ADVERTISEMENT

ತುಮಕೂರು: ಶ್ರಾವಣ ಮೊದಲ ಶನಿವಾರ; ದೇಗುಲಗಳಲ್ಲಿ ವಿಶೇಷ ಪೂಜೆ

​ಪ್ರಜಾವಾಣಿ ವಾರ್ತೆ
Published 25 ಜುಲೈ 2020, 12:29 IST
Last Updated 25 ಜುಲೈ 2020, 12:29 IST
ಕೋಟೆ ಆಂಜನೇಯಸ್ವಾಮಿ ದೇವಾಲಯದಲ್ಲಿ ದೇವರ ದರ್ಶನ ಪಡೆದ ಭಕ್ತರು
ಕೋಟೆ ಆಂಜನೇಯಸ್ವಾಮಿ ದೇವಾಲಯದಲ್ಲಿ ದೇವರ ದರ್ಶನ ಪಡೆದ ಭಕ್ತರು   

ತುಮಕೂರು: ಶ್ರಾವಣ ಮಾಸದ ಮೊದಲ ಶನಿವಾರದಂದು ನಗರದ ವಿವಿಧದೇಗುಲಗಳಲ್ಲಿ ವಿಶೇಷ ಪೂಜೆ ಹಾಗೂ ಧಾರ್ಮಿಕ ಕಾರ್ಯಗಳು ಜರುಗಿದವು. ವಿಶೇಷವಾಗಿ ವೆಂಕಟೇಶ್ವರ, ಶನೈಶ್ಚರ, ಆಂಜನೇಯ ದೇಗುಲಗಳಲ್ಲಿ ಪ್ರಮುಖವಾಗಿ ಪೂಜೆಗಳು ನೆರವೇರಿದವು.

ಕೊರೊನಾ ಭಯದ ನಡುವೆಯೂ ಭಕ್ತರು ದೇಗುಲಗಳಿಗೆ ಬಂದು ಶ್ರದ್ಧಾಭಕ್ತಿಯಿಂದ ಪೂಜೆ ಸಲ್ಲಿಸಿದರು. ದೇವಾಲಯಗಳಲ್ಲಿ ಮಾಸ್ಕ್ ಧರಿಸಿ ಅಂತರ ಕಾಪಾಡುತ್ತಿದ್ದರು. ಹೊರ ಮತ್ತು ಒಳ ಆವರಣಗಳಲ್ಲಿ ಮಾಸ್ಕ್ ಧರಿಸುವಂತೆ ಮತ್ತು ಅಂತರ ಕಾಯ್ದುಕೊಳ್ಳುವಂತೆ ಫಲಕಗಳನ್ನು ದೇಗುಲದ ಸಿಬ್ಬಂದಿ ಅಳವಡಿಸಿದ್ದರು.

ಬೆಳಿಗ್ಗೆಯಿಂದಲೇ ಪೂಜೆಗಳು ಆರಂಭವಾದವು. ಮಹಾಲಕ್ಷ್ಮಿನಗರದ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಸಂಜೆ ದೀಪೋತ್ಸವ ಮತ್ತು ಡೋಲೋತ್ಸವ ಜರುಗಿದವು.

ADVERTISEMENT

ಕೋಟೆ ಆಂಜನೇಯಸ್ವಾಮಿ ಹಾಗೂ ಆ ದೇಗುಲದ ಮುಂಭಾಗದಲ್ಲಿರುವ ಪಂಚಮುಖಿ ಗಣಪತಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಈ ಹಿಂದಿನ ವರ್ಷಗಳಲ್ಲಿ ಕೋಟೆ ಆಂಜನೇಯ ಸ್ವಾಮಿ ದೇವಾಲಯದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರುತ್ತಿದ್ದವು. ಆದರೆ ಈ ಬಾರಿ ಪೂಜಾ ಕಾರ್ಯಗಳು ಮಾತ್ರ ನಡೆದವು.

ಶಿರಾ ರಸ್ತೆಯ ಶ್ರೀದೇವಿ ವೈದ್ಯಕೀಯ ಕಾಲೇಜಿನ ಆವರಣದಲ್ಲಿರುವ ದುರ್ಗಾಂಬಿಕಾ ದೇವಸ್ಥಾನದಲ್ಲಿ ದೇವಿಗೆ ಅಭಿಷೇಕ ಹಾಗೂ ವಿಶೇಷ ಪೂಜೆ ನಡೆಯಿತು. ಗಾರ್ಡನ್ ರಸ್ತೆಯ ಕಲ್ಪತರು ವನದಲ್ಲಿರುವ ಶನೈಶ್ಚರ, ಬನಶಂಕರಿ ವೆಂಕಟೇಶ್ವರ, ಬಿ.ಎಚ್‌.ರಸ್ತೆಯ ಆಂಜನೇಯ ಸ್ವಾಮಿ ಹೀಗೆ ಹಲವು ದೇವಸ್ಥಾನದಲ್ಲಿ ಉತ್ಸವ, ಪೂಜೆಗಳು ನೆರವೇರಿದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.