ADVERTISEMENT

ರೋಗಿಗಳು ಹೆಚ್ಚಾದರೆ ಶಿರಾ ಆಸ್ಪತ್ರೆ ಬಳಕೆ

ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2020, 5:04 IST
Last Updated 4 ಆಗಸ್ಟ್ 2020, 5:04 IST
ಶಿರಾದ ಸಾರ್ವಜನಿಕ ಆಸ್ಪತ್ರೆಗೆ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಸೋಮವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು
ಶಿರಾದ ಸಾರ್ವಜನಿಕ ಆಸ್ಪತ್ರೆಗೆ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಸೋಮವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು   

ಶಿರಾ: ನಗರದ ತಾಯಿ ಮತ್ತು ಮಗು ಆಸ್ಪತ್ರೆಯನ್ನು ಕೊವಿಡ್-19 ಆಸ್ಪತ್ರೆಯಾಗಿ ಮಾರ್ಪಡಿಸಲಾಗಿದೆ. ಅಲ್ಲಿ ಹೆಚ್ಚಿನ ಹಾಸಿಗೆಗಳನ್ನು ಮೀಸಲಿರಿಸಿ. ತುಮಕೂರಿನಲ್ಲಿ ರೋಗಿಗಳ ಸಂಖ್ಯೆ ಹೆಚ್ಚಾದರೆ ಪರ್ಯಾಯವಾಗಿ ಶಿರಾ ಆಸ್ಪತ್ರೆಯನ್ನು ಬಳಕೆ ಮಾಡಿಕೊಳ್ಳಲಾಗುವುದು. ಆದ್ದರಿಂದ ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಿ ಎಂದು ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಸೂಚಿಸಿದರು.

ನಗರಸಭೆ ಸಭಾಂಗಣದಲ್ಲಿ ಸೋಮವಾರ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದರು.

ತಾಲ್ಲೂಕಿನಲ್ಲಿ ಕೊರೊನಾ ಪ್ರಕರಣಗಳು ಹೆಚ್ಚುತ್ತಿದ್ದು, ಈ ಬಗ್ಗೆ ಅಧಿಕಾರಿಗಳು ಎಚ್ಚರ ವಹಿಸಿ ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳಬೇಕು. ಕೊವಿಡ್–19 ಪರೀಕ್ಷೆಗಳನ್ನು ಹೆಚ್ಚು ಮಾಡುವ ಮೂಲಕ ಕೊರೊನಾ ಸೋಂಕು ಹರಡುವುದನ್ನು ನಿಯಂತ್ರಿಸಬೇಕು. ಎಂದು ಸೂಚನೆ ನೀಡಿದರು.

ADVERTISEMENT

ಸೋಂಕಿತರ ಪ್ರಾಥಮಿಕ ಸಂಪರ್ಕದಲ್ಲಿರುವವರ ಬಗ್ಗೆ ಮಾತ್ರ ಅಧಿಕಾರಿಗಳು ಗಮನ ಹರಿಸುತ್ತಿರುವುದರಿಂದ ಕೊರೊನಾ ಪ್ರಕರಣಗಳು ಹೆಚ್ಚುತ್ತಿವೆ. ದ್ವಿತೀಯ ಸಂಪರ್ಕದಲ್ಲಿ ಇದ್ದವರ ಬಗ್ಗೆ ಸಹ ಎಚ್ಚರ ವಹಿಸಿ ಅವರನ್ನು ಪತ್ತೆ ಮಾಡುವ ಮೂಲಕ ಕೊರೊನಾ ಸರಣಿಯನ್ನು ತುಂಡರಿಸಲು ಆದ್ಯತೆ ನೀಡಬೇಕು ಎಂದರು.

ಜನರು ರಸ್ತೆಯಲ್ಲಿ ಉಗಿಯದಂತೆ ಜಾಗೃತಿ ಮೂಡಿಸಬೇಕು. ಆಸ್ಪತ್ರೆಯ ಆವರಣದಲ್ಲೂ ಜನರು ಎಲ್ಲೆಂದರಲ್ಲಿ ಉಗಿಯುವುದರಿಂದ ಸೋಂಕು ಹರಡಲು ಕಾರಣವಾಗುತ್ತಿದೆ. ಪೊಲೀಸರನ್ನು ಬಳಸಿಕೊಂಡು ಜನರು ಉಗಿಯದಂತೆ ಎಚ್ಚರಿಕೆ ನೀಡಬೇಕು ಎಂದು ಸೂಚಿಸಿದರು.

ಸಾರ್ವಜನಿಕ ಆಸ್ಪತ್ರೆಯಲ್ಲಿ ಒಂದೇ ಗೇಟ್ ಮೂಲಕ ಕೊವಿಡ್ ಪರೀಕ್ಷೆಗೆ ಬರುವರು. ಕೊರೊನಾ ದೃಢಪಟ್ಟವರು ಹಾಗೂ ಸಾಮಾನ್ಯ ರೋಗಿಗಳು ಓಡಾಡುತ್ತಿರುವುದರಿಂದ ಸೋಂಕು ಹರಡುವ ಸಾಧ್ಯತೆ ಇದೆ. ಅದ್ದರಿಂದ ಸಾಮಾನ್ಯ ರೋಗಿಗಳಿಗೆ ಪ್ರತ್ಯೇಕ ಗೇಟ್ ಮೂಲಕ ಪ್ರವೇಶಕ್ಕೆ ಅವಕಾಶ ಮಾಡಿ ಎಂದು ಸೂಚಿಸಿದರು.

ಮಧುಗಿರಿ ಉಪ ವಿಭಾಗಾಧಿಕಾರಿ ನಂದಿನಿ ದೇವಿ, ತಹಶೀಲ್ದಾರ್ ನಾಹಿದಾ ಜಮ್ ಜಮ್, ಮೋಹನ್ ಕುಮಾರ್, ನಗರಸಭೆ ಪೌರಾಯುಕ್ತ ಪರಮೇಶ್ವರಪ್ಪ, ತಾಲ್ಲೂಕು ವೈದ್ಯಾಧಿಕಾರಿ ಡಾ.ಅಫ್ಜಲ್ ಉರ್ ರೆಹಮಾನ್, ಡಾ.ಶ್ರೀನಾಥ್, ಡಿವೈಎಸ್‌ಪಿ ಕುಮಾರಪ್ಪ,
ಸಿಪಿಐ ಶಿವಕುಮಾರ್, ಹನುಮಂತಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.