ADVERTISEMENT

ಅಮಾನವೀಯ ಶಕ್ತಿಗಳು ಸಂಘಟಿತ

‘ವೀಚಿ ಸಾಹಿತ್ಯ ಪ್ರಶಸ್ತಿ‍–2019’ ಪ್ರದಾನ ಸಮಾರಂಭದಲ್ಲಿ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಆತಂಕ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2020, 15:51 IST
Last Updated 23 ಫೆಬ್ರುವರಿ 2020, 15:51 IST
ತುಮಕೂರು ಕನ್ನಡ ಭವನದಲ್ಲಿ ಭಾನುವಾರ ‘ವೀಚಿ ಸಾಹಿತ್ಯ ಪ್ರಶಸ್ತಿ‍–2019’ ಪ್ರದಾನ ಮಾಡಲಾಯಿತು.
ತುಮಕೂರು ಕನ್ನಡ ಭವನದಲ್ಲಿ ಭಾನುವಾರ ‘ವೀಚಿ ಸಾಹಿತ್ಯ ಪ್ರಶಸ್ತಿ‍–2019’ ಪ್ರದಾನ ಮಾಡಲಾಯಿತು.   

ತುಮಕೂರು: ಸಾಹಿತ್ಯವು ತನ್ನೊಳಗಿನ ಅಭಿವ್ಯಕ್ತಿ ಸ್ವಾತಂತ್ರ್ಯ, ಲೋಕಜ್ಞಾನ, ಆತ್ಮಗೌರವದಿಂದಾಗಿಯೇ ಇಂದಿಗೂ ಜಗತ್ತಿನೊಳಗಡೆ ಮತ್ತೆ–ಮತ್ತೆ ಚರ್ಚೆಗೀಡಾಗುತ್ತಿದೆ ಎಂದು ಸಾಹಿತಿ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.

ನಗರದ ಕನ್ನಡ ಭವನದಲ್ಲಿ ವೀಚಿ ಸಾಹಿತ್ಯ ಪ್ರತಿಷ್ಠಾನದಿಂದ ಏರ್ಪಡಿಸಿದ್ದ ‘ವೀಚಿ ಸಾಹಿತ್ಯ ಪ್ರಶಸ್ತಿ‍–2019’ ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

‘ನಾವು ಇಂದು ಆತಂಕದ ದಿನಗಳಲ್ಲಿ ಬದುಕುತ್ತಿದ್ದೇವೆ. ಹೋರಾಟಗಾರರ, ಕವಿ, ಸಾಹಿತಿಗಳ ಬಾಯಿ ಮುಚ್ಚಿಸಲು ಅಮಾನವೀಯ ಶಕ್ತಿಗಳು ಹೆಚ್ಚು ಸಂಘಟಿತವಾಗುತ್ತಿವೆ. ನೈತಿಕ ಪ್ರತಿಭಟನೆಯ ಶಕ್ತಿ ಕುಗ್ಗಿಸುವ ಯತ್ನ ನಿರಂತರವಾಗಿ ನಡೆಯುತ್ತಿದೆ. ಇಂತಹ ಸನ್ನಿವೇಶದ ಬಗ್ಗೆ ಅತ್ಯಂತ ವಿಚೇಚನೆ, ಸಂಯಮದಿಂದ ಯೋಚಿಸಬೇಕಿದೆ’ ಎಂದು ಹೇಳಿದರು.

ADVERTISEMENT

ವೀಚಿ ಸಾಹಿತ್ಯ ಪ್ರತಿಷ್ಠಾನದ ಅಧ್ಯಕ್ಷ ಎಂ.ಬಸವಯ್ಯ ಮಾತನಾಡಿ, ‘ವೀ.ಚಿಕ್ಕವೀರಯ್ಯ(ವೀಚಿ) ಬೇಸಾಯದ ಜತೆಗೆ ಸಾಹಿತ್ಯದ ಕೃಷಿ ಮಾಡಿದ ಅಪರೂಪದ ಸಾಹಿತಿ. ಅವರು ವ್ಯವಸಾಯ ಮತ್ತು ಸಾಹಿತ್ಯವನ್ನು ಏಕಕಾಲದಲ್ಲಿ ಮಾಡುತ್ತಿದ್ದರು. ಕನ್ನಡ ಸಾಹಿತ್ಯ ಲೋಕಕ್ಕೆ ತಮ್ಮದೇ ಆದ ಕೊಡುಗೆ ನೀಡಿರುವ ಅವರ ಹೆಸರಿನಲ್ಲಿ 2002 ರಿಂದ ಪ್ರಶಸ್ತಿ ನೀಡುತ್ತ ಬರಲಾಗುತ್ತಿದೆ’ ಎಂದರು.

ಸಾಹಿತಿ ಡಾ.ವಸುಂಧರಾ ಭೂಪತಿ ಅವರು ಭುವನಾ ಹಿರೇಮಠ ಅವರ ‘ಟ್ರಯಲ್‌ ರೂಮಿನ ಅಪ್ಸರೆಯರು’ ಕವನ ಸಂಕಲನದ ಕುರಿತು ಮಾತನಾಡಿ, ‘ಹೆಣ್ಣಿನ ತಳಮಳ, ಸ್ಥೈರ್ಯ, ಅಂತರಂಗ ಸೆಳೆಯುವ ಗುಣ ಭುವನಾ ಅವರ ಕವಿತೆಗಳಲ್ಲಿವೆ. ಮೊದಲ ಸಂಕಲನದಲ್ಲೇ ಲೇಖಕಿ ಸಾಕಷ್ಟು ಭರವಸೆ ಮೂಡಿಸಿದ್ದಾರೆ. ಈ ಕೃತಿ ಕನ್ನಡ ಕಾವ್ಯ ಪ್ರಪಂಚದಲ್ಲಿ ಹೊಸ ಪರಿಭಾಷೆ ಹುಟ್ಟುಹಾಕಿದೆ’ ಎಂದರು.

ಸಾಹಿತಿ ಡಾ.ಕರಿಗೌಡ ಬೀಚನಹಳ್ಳಿ ಅವರು ಎಸ್.ಗಂಗಾಧರಯ್ಯ ಅವರ ‘ದೇವರ ಕುದುರೆ’ ಕಥಾ ಸಂಕಲದ ಕುರಿತು ಮಾತನಾಡಿ, ‘ಮನುಷ್ಯನ ಸಂಕಟ, ದುಃಖ ದುಮ್ಮಾನಗಳ ನಡುವೆ ಚಲನಶೀಲವಾದ ಜೀವಂತಿಕೆ ದೇವರ ಕುದುರೆ ಕಥಾ ಸಂಕಲನದಲ್ಲಿದೆ’ ಎಂದು ಹೇಳಿದರು.

ಲೇಖಕ ಡಾ.ರವಿಕುಮಾರ ನೀಹ, ಸುರೇಶ್ ನಾಗಲಮಡಿಕೆ ಅವರ ‘ಹಲವು ಬಣ್ಣದ ಹಗ್ಗ’ ವಿಮರ್ಶಾಕೃತಿಗಳ ಬಗ್ಗೆ ಮಾತನಾಡಿ, ‘ಈ ವಿಮರ್ಶಾ ಕೃತಿಯೂ ಹಲವು ವೈವಿಧ್ಯತೆಯ ರೂಪಕವಾಗಿ ಕಾಣುತ್ತದೆ. ಇಲ್ಲಿ ಲೇಖಕರು ತಾತ್ವಿಕತೆಯನ್ನು ಪ್ರಾಯೋಗಿಕವಾಗಿ, ಸಮಗ್ರವಾಗಿ ಕಟ್ಟುವ ಪ್ರಯತ್ನ ಮಾಡಿದ್ದಾರೆ’ ಎಂದು ತಿಳಿಸಿದರು.

ಪ್ರಶಸ್ತಿ ಪುರಸ್ಕೃತರಾದ ಎಸ್.ಗಂಗಾಧರಯ್ಯ, ‘ತಮಗೆ ಸಂದಿರುವ ಬೆಸಗರಹಳ್ಳಿ ರಾಮಣ್ಣ, ಅನಂತಮೂರ್ತಿ, ವೀಚಿ ಹೆಸರಿನ ಪ್ರಶಸ್ತಿಗಳು ಬರಹದ ಪ್ರೀತಿ ಹೆಚ್ಚಿಸಿದೆ’ ಎಂದರು.

ಸುರೇಶ್ ನಾಗಲಮಡಿಕೆ, ‘ಈ ಪ್ರಶಸ್ತಿಯು ಗುರುತಿಸಲ್ಪಡದ ಲೇಖಕರಿಗೆ ಸಂದ ಗೌರವವಾಗಿದೆ’ ಎಂದು ಹೇಳಿದರು.

ಸಿ.ಎನ್.ಹನುಮಯ್ಯ ಕುರಿತು ಕಂಟಲಗೆರೆ ಸಣ್ಣಣ್ಣಯ್ಯ, ಎಂ.ಆರ್.ವೆಂಕಟೇಶ್ ಕುರಿತು ಎಂ.ಟಿ.ಶಿವಣ್ಣ ಮಾತನಾಡಿದರು. ವೀಚಿ ಸಾಹಿತ್ಯ ಪ್ರತಿಷ್ಠಾನದ ಕಾರ್ಯದರ್ಶಿ ಎಂ.ಎಚ್.ನಾಗರಾಜು, ರಾಣಿ ಚಂದ್ರಶೇಖರ್ ಹಾಗೂ ವೀಚಿ ಕುಟುಂಬಸ್ಥರು ಇದ್ದರು.

----

ಶೇ 90 ರಷ್ಟು ರಾಜಕಾರಣಿಗಳು ಭ್ರಷ್ಟರು

ರಾಜಕಾರಣ ಇಂದು ಅನೈತಿಕವಾಗಿದೆ. ಶೇ 90 ರಷ್ಟು ರಾಜಕಾರಣಿಗಳು ಭ್ರಷ್ಟರಾಗಿದ್ದಾರೆ. ತಮ್ಮ ಸ್ವಾರ್ಥಕ್ಕಾಗಿ ಸಿದ್ಧಾಂತ, ತತ್ವ ಮಾರಿಕೊಂಡು ನಮ್ಮೆದುರು ಮಾರಾಟದ ವಸ್ತುಗಳಾಗಿದ್ದಾರೆ. ಇಂತಹವರು ಅಂಬೇಡ್ಕರ್, ಗಾಂಧೀಜಿಯ ಬಗ್ಗೆ ಮಾತನಾಡುವ ಹಕ್ಕು ಕಳೆದುಕೊಂಡಿದ್ದಾರೆ. ನಮ್ಮ ಜನಗಳು ಇಂತಹವರನ್ನೇ ಪುನಃ ಆರಿಸಿ ಕಳುಹಿಸಿಸುತ್ತಿರುವುದು ಬೇಸರದ ಸಂಗತಿ ಎಂದು ಪ್ರೊ.ಎಸ್.ಜಿ.ಸಿದ್ದರಾಮಯ್ಯ ಹೇಳಿದರು.

---

ವೀಚಿ ಸಾಹಿತ್ಯ ಪ್ರಶಸ್ತಿ ಪುರಸ್ಕೃತರು

ವೀಚಿ ಸಾಹಿತ್ಯ ಪ್ರತಿಷ್ಠಾನದಿಂದ ಎಸ್.ಗಂಗಾಧರಯ್ಯ ಅವರ ‘ದೇವರ ಕುದುರೆ’ ಕಥಾ ಸಂಕಲನ ಮತ್ತು ಸುರೇಶ್ ನಾಗಲಮಡಿಕೆ ಅವರ ‘ಹಲವು ಬಣ್ಣದ ಹಗ್ಗ’ ವಿಮರ್ಶಾಕೃತಿಗಳಿಗೆ ‘ವೀಚಿ ಸಾಹಿತ್ಯ ಪ್ರಶಸ್ತಿ-2019’ ಪ್ರದಾನ ಮಾಡಲಾಯಿತು. ಭುವನಾ ಹಿರೇಮಠ ಅವರ ‘ಟ್ರಯಲ್ ರೂಮಿನ ಅಪ್ಸರೆಯರು’ ಕವನ ಸಂಕಲನಕ್ಕೆ ‘ವೀಚಿ ಉದಯೋನ್ಮುಖ ಸಾಹಿತ್ಯ ಪ್ರಶಸ್ತಿ-2019’ ಹಾಗೂ ಮೂಡಲಪಾಯ ಯಕ್ಷಗಾನ ಕಲಾವಿದ ಸಿ.ಎನ್.ಹನುಮಯ್ಯ ಅವರಿಗೆ ‘ವೀಚಿ ಜಾನಪದ ಪ್ರಶಸ್ತಿ’, ಎಂ.ಆರ್.ವೆಂಕಟೇಶ್ ಅವರಿಗೆ ‘ಕನಕಕಾಯಕ ಪ್ರಶಸ್ತಿ’ ಪ್ರದಾನ ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.