ADVERTISEMENT

ಶಿರಾ ಉಪಚುನಾವಣೆ: ಒಡೆದ ಮನಸ್ಸುಗಳಿಗೆ ತೇಪೆ

ಆರೋಪ ಪ್ರತ್ಯಾರೋಪದಿಂದ ದೂರವಾಗಿದ್ದ ಕಾಂಗ್ರೆಸ್ ನಾಯಕರು

ಡಿ.ಎಂ.ಕುರ್ಕೆ ಪ್ರಶಾಂತ
Published 21 ಸೆಪ್ಟೆಂಬರ್ 2020, 1:40 IST
Last Updated 21 ಸೆಪ್ಟೆಂಬರ್ 2020, 1:40 IST
ಟಿ.ಬಿ.ಜಯಚಂದ್ರ
ಟಿ.ಬಿ.ಜಯಚಂದ್ರ   

ತುಮಕೂರು: ಶಿರಾ ವಿಧಾನಸಭಾ ಕ್ಷೇತ್ರ ಉಪಚುನಾವಣೆಯು ಜಿಲ್ಲೆಯ ಕಾಂಗ್ರೆಸ್ ಮುಖಂಡರ ನಡುವಿನ ಒಡೆದ ಮನಸ್ಸುಗಳಿಗೆ ತಾತ್ಕಾಲಿಕವಾಗಿ ತೇಪೆ ಹಚ್ಚುವಂತೆ ಕಾಣುತ್ತಿವೆ. ಪರಸ್ಪರ ದೂರ ಸರಿದಿದ್ದ ಮುಖಂಡರನ್ನು ಒಂದೇ ಅಂಗಳದಲ್ಲಿ ಕುಳಿತುಕೊಳ್ಳುವಂತೆ ಮಾಡಿದೆ.

ಶಾಸಕ ಡಾ.ಜಿ.ಪರಮೇಶ್ವರ ನೇತೃತ್ವದಲ್ಲಿ ಉಪಚುನಾವಣೆ ನಿರ್ವಹಣಾ ಸಮಿತಿ ರಚಿಸಲಾಗಿದೆ. ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ ಸಹ ಸಂಚಾಲಕರಾಗಿದ್ದಾರೆ. ಸಂಭವನೀಯ ಅಭ್ಯರ್ಥಿ ಟಿ.ಬಿ.ಜಯಚಂದ್ರ, ಪತ್ನಿ ಸಮೇತ ರಾಜಣ್ಣ ಮನೆಗೆ ಭಾನುವಾರ ಭೇಟಿ ನೀಡಿದ್ದರು. ಈ ವೇಳೆ ಜಯಚಂದ್ರ ಅವರಿಗೆ ರಾಜಣ್ಣ ಬೆಂಬಲ ಘೋಷಿಸಿದ್ದಾರೆ.

ಜಿಲ್ಲೆಯಲ್ಲಿ ಜಿ.ಪರಮೇಶ್ವರ ಮತ್ತು ಟಿ.ಬಿ.ಜಯಚಂದ್ರ ನಡುವೆ ಸಂಬಂಧ ಉತ್ತಮವಾಗಿದೆ. ಆದರೆ ರಾಜಣ್ಣ ಪದೇ ಪದೇ ಈ ಇಬ್ಬರು ಮುಖಂಡರನ್ನು ಟೀಕಿಸುತ್ತಲೇ ಇದ್ದರು. ಕಳೆದ ವಿಧಾನಸಭಾ ಚುನಾವಣೆ ತರುವಾಯ ಕಾಂಗ್ರೆಸ್‌ ನಾಯಕರ ನಡುವಿನ ಬೀದಿ ಜಗಳ ರಾಜ್ಯ ಮಟ್ಟದಲ್ಲಿ ಸದ್ದು ಮಾಡಿತ್ತು. ಕೆಪಿಸಿಸಿಗೂ ಇರುಸು ಮುರುಸಾಗಿತ್ತು.

ADVERTISEMENT

ಡಾ.ಜಿ.ಪರಮೇಶ್ವರ ಉಪಮುಖ್ಯಮಂತ್ರಿ ಆಗಿದ್ದಾಗ ಅವರನ್ನು ‘ಝೀರೊ ಟ್ರಾಫಿಕ್ ಮಂತ್ರಿ’ ಎಂದು ಕೆ.ಎನ್.ರಾಜಣ್ಣ ಪದೇ ಪದೇ ಲೇವಡಿ ಮಾಡುತ್ತಿದ್ದರು. ತುಮಕೂರಿನಲ್ಲಿ ಇಬ್ಬರು ನಾಯಕರ ಬೆಂಬಲಿಗರು ಶಕ್ತಿ ಪ್ರದರ್ಶನಕ್ಕೂ ಮುಂದಾಗಿದ್ದರು. ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್–ಜೆಡಿಎಸ್ ಮೈತ್ರಿ ಅಭ್ಯರ್ಥಿ ಎಚ್‌.ಡಿ.ದೇವೇಗೌಡ ಸೋಲಿಗೆ ಕಾಂಗ್ರೆಸ್ ನಾಯಕರ ನಡುವಿನ ಭಿನ್ನಾಭಿಪ್ರಾಯವೂ ಪ್ರಮುಖ ಕಾರಣ.

ರಾಜಣ್ಣ ಮೇಲೆ ಶಿಸ್ತು ಕ್ರಮಕೈಗೊಳ್ಳಲು ಸಿದ್ದರಾಮಯ್ಯ ತಡೆ ಆಗಿದ್ದಾರೆ ಎನ್ನುವ ಮಾತು ಜಿಲ್ಲಾ ಕಾಂಗ್ರೆಸ್ ಪಡಸಾಲೆಯಲ್ಲಿ ಪ್ರಬಲವಾಗಿ ಕೇಳಿತ್ತು. ಇಂದಿಗೂ ಜಿಲ್ಲೆಯ ಕಾಂಗ್ರೆಸ್‌ ನಾಯಕರು, ‘ಪರಮೇಶ್ವರ ಅವರೇ ನಮ್ಮ ಹೈಕಮಾಂಡ್’ ಎಂದರೆ, ರಾಜಣ್ಣ, ‘ಸಿದ್ದರಾಮಯ್ಯ ನಮ್ಮ ನಾಯಕ’ ಎನ್ನುವರು.

‘ನನ್ನ ಮಗ ವಿಧಾನಪರಿಷತ್ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾಗ ಆತನ ಪರವಾಗಿ ಜಯಚಂದ್ರ ಕೆಲಸ ಮಾಡಲಿಲ್ಲ. ಈ ಕಾರಣದಿಂದ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜಯಚಂದ್ರ ಸೋಲಬೇಕಾಯಿತು’ ಎಂದಿದ್ದರು ರಾಜಣ್ಣ. ಹೀಗೆ ರಾಜ್ಯ ಮಟ್ಟದ ಈ ನಾಯಕರು ಪರಸ್ಪರ ಟೀಕೆಗಳ ಕಾರಣದಿಂದ ಒಬ್ಬರ ಮುಖವನ್ನು ಒಬ್ಬರು ನೋಡಲಾರದಷ್ಟು ದೂರವಾಗಿದ್ದರು.

ಕೆ.ಎನ್.ರಾಜಣ್ಣ ಮತ್ತು ಡಾ.ಜಿ.ಪರಮೇಶ್ವರ ಅವರ ನಡುವೆ ಸಂಧಾನಕ್ಕೆ ಜಿಲ್ಲೆಯವರೇ ಆದ ರಾಜ್ಯದ ಪ್ರಮುಖ ಸಾಹಿತಿಯೊಬ್ಬರು ಪ್ರಯತ್ನಿಸಿ ವಿಫಲರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.