾರಾಟ ಮಾಡುತ್ತಿದ್ದರು. ಆದರೆ ಪುರಸಭೆ ಮುಖ್ಯಾಧಿಕಾರಿ ಇತ್ತೀಚೆಗೆ ಹೂವು ಮಾರಾಟ ಮಾಡುವುದಕ್ಕೆ ಕೊಳಚೆ ಪ್ರದೇಶದಲ್ಲಿ ಸ್ಥಳ ನಿಗದಿಪಡಿಸಿದ್ದಾರೆ. ಅಲ್ಲಿ ಚರಂಡಿ, ತ್ಯಾಜ್ಯದ ದುರ್ವಾಸನೆ ಸದಾ ಬರುತ್ತಿರುತ್ತದೆ. ಹೂ ಖರೀದಿಗೆ ಬರುವವರಿಗೆ, ರೈತರಿಗೆ ಕ್ಷಣಕಾಲ ಅಲ್ಲಿರಲೂ ಸಾಧ್ಯವಾಗುವುದಿಲ್ಲ ಎಂದು ದೂರಿದರು.
ಈ ಹಿಂದೆ ಇದ್ದ ಸ್ಥಳಕ್ಕೆ ಹೂವಿನ ಮಾರುಕಟ್ಟೆ ಸ್ಥಳಾಂತರಿಸಬೇಕು ಎಂದು ಪ್ರತಿಭಟನೆ ನಿರತರು ಒತ್ತಾಯಿಸಿದರು.
ತಾಲ್ಲೂಕು ಹಸಿರು ಸೇನೆ ಅಧ್ಯಕ್ಷ ಶಿವು, ಪ್ರಧಾನ ಕಾರ್ಯದರ್ಶಿ ನರಸಣ್ಣ, ಜಿಲ್ಲಾ ಕಾರ್ಯದರ್ಶಿ ರಾಮಾಂಜನೇಯ, ತಾಲ್ಲೂಕು ಕಾರ್ಯದರ್ಶಿ ಪೂಜಾರಿ ಚಿತ್ತಯ್ಯ, ತಾಲ್ಲೂಕು ಕಾರ್ಯದರ್ಶಿ ರಮೇಶ್, ನಿಡಗಲ್ ಹೋಬಳಿಯ ಅಧ್ಯಕ್ಷರಾದ ವೀರಭದ್ರಪ್ಪ, ಈರಣ್ಣ, ದುರ್ಗಪ್ಪ, ಹನುಮಂತ ರಾಯಪ್ಪ, ತಿಪ್ಪೇಸ್ವಾಮಿ, ಗುಡಿಪಲ್ಲಪ್ಪ, ನರಸಿಂಹಪ್ಪ, ಕೃಷ್ಣಮೂರ್ತಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.