ADVERTISEMENT

ಕೆರೆಗೆ ನೀರು ಹರಿಸದಿದ್ದರೆ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 13 ಜನವರಿ 2021, 3:25 IST
Last Updated 13 ಜನವರಿ 2021, 3:25 IST
ರೈತ ಸಂಘ, ಹಸಿರು ಸೇನೆ (ಹೊಸಹಳ್ಳಿ ಚಂದ್ರಣ್ಣ ಬಣ)ಉಧ್ಘಾಟಿಸಲಾಯಿತು
ರೈತ ಸಂಘ, ಹಸಿರು ಸೇನೆ (ಹೊಸಹಳ್ಳಿ ಚಂದ್ರಣ್ಣ ಬಣ)ಉಧ್ಘಾಟಿಸಲಾಯಿತು   

ತಿಪಟೂರು: ಹೊನ್ನವಳ್ಳಿ ಹೋಬಳಿಯ ಕೆರೆಗಳಿಗೆ ನೀರು ಹರಿಸದೆ, ಈ ಭಾಗದ ರೈತರಿಗೆ ಮೋಸಮಾಡುತ್ತಿರುವುದು ಸರಿಯಲ್ಲ. ಈ ಭಾಗಕ್ಕೆ ನೀರು ನೀಡದಿದ್ದರೆ, ಹೋರಾಟ ನಡೆಸಲಾಗುವುದು ಎಂದು ರೈತಸಂಘ ಹಾಗೂ ಹಸಿರು ಸೇನೆಯ ಅಧ್ಯಕ್ಷ ಹೊಸಹಳ್ಳಿ ಚಂದ್ರಣ್ಣ ಎಚ್ಚರಿಸಿದರು.

ತಾಲ್ಲೂಕಿನ ಹೊನ್ನವಳ್ಳಿ ಹೋಬಳಿಯ ಮಣಕೀಕೆರೆ ಕರಿಯಮ್ಮ ದೇವಿ ದೇವಾಲಯದ ಆವರಣದಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ(ಹೊಸಹಳ್ಳಿ ಚಂದ್ರಣ್ಣ ಬಣ) ರೈತ ಸಂಘ ಉಧ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.

ನೊಣವಿನಕೆರೆ, ಕಿಬ್ಬನಹಳ್ಳಿ, ಕಸಬಾ ಹೋಬಳಿಗೆ ನೀರಿನ ಅನುಕೂಲವಿದೆ. ಆದರೆ ಹೊನ್ನವಳ್ಳಿ ಹೋಬಳಿಯ ಭಾಗದಲ್ಲಿ ನೀರಿನ ಸಂಕಷ್ಟ ಹೆಚ್ಚಿದೆ. ಹೊನ್ನವಳ್ಳಿ, ಸಾರ್ಥವಳ್ಳಿ, ಹುರುಳೀಹಳ್ಳಿ, ಚೌಲೀಹಳ್ಳಿ, ಚನ್ನನಕಟ್ಟೆ, ವಡೇರಹಳ್ಳಿ, ಹಾಲ್ಕುರಿಕೆ, ಬೈರನಾಯಕನಹಳ್ಳಿ ಕೆರೆಗಳು ತುಂಬಿದರೆ ಈ ಭಾಗದ ರೈತರ ಜೀವನ ಹಸನಾಗುತ್ತದೆ. ಈ ಕೆರೆಗಳು ತುಂಬಿ ಸುಮಾರು ವರ್ಷಗಳೇ ಕಳೆದು ಹೋಗಿವೆ. ಭೂಮಿ ಬರುಡಾಗಿ ಅಂತರ್ಜಲಮಟ್ಟ ಕುಸಿದಿದೆ. ಯುವಕರು ಕೃಷಿ ಕಡೆ ನಿರುತ್ಸಾಹ ಹೊಂದಿದ್ದು, ಪಟ್ಟಣಕ್ಕೆ ವಲಸೆ ಹೋಗುತ್ತಿದ್ದಾರೆ ಎಂದರು.

ADVERTISEMENT

ರೈತ ಸಂಘದ ಉಪಾಧ್ಯಕ್ಷ ಎಚ್.ಆರ್.ಬೋಜರಾಜ್ ಮಾತನಾಡಿ, ಹೊನ್ನವಳ್ಳಿ ಭಾಗದ ಎಳನೀರು ಮೈಸೂರು ಮಹಾರಾಜರಿಗೆ ಪ್ರಿಯ
ವಾಗಿದ್ದು, ಇಲ್ಲಿಂದ ರವಾನೆಯಾಗುತ್ತಿತ್ತು ಎಂಬ ಐತಿಹ್ಯ ಇದೆ. ಆದರೆ ಈಗ ನೀರಿಲ್ಲದೆ ಎಲ್ಲವೂ ಕಣ್ಮರೆಯಾಗಿವೆ. ಹೇಮಾವತಿ ನೀರನ್ನು ಈ ಭಾಗದ ಕೆರೆಗಳಿಗೆ ಬಿಡದೇ ಮೋಸಮಾಡುತ್ತಿದ್ದಾರೆ. 6 ತಿಂಗಳಿನಿಂದ ತುರುವೇಕೆರೆ ಭಾಗದ ಕೆರೆಗಳು ತುಂಬಿ ಹರಿದು ಡ್ಯಾಂಗಳನ್ನು ಸೇರಿ ಹೊರರಾಜ್ಯಗಳನ್ನು ಸೇರುತ್ತಿವೆ. ಆದರೆ ಪಕ್ಕದ ತಾಲ್ಲೂಕಿಗೆ ನೀರು ಸಿಗುತ್ತಿಲ್ಲ. ಕಳೆದ ವರ್ಷದಲ್ಲಿ ಬರಡಾಗಿದ್ದ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಕೆರೆಗಳು ಇಂದು ಹೇಮಾವತಿ ನೀರಿನಿಂದ ತುಂಬಿ ಮೈದುಂಬಿ ಹರಿಯುತ್ತಿವೆ. ಆದರೆ ತಿಪಟೂರು ತಾಲ್ಲೂಕಿನ ಹೊನ್ನವಳ್ಳಿ ಹೋಬಳಿಗೆ ನೀರು ನೀಡದೇ ವಂಚಿಸಿರುವುದು ಸರಿಯಲ್ಲ ಎಂದರು.

ರೈತಮುಖಂಡ ರಣಜಿತ್‍ಸಿಂಗ್ ಮಾತನಾಡಿ, ‘ಉಳ್ಳವರು ಸಾವಿರಾರು ಅಡಿಗಳ ಆಳಕ್ಕೆ ಬೋರ್‌ ಕೊರೆಸಿ ವ್ಯವಸಾಯ ಮಾಡುತ್ತಿದ್ದಾರೆ. ಆದ್ದರಿಂದ ಸರ್ಕಾರ ಇದರ ಬಗ್ಗೆ ಗಮನಹರಿಸಿ ನಮ್ಮ ಹೋಬಳಿಗೂ ನೀರಿನ ವ್ಯವಸ್ಥೆ ಮಾಡಿದರೆ ರೈತರ ಉತ್ತಮ ಭವಿಷ್ಯಕ್ಕೆ ಸಹಕಾರಿಯಾಗುತ್ತದೆ’ ಎಂದರು.

ಗುಬ್ಬಿ ತಾಲ್ಲೂಕು ಡಿಎಸ್‍ಎಸ್ ಸಂಚಾಲಕ ದೊಡ್ಡಗುಣಿ ಕೀರ್ತಿರಾಜ್, ಮುಖಂಡರಾದ ಎಂ.ಸಿ.ದೇವರಾಜ್, ಎಂ.ಆರ್.ಮಂಜುನಾಥ್, ಶಿವಕುಮಾರ್ ಲಕ್ಕೀಹಳ್ಳಿ, ಮಾಗೇನಹಳ್ಳಿ ಪರಮಣ್ಣ, ಹಾಲೇನಹಳ್ಳಿ ರಾಮಣ್ಣ, ಚೌಲೀಹಳ್ಳಿ ನಾಗರಾಜು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.