ತುಮಕೂರು: ಹಿರಿಯ ರಾಜಕಾರಣಿ ಹಾಗೂ ಸಹಕಾರ ಸಚಿವ ಕೆ.ಎನ್.ರಾಜಣ್ಣ ಅವರ 75ನೇ ವರ್ಷದ ಜನ್ಮ ದಿನದ ಪ್ರಯುಕ್ತ ‘ಅಮೃತ ಮಹೋತ್ಸವ’ ಹಾಗೂ ಅಭಿನಂದನಾ ಗ್ರಂಥ ಬಿಡುಗಡೆ ಸಮಾರಂಭ ಜೂನ್ 21ರಂದು ನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ ನಡೆಯಲಿದೆ.
ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯ ಆರ್.ರಾಜೇಂದ್ರ ಈ ಬಗ್ಗೆ ಮಾಹಿತಿ ನೀಡಿದರು. ಅಭಿನಂದನಾ ಗ್ರಂಥವು ರಾಜಣ್ಣ ಅವರ ಬಾಲ್ಯ, ವಿದ್ಯಾಭ್ಯಾಸ, ಸಹಕಾರ ಕ್ಷೇತ್ರಕ್ಕೆ ನೀಡಿದ ಕೊಡುಗೆ, ರಾಜಕಾರಣ, ಅಭಿವೃದ್ಧಿ ವಿಚಾರಗಳನ್ನು ಒಳಗೊಂಡಿದೆ ಎಂದರು.
ಅಮೃತ ಮಹೋತ್ಸವ ಕಾರ್ಯಕ್ರಮದ ಮೂಲಕ ಶಕ್ತಿ ಪ್ರದರ್ಶನ ಮಾಡುತ್ತಿಲ್ಲ. ರಾಜಣ್ಣ ಸ್ನೇಹಿತರು ಸೇರಿಕೊಂಡು ಕಾರ್ಯಕ್ರಮ ಆಯೋಜಿಸಿದ್ದಾರೆ. ರಾಜ್ಯದ ವಿವಿಧೆಡೆಗಳಿಂದ ಸುಮಾರು 2 ಲಕ್ಷ ಜನರು ಸೇರುವ ನಿರೀಕ್ಷೆ ಇದೆ. ಸಚಿವ ಜಿ.ಪರಮೇಶ್ವರ ಅಧ್ಯಕ್ಷತೆಯಲ್ಲೇ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರ್ಯಕ್ರಮ ಉದ್ಘಾಟಿಸಲಿದ್ದು, ಸಾಹಿತಿ ಬರಗೂರು ರಾಮಚಂದ್ರಪ್ಪ ಆಶಯ ನುಡಿಗಳನ್ನಾಡುವರು. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕೇಂದ್ರ ಸಚಿವ ವಿ.ಸೋಮಣ್ಣ ಮೊದಲಾದವರು ಭಾಗವಹಿಸುವರು ಎಂದರು.
ಪ್ರಮುಖರಾದ ಕಲ್ಲಹಳ್ಳಿ ದೇವರಾಜು, ಟಿ.ಆರ್.ಆಂಜಿನಪ್ಪ, ಬಾ.ಹ.ರಮಾಕುಮಾರಿ, ಟಿ.ಪಿ.ಮಂಜುನಾಥ್, ಧನಿಯಕುಮಾರ್, ಟಿ.ಮುರುಳಿಕೃಷ್ಣಪ್ಪ, ಎಂ.ಎಚ್.ನಾಗರಾಜು, ಲಕ್ಷ್ಮಿನಾರಾಯಣ್, ಗುರುಮೂರ್ತಿ, ಜಂಗಮಪ್ಪ, ಬಿ.ಸಿ.ಶೈಲಾನಾಗರಾಜು, ಪಿ.ಆರ್.ನಾರಾಯಣಗೌಡ, ಎನ್.ಗಂಗಣ್ಣ ಇತರರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.