ADVERTISEMENT

‘ರಾಹುಲ್ ಅನರ್ಹತೆ ಪೂರ್ವನಿಯೋಜಿತ’

ಪ್ರಧಾನಿ ಮೋದಿ ಸರ್ವಾಧಿಕಾರಿ: ಕಾಂಗ್ರೆಸ್‌ ಆರೋಪ

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2023, 16:04 IST
Last Updated 29 ಮಾರ್ಚ್ 2023, 16:04 IST
ತುಮಕೂರಿನಲ್ಲಿ ಬುಧವಾರ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರನ್ನು ಸಂಸತ್‌ ಸ್ಥಾನದಿಂದ ಅನರ್ಹಗೊಳಿಸಿರುವುದನ್ನು ಖಂಡಿಸಿ ಪಕ್ಷದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಜಿಲ್ಲಾ ಘಟಕದ ಅಧ್ಯಕ್ಷ ಚಂದ್ರಶೇಖರಗೌಡ, ಮುಖಂಡರಾದ ಇಕ್ಬಾಲ್ ಅಹ್ಮದ್‌, ಅತೀಕ್ ಅಹ್ಮದ್‌, ರೆಡ್ಡಿ ಚಿನ್ನಯಲ್ಲಪ್ಪ, ಎಚ್.ಸಿ. ಹನುಮಂತಯ್ಯ, ಮಂಜುನಾಥ್, ರಾಜಣ್ಣ ಇತರರು ಭಾಗವಹಿಸಿದ್ದರು
ತುಮಕೂರಿನಲ್ಲಿ ಬುಧವಾರ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರನ್ನು ಸಂಸತ್‌ ಸ್ಥಾನದಿಂದ ಅನರ್ಹಗೊಳಿಸಿರುವುದನ್ನು ಖಂಡಿಸಿ ಪಕ್ಷದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಜಿಲ್ಲಾ ಘಟಕದ ಅಧ್ಯಕ್ಷ ಚಂದ್ರಶೇಖರಗೌಡ, ಮುಖಂಡರಾದ ಇಕ್ಬಾಲ್ ಅಹ್ಮದ್‌, ಅತೀಕ್ ಅಹ್ಮದ್‌, ರೆಡ್ಡಿ ಚಿನ್ನಯಲ್ಲಪ್ಪ, ಎಚ್.ಸಿ. ಹನುಮಂತಯ್ಯ, ಮಂಜುನಾಥ್, ರಾಜಣ್ಣ ಇತರರು ಭಾಗವಹಿಸಿದ್ದರು   

ತುಮಕೂರು: ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರನ್ನು ಸಂಸತ್‌ ಸ್ಥಾನದಿಂದ ಅನರ್ಹಗೊಳಿಸಿರುವುದನ್ನು ಖಂಡಿಸಿ ಪಕ್ಷದ ಕಾರ್ಯಕರ್ತರು, ಮುಖಂಡರು ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.

ನಗರದ ಭದ್ರಮ್ಮ ಛತ್ರ ವೃತ್ತದ ಬಳಿ ಸೇರಿದ ಕಾಂಗ್ರೆಸ್‌ ಮುಖಂಡರು, ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು. ಬಿಜೆಪಿ ಸಂವಿಧಾನ ಬಾಹಿರ ಕೃತ್ಯ ಎಸಗಿದೆ. ಸದಸ್ಯತ್ವ ರದ್ದು ಪೂರ್ವನಿಯೋಜಿತವಾಗಿದೆ. ಪ್ರಧಾನಿ ಮೋದಿ ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ. ವಿರೋಧ ಪಕ್ಷಗಳನ್ನು ಭಯದ ಮೂಲಕ ಹಣಿಯಲು ಹೊರಟಿದ್ದಾರೆ ಎಂದು ಕಿಡಿಕಾರಿದರು.

ರಾಹುಲ್‌ಗಾಂಧಿ ಅವರ ಮೇಲಿನ ಅನಗತ್ಯ ಕಿರುಕುಳ ನಿಲ್ಲಿಸಬೇಕು. ಸದನದ ಒಳಗೆ ಮತ್ತು ಹೊರಗೆ ಬಿಜೆಪಿಗೆ ಆಗುತ್ತಿರುವ ಮುಜುಗರ ತಪ್ಪಿಸಲು ಹೋಗಿ, ಈ ಕೃತ್ಯಕ್ಕೆ ಕೈ ಹಾಕಿದೆ ಎಂದು ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಚಂದ್ರಶೇಖರ ಗೌಡ ಆರೋಪಿಸಿದರು.

ADVERTISEMENT

ಮುಖಂಡ ಅತೀಕ್ ಅಹ್ಮದ್‌, ‘ರಾಹುಲ್‍ ಗಾಂಧಿ ಅವರು ಸಂಸತ್ತಿನಲ್ಲಿ ಅದಾನಿ ಬಗ್ಗೆ ಸಾಲು ಸಾಲು ಪ್ರಶ್ನೆಗಳನ್ನು ಎತ್ತಿದ್ದರು. ಇದರಿಂದಲೇ ಅವರನ್ನು ಉದ್ದೇಶ ಪೂರ್ವಕವಾಗಿ ಸಂಸತ್‌ನಿಂದ ಹೊರಗಿಡಲಾಗಿದೆ. ದೇಶದ ಇದುವರೆಗಿನ ರಾಜಕೀಯ ವ್ಯವಸ್ಥೆಯಲ್ಲಿ ತೀರ ಅಪರೂಪದ ಘಟನೆಯಾಗಿದೆ. ಇದನ್ನು ಎಲ್ಲಾ ಭಾರತೀಯರು ಖಂಡಿಸಬೇಕಿದೆ’ ಎಂದರು.

ರಾಜ್ಯದಲ್ಲಿ ಇಬ್ಬರು ಶಾಸಕರಿಗೆ ಜೈಲು ಶಿಕ್ಷೆಯಾಗಿದೆ. ನ್ಯಾಯಾಲಯ ಶಿಕ್ಷೆ ಘೋಷಣೆ ಮಾಡಿ ತಿಂಗಳು ಕಳೆಯುತ್ತಾ ಬಂದಿದ್ದರೂ ಇದುವರೆಗೂ ಕ್ರಮ ಕೈಗೊಂಡಿಲ್ಲ. ಆದರೆ, ತೀರ್ಪು ಪ್ರಕಟವಾದ 24 ಗಂಟೆಯ ಒಳಗೆ ತರಾತುರಿಯಲ್ಲಿ ರಾಹುಲ್‌ಗಾಂಧಿ ಸದಸ್ಯತ್ವ ರದ್ದುಪಡಿಸಲಾಗಿದೆ ಎಂದು ದೂರಿದರು.

ಮುಖಂಡರಾದ ಇಕ್ಬಾಲ್ ಅಹ್ಮದ್‌, ರೆಡ್ಡಿ ಚಿನ್ನಯಲ್ಲಪ್ಪ, ಎಚ್.ಸಿ. ಹನುಮಂತಯ್ಯ, ಮಂಜುನಾಥ್, ರಾಜಣ್ಣ, ಸುಜಾತಾ, ನರಸಿಂಹಮೂರ್ತಿ, ಸಂಜೀವ್‍ಕುಮಾರ್, ಶಿವಾಜಿ, ಶಿವಾನಂದ್, ಅರುಂಧತಿ, ನಾಗಮಣಿ, ಕೆಂಪಣ್ಣ, ಆಟೊ ರಾಜು ಇತರರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.