ತಿಪಟೂರು: ಶಾರದ ನಗರದ ರೈಲ್ವೆ ಮೇಲ್ಸೆತುವೆ ₹45.5 ಕೋಟಿ ಕಾಮಗಾರಿಗೆ ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ಖಾತೆಗಳ ರಾಜ್ಯ ಸಚಿವ ವಿ.ಸೋಮಣ್ಣ ಭೂಮಿಪೂಜೆ ನೆರವೇರಿಸಿದರು.
ನಂತರ ಮಾತನಾಡಿದ ಅವರು, ನನೆಗುದಿಗೆ ಬಿದ್ದಿರುವ ರೈಲ್ವೆ ಯೋಜನೆಗಳನ್ನು ಪೂರ್ಣಗೊಳಿಸಲು ಕೇಂದ್ರ ಸರ್ಕಾರ ₹2 ಸಾವಿರ ಕೋಟಿ ಅನುದಾನ ನೀಡಿದೆ. ಎರಡು ವರ್ಷದಲ್ಲಿ ₹90 ಕೋಟಿ ವೆಚ್ಚದಲ್ಲಿ ತುಮಕೂರು ರೈಲ್ವೆ ನಿಲ್ದಾಣ ಅಭಿವೃದ್ಧಿಪಡಿಸಿ ಶಿವಕುಮಾರ ಸ್ವಾಮೀಜಿ ಹೆಸರು ನಾಮಕರಣ ಮಾಡಲಾಗುವುದು ಎಂದರು.
ಶೀಘ್ರ ಹೊನ್ನವಳ್ಳಿ ರಸ್ತೆ ಮೇಲ್ಸೇತುವೆ, ಹಿಂಡಿಸ್ಕೆರೆ ರೈಲ್ವೆ ಕ್ರಾಸಿಂಗ್ ಮೇಲ್ಸೇತುವೆ ಕಾಮಗಾರಿ ಕೈಗೆತ್ತಿಕೊಂಡು ಒಂದೂವರೆ ವರ್ಷದಲ್ಲಿ ಜನರ ಬಳಕೆಗೆ ನೀಡಲಾಗುವುದು. ತಿಪಟೂರಿಗೆ ಅಗತ್ಯ ಕೈಗಾರಿಕೆಗಳ ಸ್ಥಾಪನೆಗೆ ಕೇಂದ್ರ ಕೈಗಾರಿಕ ಸಚಿವ ಎಚ್.ಡಿ ಕುಮಾರಸ್ವಾಮಿ ಬಳಿ ಪ್ರಸ್ತಾವನೆ ಸಲ್ಲಿಸಿ ಕೈಗಾರಿಕೆಗೆಗಳ ಸ್ಥಾಪನೆಗೆ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು.
ತಿಪಟೂರು- ದುದ್ದ ರೈಲ್ವೆ ಮಾರ್ಗಕ್ಕೆ ಸರ್ವೆ ಮಾಡಲು ಅಧಿಕಾರಿಗಳಿಗೆ ಸೂಚಿಸಿದ್ದೇವೆ. ಬೆಂಗಳೂರು– ತುಮಕೂರು– ನೆಲಮಂಗಲ ರಸ್ತೆಯಲ್ಲಿ ಒಂದು ವರ್ಷದಲ್ಲಿ ಸುಮಾರು 290 ಮಂದಿ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಇಲ್ಲಿ ಆರು ಪಥದ ರಸ್ತೆ ಮಂಜೂರು ಮಾಡಲಾಗಿದೆ. ಹಾಸನ-ತಿಪಟೂರು-ಹಿರಿಯೂರು ಮಾರ್ಗದ ಗ್ರೀನ್ ಕಾರಿಡಾರ್ ಹೆದ್ದಾರಿ ಯೋಜನೆ ಮಂಜೂರಾಗಿದ್ದು, ಶೀಘ್ರ ಟೆಂಡರ್ ಕರೆಯಲಾಗುವುದು ಎಂದರು.
ಕ್ಷಮೆಯಾಚನೆ: ‘ಶಾಸಕ ಕೆ.ಷಡಕ್ಷರಿ ಅವರಿಗೆ ಕಾರ್ಯಕ್ರಮದ ಬಗ್ಗೆ ತಡವಾಗಿ ಆಹ್ವಾನ ತಲುಪಿರುವ ಬಗ್ಗೆ ಮಾಹಿತಿಯಿದ್ದು ಅವರ ಕ್ಷಮೆ ಕೋರುತ್ತೇನೆ. ನಾನು ಷಡಕ್ಷರಿ ಸ್ನೆಹಿತರು ರಾಜಕೀಯವೇ ಬೇರೆ ಅಭಿವೃದ್ಧಿ ವಿಚಾರದಲ್ಲಿ ನಾವೆಲ್ಲ ಒಂದೇ’ ಎಂದರು.
ಕಾರ್ಯಕ್ರಮದಲ್ಲಿ ಮಾಜಿ ಸಚಿವ ಬಿ.ಸಿ ನಾಗೇಶ್, ರೈಲ್ವೆ ಸಿಇಒ ಅಜಯ್ ಶರ್ಮ, ಡಿಆರ್‌ಎಂ ಮಿಥಲ್, ದಿಶಾ ಸಮಿತಿ ಸದಸ್ಯ ವೈ.ಎಚ್. ಹುಚ್ಚಯ್ಯ, ಆಯರಹಳ್ಳಿ ಶಂಕರಪ್ಪ, ಬಿಜೆಪಿ ಮುಖಂಡ ಲೋಕೇಶ್ವರ್, ಜೆಡಿಎಸ್ ಮುಖಂಡ ಕೆ.ಟಿ ಶಾಂತಕುಮಾರ್, ಜಕ್ಕನಹಳ್ಳಿ ಲಿಂಗರಾಜು, ಗಂಗರಾಜು, ನಗರಸಬಾ ಸದಸ್ಯ ರಾಮ್‌ಮೋಹನ್, ಶಶಿಕಿರಣ್, ದಂಡಾಧಿಕಾರಿ ಪವನ್‌ಕುಮಾರ್ ಉಪಸ್ಥಿತರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.