ADVERTISEMENT

ಒಳಚರಂಡಿ ನೀರು ಶುದ್ಧೀಕರಣ ಘಟಕಕ್ಕೆ ಅನುದಾನಕ್ಕೆ ಕೋರಿಕೆ

ಗುಂಡಮ್ಮನ ಕೆರೆ, ಮರಳೂರು ಕೆರೆಯಲ್ಲಿ ನಿರ್ಮಾಣವಾಗಲಿರುವ ಘಟಕಗಳ ಕುರಿತು ಸ್ಮಾರ್ಟ್ ಸಿಟಿ ಲಿಮಿಟೆಡ್‌ ಅಧ್ಯಕ್ಷೆ ಶಾಲಿನಿ ರಜನೀಶ್ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2019, 9:40 IST
Last Updated 23 ಆಗಸ್ಟ್ 2019, 9:40 IST
ತುಮಕೂರು ಸ್ಮಾರ್ಟ್ ಸಿಟಿ ನೂತನ ಸಭಾಂಗಣದಲ್ಲಿ ಅಳವಡಿಸಿದ ಸ್ಮಾರ್ಟ್ ಸಿಟಿ ಅಭಿವೃದ್ಧಿ ಕಾಮಗಾರಿಯ ಡಿಜಿಟಲೈಸ್ಡ್ ಛಾಯಾಚಿತ್ರಗಳನ್ನು ಸ್ಮಾರ್ಟ್ ಸಿಟಿ ಅಧ್ಯಕ್ಷೆ ಶಾಲಿನಿ ರಜನೀಶ್ ವೀಕ್ಷಿಸಿದರು. ಟಿ.ಭೂಬಾಲನ್ ಇದ್ದರು
ತುಮಕೂರು ಸ್ಮಾರ್ಟ್ ಸಿಟಿ ನೂತನ ಸಭಾಂಗಣದಲ್ಲಿ ಅಳವಡಿಸಿದ ಸ್ಮಾರ್ಟ್ ಸಿಟಿ ಅಭಿವೃದ್ಧಿ ಕಾಮಗಾರಿಯ ಡಿಜಿಟಲೈಸ್ಡ್ ಛಾಯಾಚಿತ್ರಗಳನ್ನು ಸ್ಮಾರ್ಟ್ ಸಿಟಿ ಅಧ್ಯಕ್ಷೆ ಶಾಲಿನಿ ರಜನೀಶ್ ವೀಕ್ಷಿಸಿದರು. ಟಿ.ಭೂಬಾಲನ್ ಇದ್ದರು   

ತುಮಕೂರು: ನಗರದ ಗುಂಡಮ್ಮನಕೆರೆ ಮತ್ತು ಮರಳೂರು ಕೆರೆಯಲ್ಲಿ ಒಳಚರಂಡಿ ನೀರು ಶುದ್ಧೀಕರಣ ಘಟಕ ನಿರ್ಮಾಣಕ್ಕೆ ಅನುದಾನ ದೊರಕಿಸಲು ನಗರಾಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿ ಹಾಗೂ ಜಲಮಂಡಳಿ ಕಾರ್ಯದರ್ಶಿಗಳೊಂದಿಗೆ ಚರ್ಚಿಸಿದ್ದೇನೆ ಎಂದು ತುಮಕೂರು ಸ್ಮಾರ್ಟ್ ಸಿಟಿ ಲಿಮಿಟೆಡ್ ಅಧ್ಯಕ್ಷೆ ಶಾಲಿನಿ ರಜನೀಶ್ ಹೇಳಿದರು.

ಗುರುವಾರ ಸ್ಮಾರ್ಟ್ ಸಿಟಿ ಕಚೇರಿಯ ನೂತನ ಸಭಾಂಗಣ ಉದ್ಘಾಟಿಸಿ ಹಾಗೂ ಪ್ರವಾಸಿ ಸ್ಥಳಗಳ ಕುರಿತ ಕೈಪಿಡಿ (ಫ್ಲೈಯರ್‌) ಬಿಡುಗಡೆ ಬಳಿಕ ಅಧಿಕಾರಿಗಳನ್ನುದ್ದೇಶಿಸಿ ಮಾತನಾಡಿದರು.

ಸ್ಮಾರ್ಟ್ ಸಿಟಿ ಯೋಜನೆ, ಜಿಲ್ಲೆಯಲ್ಲಿರುವ ನಾಲೆಗಳ ದುರಸ್ತಿ ಹಾಗೂ ಮತ್ತಿತರ ಅಭಿವೃದ್ಧಿ ಕೆಲಸಗಳಿಗೆ ಸಂಬಂಧಿಸಿದಂತೆ ನೂತನ ಸಚಿವರೊಂದಿಗೆ ಚರ್ಚಿಸುವುದಾಗಿ ತಿಳಿಸಿದರು.

ADVERTISEMENT

ಜಿಲ್ಲೆಯ ಪ್ರವಾಸಿ ಸ್ಥಳಗಳ ಕುರಿತ ಪ್ರವಾಸಿ ತಾಣ ಕೈಪಿಡಿ (ಫ್ಲೈಯರ್)ಯಲ್ಲಿನ ಕ್ಯೂಆರ್ ಕೋಡ್ ಬಳಸಿ ಜಿಲ್ಲೆಯ ಪ್ರವಾಸಿ ತಾಣಗಳ ಐತಿಹಾಸಿಕ ಹಿನ್ನೆಲೆಯನ್ನೊಳಗೊಂಡ ಮಾಹಿತಿ, ವಿಡಿಯೊ ತುಣುಕಗಳನ್ನು ವೀಕ್ಷಿಸಬಹುದಾಗಿದೆ ಎಂದರು.

ಜಿಲ್ಲೆಯ ಜನರಿಗಷ್ಟೇ ಅಲ್ಲದೇ ದೇಶ- ವಿದೇಶಗಳ ಜನರಿಗೂ ಜಿಲ್ಲೆಯ ಪ್ರವಾಸಿ ತಾಣಗಳ ಬಗ್ಗೆ ಪರಿಚಯ ಮಾಡಿಕೊಡುವುದು ಇದರ ಉದ್ದೇಶ ಎಂದು ತಿಳಿಸಿದರು.

ಕ್ಯಾಲಿಫೋರ್ನಿಯಾದ ಬರ್ಕ್‌ಲಿನ್ ವಿಶ್ವವಿದ್ಯಾಲಯ ಹಾಗೂ ತುಮಕೂರು ವಿಶ್ವವಿದ್ಯಾಲಯದ ನಡುವೆ ಒಪ್ಪಂದ (ಎಂಒಯು) ಮಾಡಿಕೊಳ್ಳಲು ಚಿಂತನೆ ನಡೆಸಲಾಗಿದೆ ಎಂದು ತಿಳಿಸಿದರು.

ಅಮಾನಿಕೆರೆಯ ಪ್ಲಾಟ್ ಫಾರ್ಮ್‌ಗೆ ಹೊಂದಿಕೊಂಡಂತೆ ಹಸಿರೀಕರಣ ಕಾಮಗಾರಿಯನ್ನು ಈ ಮಳೆಗಾಲದಲ್ಲಿ ಕೈಗೊಳ್ಳಲು ನಿರ್ಣಯ ಕೈಗೊಳ್ಳಲಾಗಿದೆ ಎಂದು ಹೇಳಿದರು.

ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ಟಿ.ಭೂಬಾಲನ್ ಮಾತನಾಡಿ, ‘ನಗರದಲ್ಲಿ ಪೆಟ್ರೋಲ್ ಬಂಕ್, ನಗರಸಭೆ ಶುಲ್ಕ ಪಾವತಿ, ಮತ್ತಿತರ ಹಣಕಾಸು ವ್ಯವಹಾರಗಳೆಲ್ಲವನ್ನೂ ಏಕ ರೀತಿಯಲ್ಲಿ ನಿರ್ವಹಿಸುವ ನಿಟ್ಟಿನಲ್ಲಿ ನಾಗರಿಕರಿಗೆ ಒಂದೇ ರೀತಿಯ ಕಾರ್ಡ್ ಒದಗಿಸುವ ಬಗ್ಗೆ ಆ್ಯಕ್ಸಿಸ್ ಬ್ಯಾಂಕ್‌ನೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ’ ಎಂದರು.

ನಗದುರಹಿತ ನಗರವನ್ನಾಗಿ ಮಾಡಲು ಕೇಂದ್ರ ಸರ್ಕಾರ ಉತ್ತೇಜನ ನೀಡುತ್ತಿರುವುದರಿಂದ ಈ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.

ಸ್ಮಾರ್ಟ್ ಸಿಟಿ ಎಂಜಿನಿಯರ್ ಸ್ಮಿತಾ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.