ADVERTISEMENT

ಕುಣಿಗಲ್: ಕಂದಾಯ ಇಲಾಖೆ ಆರ್‌ಐ, ವಿಎ ಕಾರ್ಯವೈಖರಿಗೆ ಶಾಸಕರ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2025, 5:26 IST
Last Updated 8 ಆಗಸ್ಟ್ 2025, 5:26 IST
ಕುಣಿಗಲ್ ತಾಲ್ಲೂಕು ಮಾರ್ಕೋನಹಳ್ಳಿ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಶಾಸಕ ಡಾ.ರಂಗನಾಥ್ ಮಾತನಾಡಿದರು
ಕುಣಿಗಲ್ ತಾಲ್ಲೂಕು ಮಾರ್ಕೋನಹಳ್ಳಿ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಶಾಸಕ ಡಾ.ರಂಗನಾಥ್ ಮಾತನಾಡಿದರು   

ಕುಣಿಗಲ್: ತಾಲ್ಲೂಕಿನ ಕಂದಾಯ ಇಲಾಖೆ ರಾಜಸ್ವ ನಿರೀಕ್ಷರು ಮತ್ತು ಗ್ರಾಮ ಆಡಳಿತಾಧಿಕಾರಿಗಳ ಕಾರ್ಯವೈಖರಿ ಬಗ್ಗೆ ಶಾಸಕ ಡಾ.ರಂಗನಾಥ್ ಜಿಲ್ಲಾಧಿಕಾರಿ ಸಮ್ಮುಖದಲ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಿ ಸಮರ್ಪಕವಾಗಿ ಕಾರ್ಯನಿರ್ವಹಿಸದ ಸಿಬ್ಬಂದಿಗೆ ಚಾಟಿ ಬೀಸಲು ಮನವಿ ಮಾಡಿದರು.

ತಾಲ್ಲೂಕಿನ ಮಾರ್ಕೋನಹಳ್ಳಿ ಪ್ರವಾಸಿ ಮಂದಿರದಲ್ಲಿ ಗುರುವಾರ ನಡೆದ ಸಭೆಯಲ್ಲಿ ಮಾತನಾಡಿದರು.

ಕಂದಾಯ ಇಲಾಖೆ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿದ್ದು, ಕಾರ್ಯನಿರ್ವಹಿಸಲು ವಿಫಲರಾಗಿದ್ದಾರೆ. ಗ್ರಾಮೀಣ ಪ್ರದೇಶದ ರೈತರು ದಾಖಲೆಗಳಿಗಾಗಿ ನಿತ್ಯವೂ ಪರದಾಡುತ್ತಿದ್ದಾರೆ. ಕಡತಗಳನ್ನು ಸಕಾಲದಲ್ಲಿ ವಿಲೇವಾರಿ ಮಾಡಲು ಅಧಿಕಾರಿಗಳು ವಿಫಲರಾಗಿದ್ದಾರೆ. ಕೆಳಹಂತದಲ್ಲಿ ಪಾರದರ್ಶಕತೆ ಮರೆಯಾಗಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ತಹಶೀಲ್ದಾರ್ ಮತ್ತು ಉಪವಿಭಾಗಾಧಿಕಾರಿ ಹೆಚ್ಚಿನ ಗಮನಹರಿಸಲು ಮನವಿ ಮಾಡಿದರು.

ADVERTISEMENT

ತಾಲ್ಲೂಕಿನಲ್ಲಿ ಆಶ್ರಯ ಯೋಜನೆಯಡಿ ಹತ್ತು ಸಾವಿರ ನಿವೇಶನ ವಿತರಣೆಗೆ ಕ್ರಮ ಕೈಗೊಳ್ಳಲಾಗುತ್ತಿದ್ದು, ಅಗತ್ಯವಾದ ಸರ್ಕಾರಿ ಜಮೀನು ಗುರುತಿಸಿಕೊಡಲು ಅಗತ್ಯ ಭೂ ಮಾಪಕರನ್ನು ನಿಯೋಜನೆ ಮಾಡಲು ಜಿಲ್ಲಾಧಿಕಾರಿಗೆ ಮನವಿ ಮಾಡಿದರು.

ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಶಾಸಕರ ಮನವಿ ಮೇರೆಗೆ ತಾಲ್ಲೂಕಿನಲ್ಲಿ ಹತ್ತು ಸಾವಿರ ಆಶ್ರಯ ನಿವೇಶನಗಳಿಗಾಗಿ ಸರ್ಕಾರಿ ಜಮೀನು ಗುರುತಿಸುವ ಕಾರ್ಯ ಚಾಲನೆಯಲ್ಲಿದೆ. ಇದುವರೆಗೂ 280 ಎಕರೆ ಜಮೀನು ಗುರುತಿಸಲಾಗಿದೆ. ಜಿಲ್ಲೆಯಲ್ಲಿ ಕಂದಾಯ ಇಲಾಖೆಯ ಪ್ರಗತಿ ವಿಚಾರದಲ್ಲಿ ಮಹತ್ತರ ಬದಲಾವಣೆಯಾಗುತ್ತಿದೆ. ಜಿಲ್ಲೆಯಲ್ಲಿ 500 ಕಂದಾಯ ಗ್ರಾಮ, ಉಪಗ್ರಾಮಗಳನ್ನು ಗುರುತಿಸಲಾಗಿದೆ.

ತಾಲ್ಲೂಕಿನಲ್ಲಿ 34 ಕಂದಾಯ ಗ್ರಾಮಗಳನ್ನು ಆಯ್ಕೆ ಮಾಡಿ ಪ್ರಾಥಮಿಕ ಅಧಿಸೂಚನೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಕಂದಾಯ ಗ್ರಾಮಗಳ 35 ಸಾವಿರ ಅರ್ಹ ಫಲಾನುಭವಿಗಳಿಗೆ ಇನ್ನೆರಡು ತಿಂಗಳಲ್ಲಿ ಹಕ್ಕುಪತ್ರ ಮತ್ತು ಇ- ಖಾತೆ ನೀಡಲಾಗುವುದು. ಸೆಪ್ಟೆಂಬರ್ ಅಂತ್ಯಕ್ಕೆ ಹತ್ತು ಸಾವಿರ ರೈತರ ಜಮೀನುಗಳ ಪೋಡಿ ಮಾಡಿ ಪ್ರತ್ಯೇಕ ಪಹಣಿ ನೀಡಲಾಗುವುದು. ಪ್ರತಿ ಗ್ರಾಮದಲ್ಲೂ ಪೌತಿ ಖಾತೆ ಆಂದೋಲನ ನಡೆಸಲಾಗುವುದು ಎಂದರು.

ಉಪವಿಭಾಗಾಧಿಕಾರಿ ನಹೀದ ಜಮ್ ಜಮ್, ತಹಶೀಲ್ದಾರ್ ರಶ್ಮಿ, ಭೂಮಾಪನ ಇಲಾಖೆ ಉಪನಿರ್ದೇಶಕ ನಿರಂಜನ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.