ADVERTISEMENT

‘ರಂಜಾನ್ ’ ದೇವರ ಪ್ರೀತಿಗೆ ಪಾತ್ರರಾಗುವ ಆಚರಣೆ

ನಗರದ ವಿವಿಧ ಕಡೆ ಮುಸ್ಲಿಮರಿಂದ ವ್ರತಾಚರಣೆ, ಗಮನ ಸೆಳೆಯುವ ಖಾದ್ಯಗಳು, ಹಬ್ಬದ ಸಡಗರಕ್ಕೆ ಸಜ್ಜಾದ ನಗರ

ರಾಮರಡ್ಡಿ ಅಳವಂಡಿ
Published 2 ಜೂನ್ 2019, 15:49 IST
Last Updated 2 ಜೂನ್ 2019, 15:49 IST
ರಂಜಾನ್ ಆಚರಣೆ ವಿಶೇಷ ಖಾದ್ಯ ಸಮೋಸಾ ತಯಾರಿಕೆ ನೋಟ
ರಂಜಾನ್ ಆಚರಣೆ ವಿಶೇಷ ಖಾದ್ಯ ಸಮೋಸಾ ತಯಾರಿಕೆ ನೋಟ   

ತುಮಕೂರು: ರಂಜಾನ್ ಹಬ್ಬದ ಒಂದು ತಿಂಗಳ ವ್ರತಾಚರಣೆ ದಿನಗಳಲ್ಲಿ ಪ್ರತಿ ದಿನವೂ ಮುಸ್ಲಿಮರಿಗೆ ಹಬ್ಬದ ಸಂಭ್ರಮ. ಈ ಹಬ್ಬವು ಪ್ರೀತಿ, ಸೌಹಾರ್ದತೆಯ ವ್ರತಾಚರಣೆ ಆಗಿದೆ. ದೇವರ ಸಂಪ್ರೀತಿಗೆ ಪಾತ್ರರಾಗುವ ಸದಾವಕಾಶದ ಹಬ್ಬವಾಗಿದೆ.

ನಗರದಲ್ಲಿ ರಂಜಾನ್ ಹಬ್ಬದ ಸಡಗರ ತುಂಬಿದೆ. 84 ಮಸೀದಿಗಳಿದ್ದು ಇಲ್ಲಿ ಸಾಮೂಹಿಕ ಪ್ರಾರ್ಥನೆ ಜರುಗುತ್ತಿದೆ. ಮಾರುಕಟ್ಟೆಯಲ್ಲಿ ಭರ್ಜರಿ ವ್ಯಾಪಾರ ವಹಿವಾಟು ನಡೆಯುತ್ತಿದೆ. ಮಸೀದಿಗಳ ಮುಂದೆ, ಅಕ್ಕಪಕ್ಕ, ರಸ್ತೆಗಳಲ್ಲಿ ಹಣ್ಣಿನ ಅಂಗಡಿ, ಸಿಹಿಖಾದ್ಯ, ಮಾಂಸಾಹಾರ ಮಾರಾಟ ಜೋರಾಗಿವೆ. ಗರಂ ಮಾಂಸಾಹಾರರ ಭಕ್ಷ್ಯಗಳು, ಸಮೋಸಾ ಬಾಯಲ್ಲಿ ನೀರೂರಿಸುತ್ತಿವೆ.

ಬರೀ ಮುಸ್ಲಿಮರಷ್ಟೇ ಅಲ್ಲ. ಬೇರೆ ಸಮುದಾಯದವರು ರಂಜಾನ್ ವಿಶೇಷ ದಿನಗಳಲ್ಲಿ ಸಿಗುವ ಸಮೋಸ, ಸಿಹಿಖಾದ್ಯಗಳನ್ನು ವಿವಿಧೆಡೆ ಹುಡುಕಿಕೊಂಡು ಹೋಗಿ ಖರೀದಿಸಿ ಸವಿಯುತ್ತಿದ್ದಾರೆ. ನಗರದಲ್ಲಿಯೂ ಇದೇ ವಾತಾವರಣವನ್ನು ಕಾಣಬಹುದು.

ADVERTISEMENT

‘ಸಮೋಸಾ’ ರಂಜಾನ್‌ನಲ್ಲಿ ಸವಿಯುವ ವಿಶೇಷ ಖಾದ್ಯ. ಪ್ರತಿ ನಿತ್ಯ ಶಾಖಾಹಾರಿ ಮತ್ತು ಮಾಂಸಾಹಾರಿ ಸಮೋಸ ಸೇರಿ 7 ಸಾವಿರಕ್ಕೂ ಹೆಚ್ಚು ಸಮೋಸ ತಯಾರಿಸಿ ಮಾರಾಟ ಮಾಡುತ್ತೇವೆ. ಬೆಳಿಗ್ಗೆಯಿಂದ ದಿನಪೂರ್ತಿ ಕೆಲಸ ಇದು ಎಂದು ಸಮೋಸಾ ಸಿದ್ಧಪಡಿಸುತ್ತಿದ್ದ ಲಿಯಾಖತ್ ಅಲಿ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಈರುಳ್ಳಿ,ಬಟಾಣಿ ಎಲ್ಲ ತರಹದ ಸೊಪ್ಪು ಹಾಕಿ ಶಾಖಾಹಾರಿ ಸಿದ್ಧಪಡಿಸಲಾಗುತ್ತದೆ. ಮಟನ್ ಮಸಾಲಾ ಬಳಸಿ ಮಾಂಸಾಹಾರಿ ಸಮೋಸಾ ಸಿದ್ಧಪಡಿಸುತ್ತೇವೆ’ ಎಂದು ವಿವರಿಸಿದರು.

ಈದುಲ್ ಫಿತ್ರ: ಈದುಲ್ ಫಿತ್ರ ಅನ್ನು ರಂಜಾನ್ ಎಂದು ಜನಸಾಮಾನ್ಯರು ಕರೆಯುತ್ತಾರೆ. ಒಂದು ತಿಂಗಳ ಉಪವಾಸದ ಕೊನೆಯಲ್ಲಿ ಈದುಲ್ ಫಿತ್ರ ಆಚರಿಸಲಾಗುತ್ತದೆ.

‘ಈದುಲ್ ಫಿತ್ರ’ ಎಂದರೆ ದೇವರು ಅನುಗ್ರಹಿಸಿದ ಒಂದು ಅಪರೂಪದ ಕೊಡುಗೆ. ದೇವರ ಸಂಪ್ರೀತಿಗೆ ಬೇಕಾಗುವ ನಮಾಜು, ರೋಜಾ, ಜಕಾತ, ಜಿಕ್ರ ಎಂಬ ನಾಲ್ಕು ಅಂಶಗಳಿಗೆ ಪ್ರಥಮ ಆದ್ಯತೆ ನೀಡಲಾಗಿದೆ.

ಬಡವರಿಗೂ ಸಕಲ ಸಾಮಗ್ರಿ: ಉಳ್ಳವರು ಬಡವರಿಗೆ ಹಬ್ಬದ ಆಚರಣೆಯ ಸಕಲ ಸಾಮಗ್ರಿಗಳನ್ನು ಕೊಡುತ್ತಾರೆ. ಅವರೂ ಅಲ್ಪಪ್ರಮಾಣದಲ್ಲಾದರೂ ಹಬ್ಬ ಆಚರಿಸುವಲ್ಲಿ ಫಿತ್ರ ಜಕಾತ್ ಎಂಬ ನಿಯಮ ಕಡ್ಡಾಯಗೊಳಿಸಿ ಧರ್ಮದ ಮಹೋನ್ನತಿ ಎತ್ತಿ ಹಿಡಿಯಲಾಗಿದೆ ಎಂದು ಮುಸ್ಲಿಂ ಸಮುದಾಯದ ಹಿರಿಯರು ವಿವರಿಸುವರು.

ಫಿತರ್, ಜಕಾತ್ ಹಾಗೂ ಇಫ್ತಿಯಾರ್ ಕೂಟ, ಸಹರಿ ಕೂಟಗಳನ್ನು ಅರ್ಥಪೂರ್ಣವಾಗಿ ಆಚರಿಸಲಾಗುತ್ತದೆ. ಇಫ್ತಾರ್ ಕೂಟದಲ್ಲಿ ಮೇಲ್ವರ್ಗ, ಕೆಳವರ್ಗ ಎಂಬ ತಾರತಮ್ಯ ಮರೆತು ಒಂದೇ ವೇದಿಕೆಯಲ್ಲಿ ಹಂಚಿ ತಿನ್ನುವ, ತಿನಿಸುವ ಕಾರ್ಯ ನಿಜವಾಗಿಯೂ ಗಮನಾರ್ಹವಾದುದು.

ನಿಷ್ಠಾವಂತರು ಪಾಲಿಸಬೇಕಾದ ನಿಯಮಗಳು: ‘ರಂಜಾನ್ ಹಬ್ಬದ ದಿನಗಳಲ್ಲಿ ಪ್ರತಿಯೊಬ್ಬ ಪುರುಷ, ಮಹಿಳೆಯರು ಹಾಗೂ 8 ವರ್ಷ ಮೇಲ್ಪಟ್ಟ ಎಲ್ಲ ನಿಷ್ಠಾವಂತರಿಗೆ ರೋಜಾ, ನಮಾಜು, ಜಕಾತ ಕಡ್ಡಾಯಗೊಳಿಸಲಾಗಿದೆ’ ಎಂದು ಜಾಮೀಯಾ ಮಸೀದಿಯ ಕಾರ್ಯದರ್ಶಿ ಅಯಾಜ್ ಅಹಮ್ಮದ್ ಮಾಹಿತಿ ನೀಡಿದರು.

‘ಮಹಿಳೆಯರು ಮನೆಯಲ್ಲಿ ಪ್ರಾರ್ಥನೆ ಮಾಡಿದರೆ ಪುರುಷರು, 8 ವರ್ಷದ ಮೇಲಿನ ಮಕ್ಕಳು ದಿನಕ್ಕೆ 5 ಬಾರಿ ಪ್ರಾರ್ಥನೆ ಮಾಡುತ್ತಾರೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.