ತುಮಕೂರು: ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿದರೆ ಉತ್ತಮ ಲಾಭ ಗಳಿಸಬಹುದು ಎಂಬ ಆಮಿಷಕ್ಕೆ ಒಳಗಾಗಿ ನಗರದ ಇಬ್ಬರು ₹67.25 ಲಕ್ಷ ಕಳೆದುಕೊಂಡಿದ್ದಾರೆ.
ಕೃಷ್ಣನಗರದ ಉಪನ್ಯಾಸಕ ಕೆ.ಧನಂಜಯ ಗೂಗಲ್‌ನಲ್ಲಿ ಷೇರು ಮಾರುಕಟ್ಟೆ ಬಗ್ಗೆ ಹುಡುಕುತ್ತಾ ‘Ventura Securities VIP Strategy’ ವಾಟ್ಸ್ ಆ್ಯಪ್ ಗ್ರೂಪ್ ಸೇರಿದ್ದಾರೆ. ಸದರಿ ಗ್ರೂಪ್‌ನಲ್ಲಿ ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ‘VTrade’ ಎಂಬ ಆ್ಯಪ್‌ನಲ್ಲಿ ಹಣ ಹೂಡಿಕೆ ಮಾಡಿ, ಷೇರು ಖರೀದಿಸಿ ಮಾರಾಟ ಮಾಡಿದರೆ, ಕಡಿಮೆ ಅವಧಿಯಲ್ಲಿ ಹೆಚ್ಚಿನ ಲಾಭ ಪಡೆಯಬಹುದು ಎಂದು ತಿಳಿಸಿದ್ದಾರೆ.
ಸೈಬರ್ ಆರೋಪಿಗಳ ಮಾತು ನಂಬಿದ ಧನಂಜಯ ಹಂತ ಹಂತವಾಗಿ ಒಟ್ಟು ₹38.54 ಲಕ್ಷ ಹೂಡಿಕೆ ಮಾಡಿದ್ದಾರೆ. ಇದರಲ್ಲಿ ಅವರಿಗೆ ₹80 ಸಾವಿರ ವಾಪಸ್ ಹಾಕಿದ್ದಾರೆ. ಉಳಿದ ₹37.74 ಲಕ್ಷ ನೀಡದೆ ವಂಚಿಸಿದ್ದಾರೆ. ಬಾಕಿ ಹಣ ಹಿಂದಿರುಗಿಸುವಂತೆ ಕೇಳಿದಾಗ ಇನ್ನೂ ₹30 ಲಕ್ಷ ವರ್ಗಾಯಿಸಿದರೆ ಮಾತ್ರ ಹಣ ನೀಡಲಾಗುವುದು ಎಂದು ತಿಳಿಸಿದ್ದಾರೆ.
ಧನಂಜಯ ತಮ್ಮ ಸ್ನೇಹಿತರ ಜತೆ ವಿಚಾರಿಸಿ ಮೋಸ ಹೋಗಿರುವುದು ಅರಿವಾದ ನಂತರ ಸೈಬರ್ ಠಾಣೆಗೆ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.
ಜಯನಗರದ ಎಂಜಿನಿಯರ್ ಕೆ.ಸತ್ಯನಾರಾಯಣಗುಪ್ತ ಎಂಬುವರಿಗೆ ಇದೇ ರೀತಿಯಾಗಿ ಆಮಿಷ ತೋರಿಸಿ ₹29.51 ಲಕ್ಷ ವಂಚಿಸಿದ್ದಾರೆ. ‘FYERS APP’ ಆ್ಯಪ್‌ನಲ್ಲಿ ಹಣ ಹೂಡಿಕೆ ಮಾಡಿ ಮೋಸ ಹೋಗಿದ್ದಾರೆ.
ಇನ್‌ಸ್ಟಾಗ್ರಾಮ್‌ನಲ್ಲಿ ಷೇರು ಮಾರುಕಟ್ಟೆಯ ಮಾಹಿತಿ ಪಡೆದಿದ್ದಾರೆ. ನಂತರ ಸದರಿ ಆ್ಯಪ್‌ನಲ್ಲಿ ಖಾತೆ ತೆರೆದು ಹಣ ಹೂಡಿಕೆ ಮಾಡಿದ್ದಾರೆ. ಅವರ ಖಾತೆಯಲ್ಲಿ ಹೂಡಿಕೆ ಮಾಡಿದ ಹಣಕ್ಕಿಂತ ಹೆಚ್ಚಿನ ಹಣ ತೋರಿಸಿದೆ. ವಿತ್ ಡ್ರಾ ಮಾಡಿಕೊಳ್ಳುವಾಗ ಶೇ 20 ರಷ್ಟು ಕಮಿಷನ್ ಹಣ ವರ್ಗಾಯಿಸಿದರೆ ಮಾತ್ರ ಹಣ ನೀಡಲಾಗುವುದು ಎಂದು ತಿಳಿಸಿದ್ದಾರೆ. ವಂಚನೆಗೆ ಒಳಗಾದ ವಿಷಯ ತಿಳಿದ ನಂತರ ಠಾಣೆಯ ಮೆಟ್ಟಿಲು ಹತ್ತಿದ್ದು, ಸತ್ಯನಾರಾಯಣಗುಪ್ತ ನೀಡಿದ ದೂರಿನ ಮೇರೆಗೆ ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಸ್ಕ್ಯಾನ್ ಮಾಡುವ ಮುನ್ನ ಎಚ್ಚರ
ಉಡುಗೊರೆ ಕಾರ್ಡ್ ಮತ್ತು ರಿಯಾಯಿತಿಗಾಗಿ ಅಪರಿಚಿತರು ಕಳುಹಿಸುವ ‘ಕ್ಯೂಆರ್ ಕೋಡ್’ ಸ್ಕ್ಯಾನ್ ಮಾಡಬೇಡಿ. ಉಡುಗೊರೆ ಕೊಡುವ ನೆಪದಲ್ಲಿ ನಿಮ್ಮನ್ನು ವಂಚಿಸಲು ಯತ್ನಿಸುತ್ತಾರೆ. ದುರಾಸೆಗೆ ಒಳಗಾಗಬೇಡಿ ಎಂದು ಪೊಲೀಸರು ಎಚ್ಚರಿಸಿದ್ದಾರೆ. ಈ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ವಾಟ್ಸ್ ಆ್ಯಪ್ ಮತ್ತು ಟೆಲಿಗ್ರಾಮ್‌ಗಳಲ್ಲಿ ಕ್ಯೂಆರ್ ಕೋಡ್ ಬಳಸಬೇಡಿ. ಸ್ಕ್ಯಾನ್ ಮಾಡುವ ಮೊದಲು ಅದರ ಬಗ್ಗೆ ಯೋಚಿಸಿ ಎಂದು ಮನವಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.