
ಶಿರಾ: ತಾಲ್ಲೂಕಿನ ದೊಡ್ಡ ಅಲದಮರದಲ್ಲಿ ಬುಧವಾರ ನಮ್ಮೂರ ಸರ್ಕಾರಿ ಶಾಲೆ ಉಳಿಸುವಂತೆ ಒತ್ತಾಯಿಸಿ ಎಐಡಿಎಸ್ಒ ನೇತೃತ್ವದಲ್ಲಿ ಪೋಷಕರ ಪ್ರತಿಭಟನಾ ಸಮಾವೇಶ ನಡೆಯಿತು.
ತಾಲ್ಲೂಕಿನ ದೊಡ್ಡಆಲದಮರ(ಹನುಮಂತನಗರ), ಜೋಡಿದೇವರಹಳ್ಳಿ, ನಾಗೇನಹಳ್ಳಿ, ಜೋಗಿಹಳ್ಳಿ, ಸೀಬಿಅಗ್ರಹಾರ, ಕುಂಟೇಗೌಡನಹಳ್ಳಿ, ನೆಲದಿಮ್ಮನಹಳ್ಳಿ, ಬಾಳಬಸವನಹಳ್ಳಿ, ಕಾಳೆನಹಳ್ಳಿ, ಅಮಲಗುಂದಿ, ಎಲ್.ಎಚ್.ಪಾಳ್ಯ, ಅಜ್ಜಯನಪಾಳ್ಯ, ಕಾಗೆನಿಂಗನಹಳ್ಳಿ, ಭೋವಿಪಾಳ್ಯ, ಎಲದಬಾಗಿ, ಮತ್ತು ಜವನಹಳ್ಳಿ ಗ್ರಾಮಗಳ ಸರ್ಕಾರಿ ಶಾಲೆಗಳನ್ನು ಬ್ರಹ್ಮಸಂದ್ರ ಕೆಪಿಎಸ್ ಮ್ಯಾಗ್ನೆಟ್ ಅಡಿಯಲ್ಲಿ ಮುಚ್ಚುತ್ತಿರುವ ರಾಜ್ಯ ಸರ್ಕಾರದ ನಡೆ ವಿರೋಧಿಸಿ ಪೋಷಕರು ಪ್ರತಿಭಟನಾ ಸಮಾವೇಶ ನಡೆಸಿದರು.
ಎಐಡಿಎಸ್ಒ ರಾಜ್ಯ ಉಪಾಧ್ಯಕ್ಷೆ ಚಂದ್ರಕಲಾ ಮಾತನಾಡಿ, ರಾಜ್ಯದಾದ್ಯಂತ ಗ್ರಾಮ ಪಂಚಾಯಿತಿಗೆ ಒಂದು ಸರ್ಕಾರಿ ಶಾಲೆಯಂತೆ ಕೇವಲ 6 ಸಾವಿರ ಶಾಲೆಗಳನ್ನು ಉಳಿಸಿಕೊಳ್ಳಲಿದ್ದು, 40 ಸಾವಿರ ಸರ್ಕಾರಿ ಶಾಲೆಗಳು ನಶಿಸಿ ಹೋಗುತ್ತವೆ. ಕೆಪಿಎಸ್ ಮ್ಯಾಗ್ನೆಟ್ ಶಾಲೆಗಳ ಹೆಸರಿನಲ್ಲಿ 5 ಕಿ.ಮೀ ವ್ಯಾಪ್ತಿಯ ಎಲ್ಲ ಸರ್ಕಾರಿ ಶಾಲೆಗಳನ್ನು ಕೊಲ್ಲುವ ಹುನ್ನಾರ ಇದಾಗಿದೆ. ಈಗಾಗಲೇ 15 ವರ್ಷಗಳಲ್ಲಿ ರಾಜ್ಯ ಸರ್ಕಾರದ ಪ್ರಕಾರ 17 ಲಕ್ಷ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಿದ್ದು ಮುಂದೆ ಇದರ ಸಂಖ್ಯೆ ಹೆಚ್ಚುವುದು ಎಂದರು.
ಎಐಡಿಎಸ್ಒ ರಾಜ್ಯ ಉಪಾಧ್ಯಕ್ಷೆ ಅಪೂರ್ವ ಮಾತನಾಡಿ, ಕೆಪಿಎಸ್ ಮ್ಯಾಗ್ನೆಟ್ ಯೋಜನೆ ಈಗಾಗಲೇ ಜನರ ಆಕ್ರೋಶಕ್ಕೆ ಕಾರಣವಾಗಿದೆ. ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ತನ್ನ ದೇಹದಲ್ಲಿ ಕನ್ನಡ ರಕ್ತ ಹರಿಯುವುದು ಎಂದು ಹೇಳುತ್ತಾರೆ. ಆದರೆ ಹಿಂದಿನ ಬಾಗಿಲಿನಿಂದ ಸರ್ಕಾರಿ ಶಾಲೆಗಳನ್ನು ಮುಚ್ಚಲು ಆದೇಶ ಹೊರಡಿಸುತ್ತಿದ್ದಾರೆ. ಸರ್ಕಾರ ಒಂದೇ ಒಂದೇ ಸರ್ಕಾರಿ ಶಾಲೆಯನ್ನು ಮುಚ್ಚುವುದಿಲ್ಲ. ಕೆಪಿಎಸ್ ಮ್ಯಾಗ್ನೆಟ್ ಬ್ರಹ್ಮಸಂದ್ರ ಶಾಲೆಯ ಆದೇಶ ರದ್ದು ಮಾಡುತ್ತಿದ್ದೇವೆ ಎಂದು ಘೋಷಿಸಬೇಕು ಇಲ್ಲವಾದಲ್ಲಿ ಈ ಹೋರಾಟ ಮತ್ತಷ್ಟು ತೀವ್ರಗೊಳ್ಳುವುದು ಎಂಬ ಎಚ್ಚರಿಸಿದರು.
ಎಐಎಂಎಸ್‌ಎಸ್ ಜಿಲ್ಲಾ ಘಟಕದ ಅಧ್ಯಕ್ಷೆ ಕಲ್ಯಾಣಿ ಮಾತನಾಡಿ, ಆಡಳಿತ ನಡೆಸುವ ಎಲ್ಲ ಸರ್ಕಾರಗಳು ಶಿಕ್ಷಣ, ಆರೋಗ್ಯ ಸೇರಿದಂತೆ ಸಾರ್ವಜನಿಕ ಕೇತ್ರಗಳನ್ನು ಖಾಸಗಿಕರಣಗೊಳಿಸಿ ಶಿಕ್ಷಣ, ಆರೋಗ್ಯ ಕೇವಲ ಶ್ರೀಮಂತ ವರ್ಗದವರ ಸ್ವತ್ತಾಗುವಂತೆ ಮಾಡುತ್ತಿದ್ದಾರೆ. ಸರ್ಕಾರಿ ಶಾಲೆಗಳನ್ನು ಮುಚ್ಚಿದರೆ ಮಕ್ಕಳ ಗತಿ ಏನು? ಆದ್ದರಿಂದ ರೈತರು, ಕಾರ್ಮಿಕರು ಒಂದಾಗಿ ಮಕ್ಕಳಿಗೋಸ್ಕರ ಹೋರಾಟ ನಡೆಸಬೇಕು ಎಂದರು.
ಬಾಲಬಸವನಹಳ್ಳಿ ರಮೇಶ್, ಜೋಡಿದೇವರಳ್ಳಿಯ ಶ್ರೀನಿವಾಸ್ ಮಾತನಾಡಿದರು. ಎಐಡಿಎಸ್ಒ ತುಮಕೂರು ಜಿಲ್ಲಾ ಕಾರ್ಯದರ್ಶಿ ಲಕ್ಕಪ್ಪ, ಕಾರ್ಯಕರ್ತರಾದ ಭರತ್, ಸೈಯದ್. ವೃಷಭ್, ಸಂದೀಪ್, ಹುಸೇನಪ್ಪ, ಭೂತೇಶ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.