ADVERTISEMENT

ಶಿರಾದಲ್ಲಿ ಮತಬೇಟೆಗೆ ಮೂರು ಪಕ್ಷಗಳಿಂದ ‘ನೇ‌‌ರಸಾಲ’ದ ಅಸ್ತ್ರ!

ಮತದಾರರ ದಾಖಲೆ ಸಂಗ್ರಹಿಸುತ್ತಿರುವ ಕಾರ್ಯಕರ್ತರು

ಡಿ.ಎಂ.ಕುರ್ಕೆ ಪ್ರಶಾಂತ
Published 3 ಅಕ್ಟೋಬರ್ 2020, 19:31 IST
Last Updated 3 ಅಕ್ಟೋಬರ್ 2020, 19:31 IST
   

ತುಮಕೂರು: ಶಿರಾ ಕ್ಷೇತ್ರದಲ್ಲಿ ಮತದಾರರ ಮನ ಗೆಲ್ಲಲು ಎಲ್ಲ ರಾಜಕೀಯ ಪಕ್ಷಗಳು ಈಗಾಗಲೇ ನಾನಾ ರೀತಿಯ ಕಸರತ್ತುಗಳನ್ನು ಆರಂಭಿಸಿವೆ. ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿ ಮುಖಂಡರುಗ್ರಾಮೀಣ ಜನರಿಗೆ ‘ನೇರಸಾಲ’ ಕೊಡಿಸುವ ಆಮಿಷ ಒಡ್ಡುತ್ತಿದ್ದಾರೆ. ಕ್ಷೇತ್ರದಲ್ಲಿ ‘ನೇರಸಾಲ’ ತಂತ್ರವು ಮತಬೇಟೆಯ ಹೊಸ ಅಸ್ತ್ರವಾಗಿ ಬಳಕೆಯಾಗುತ್ತಿದೆ.

ರಾಜಕೀಯ ಪಕ್ಷಗಳ ಕಾರ್ಯಕರ್ತರು ನೇರಸಾಲ ಕೊಡಿಸುವುದಾಗಿ ಜನರಿಂದ ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಪಾಸ್‌ಬುಕ್ ಸೇರಿದಂತೆ ಅಗತ್ಯ ದಾಖಲೆಗಳ ಜೆರಾಕ್ಸ್‌ ಪ್ರತಿಗಳನ್ನು‌‌‍ ಸಂಗ್ರಹಿಸುತ್ತಿದ್ದಾರೆ. ಗ್ರಾಮೀಣ ಭಾಗಗಳ ಸ್ತ್ರೀ ಶಕ್ತಿ ಸಂಘಗಳು, ಮಹಿಳೆಯರು, ಹಿಂದುಳಿದ ವರ್ಗ, ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮತದಾರರೇ ನೇರಸಾಲದ ಟಾರ್ಗೆಟ್‌!

ಸಾಲದ ಜತೆ ಮನ್ನಾ ಭರವಸೆ

ADVERTISEMENT

ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ, ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಅಭಿವೃದ್ಧಿ ನಿಗಮಗಳಿಂದ ಕುಟುಂಬಕ್ಕೆ ₹50 ಸಾವಿರ ನೇರಸಾಲ ಕೊಡಿಸುವುದಾಗಿ ರಾಜಕೀಯ ಪಕ್ಷಗಳ ಮುಖಂಡರು ಆಮಿಷ ಒಡ್ಡುತ್ತಿದ್ದಾರೆ. ಇದರ ಜೊತೆಗೆ ಭವಿಷ್ಯದಲ್ಲಿ ಈ ಸಾಲಮನ್ನಾ ಆಗಲಿದೆ ಎಂಬ ಆಸೆಯನ್ನೂ ಈಗಲೇ ಚಿಗುರಿಸಿದ್ದಾರೆ.

‘ಆಶ್ರಯ ಮನೆ, ಗಂಗಾ ಕಲ್ಯಾಣ ಯೋಜನೆಯಲ್ಲೂ ಸೌಲಭ್ಯ ಕಲ್ಪಿಸುತ್ತೇವೆ. ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಂದಲೂ ಸಾಲ ಕೊಡಿಸುತ್ತೇವೆ’ ಎಂದು ಕಾರ್ಯಕರ್ತರು ಮತದಾರರ ಮನೆಗಳಿಗೆ ಎಡತಾಕುತ್ತಿದ್ದಾರೆ.

ಮತದಾರರ ಮೇಲೆ ಪ್ರಭಾವ ಬೀರುವ, ಯಾವುದೇ ಪಕ್ಷಕ್ಕೆ ಸೇರದ ಹಳ್ಳಿಗಳ ಪ್ರಭಾವಶಾಲಿ ಮುಖಂಡರು ಮತ್ತು ನಾಯಕರನ್ನು ರಾಜಕೀಯ ಪಕ್ಷಗಳ ನಾಯಕರು ಸಂಪರ್ಕಿಸುತ್ತಿದ್ದಾರೆ. ಗಂಗಾ ಕಲ್ಯಾಣ ಯೋಜನೆ ಅಡಿಅವರಿಗೆ ಕೊಳವೆಬಾವಿ ಕೊರೆಸಿ ಕೊಡುವ ಆಶ್ವಾಸನೆ ನೀಡುತ್ತಿದ್ದಾರೆ.

ಕಳೆದ ವಿಧಾನಸಭಾ ಚುನಾವಣೆ ಸಮಯದಲ್ಲಿ ಶಿರಾ, ಕೊರಟಗೆರೆ, ಮಧುಗಿರಿ ಕ್ಷೇತ್ರಗಳ ಮತದಾರರಿಗೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಂದ ಸಾಲ ಕೊಡಿಸುವ ಆಮಿಷವೊಡ್ಡಲಾಗಿತ್ತು.

ವಿಡಿಯೊ ವೈರಲ್‌

ಈ ನೇರಸಾಲ ಕೊಡಿಸುವ ವಿಚಾರದಲ್ಲಿ ಮೂರೂ ಪಕ್ಷಗಳು ಆರೋಪ– ಪ್ರತ್ಯಾರೋಪದಲ್ಲಿ ತೊಡಗಿವೆ.

‘ಪ್ರಮುಖವಾಗಿ ಬಿಜೆಪಿ ಕಾರ್ಯಕರ್ತರೇ ನೇ‌‌ರಸಾಲ ಕೊಡಿಸುವ ಆಮಿಷ ಒಡ್ಡುತ್ತಿದ್ದಾರೆ’ ಎಂದು ಭಾಗ್ಯಲಕ್ಷ್ಮಿ ಪ್ರಕಾಶ್ ಎಂಬುವರು ಆರೋಪಿಸಿದ್ದಾರೆ. ಈ ಬಗ್ಗೆ ವ್ಯಕ್ತಿಯೊಬ್ಬರು ಮಾತನಾಡಿದ ವಿಡಿಯೊವನ್ನು ಫೇಸ್‌ಬುಕ್ ಖಾತೆಯಲ್ಲಿ ಅಪ್‌ಲೋಡ್‌ ಮಾಡಿದ್ದಾರೆ. ಈ ವಿಡಿಯೊ ಕ್ಷೇತ್ರದಲ್ಲಿ ವೈರಲ್‌ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.