ADVERTISEMENT

ಶಿರಾ: ಮೂರೂವರೆ ತಿಂಗಳಲ್ಲಿ 234 ಬೆಂಕಿ ಅವಘಡ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2025, 7:25 IST
Last Updated 16 ಏಪ್ರಿಲ್ 2025, 7:25 IST
ಶಿರಾ ಅಗ್ನಿಶಾಮಕ ಠಾಣೆ
ಶಿರಾ ಅಗ್ನಿಶಾಮಕ ಠಾಣೆ   

ಶಿರಾ: ತಾಲ್ಲೂಕಿನಲ್ಲಿ ಬೇಸಿಗೆಯ ಪ್ರಖರತೆ ಹೆಚ್ಚುತ್ತಿದ್ದು, ಬೆಂಕಿ ಅವಘಡಗಳು ಹೆಚ್ಚಿವೆ. ಅಗ್ನಿಶಾಮಕ ಇಲಾಖೆಯ ಮಾಹಿತಿಯಂತೆ 2025ರ ಜನವರಿಯಿಂದ ಏಪ್ರಿಲ್ 15ರ ವರೆಗೆ ತಾಲ್ಲೂಕಿನ 234 ಕಡೆ ಬೆಂಕಿ ಬಿದ್ದಿದ್ದು ಲಕ್ಷಾಂತರ ರೂಪಾಯಿ‌ ನಷ್ಟ ಸಂಭವಿಸಿದೆ.

ತಾಲ್ಲೂಕಿನಲ್ಲಿ ಸದ್ಯ ಒಂದಲ್ಲಾ ಒಂದು ಕಡೆ ಬೆಂಕಿ ಬೀಳುತ್ತಲೇ ಇದೆ. ತಾಲ್ಲೂಕಿನಲ್ಲಿ ಬೆಂಕಿ ಬೀಳುವ ಪ್ರಕರಣಗಳು ಹೆಚ್ಚು ದಾಖಲಾಗುತ್ತಿವೆ. ಕೆಲವೆಡೆ ಬೆಂಕಿ ಬಿದ್ದು ಸುಟ್ಟು ಹೋದರೂ ಪ್ರಕರಣಗಳು ದಾಖಲಾಗಿಲ್ಲ.

ತಾಲ್ಲೂಕಿನ ಬಹುತೇಕ ಕಡೆಗಳಲ್ಲಿ ಹುಲ್ಲು ಒಣಗಿದೆ. ಸ್ವಲ್ಪ ಬೆಂಕಿ ಬಿದ್ದರೂ ಇಡೀ ಪ್ರದೇಶಕ್ಕೆ ಕ್ಷಣಮಾತ್ರದಲ್ಲಿ ವ್ಯಾಪಿಸುತ್ತದೆ.

ADVERTISEMENT

ಜನವರಿಯಲ್ಲಿ 28, ಫೆಬ್ರುವರಿಯಲ್ಲಿ 96 ಮಾರ್ಚ್– 86 ಮತ್ತು ಏಪ್ರಿಲ್‌ನಲ್ಲಿ ಈವರೆಗೆ 24 ಕಡೆಗಳಲ್ಲಿ ಬೆಂಕಿ ಬಿದ್ದು ಒಟ್ಟು 234 ಕಡೆ ಅಗ್ನಿ ಅವಘಡಗಳು ದಾಖಲಾಗಿವೆ.

ಗ್ರಾಮಾಂತರ ಪ್ರದೇಶದಲ್ಲಿ ಹೆಚ್ಚು ಅನಾಹುತಗಳು ಸಂಭವಿಸುತ್ತಿವೆ. ತೋಟ, ಬಣವೆ, ಅರಣ್ಯ ಪ್ರದೇಶ, ಗುಡಿಸಲು, ವಾಹನಗಳು ಬೆಂಕಿಗೆ ಆಹುತಿ ಆಗಿವೆ.

ಹೆಚ್ಚಾಗಿ ಬಯಲಲ್ಲಿ ಮತ್ತು ಜಮೀನಿನಲ್ಲಿ ಬೆಳೆದಿರುವ ಹುಲ್ಲಿಗೆ ಬೆಂಕಿ ಬಿದ್ದಿರುವ ಪ್ರಕರಣಗಳು ಹೆಚ್ಚಾಗಿವೆ. ಜಮೀನು ಮಾಲೀಕರು ಜಮೀನು ಸ್ವಚ್ಛ ಮಾಡುವ ನೆಪದಲ್ಲಿ ಬೆಂಕಿ ಹಚ್ಚುವ ಪ್ರಕರಣ ಹೆಚ್ಚುತ್ತಿವೆ. ಧೂಮಪಾನ ಮಾಡುವರು, ಕುಡುಕರು, ವಿಕೃತ ಮನಸ್ಸಿನವರು ಸೇರಿದಂತೆ ಹಲವು ಕಾರಣಗಳಲ್ಲಿ ಬೆಂಕಿ ಬೀಳುತ್ತಿದೆ. ಈ ಬೆಂಕಿ ಸುತ್ತಮುತ್ತಲಿನ ಪ್ರದೇಶಗಳಿಗೆ ವ್ಯಾಪಿಸಿ ಅಪಾರ ಪ್ರಮಾಣದ ಸಸ್ಯ ಮತ್ತು ಪ್ರಾಣಿ ಸಂಕುಲ ನಾಶವಾಗುತ್ತಿದೆ. ಈ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳು ಜಾಗೃತಿ ಮೂಡಿಸುವುದು ಅವಶ್ಯಕ ಎನ್ನುವುದು ಪರಿಸರ ಪ್ರೇಮಿಗಳ ಆಗ್ರಹ.

ದೊಡ್ಡ ಪ್ರಮಾಣದಲ್ಲಿ ತಾಲ್ಲೂಕಿನಲ್ಲಿ ಬೆಂಕಿ ಪ್ರಕರಣ ಕಾಣಿಸಿಕೊಳ್ಳುತ್ತಿವೆ. ಆದರೆ ಬೆಂಕಿ ನಂದಿಸಲು ಅಗ್ನಿಶಾಮಕ ದಳದಲ್ಲಿ ಇರುವುದು ಒಂದೇ ವಾಹನ. ಹಿಂದೆ ಎರಡು ವಾಹನಗಳಿದ್ದು ಅದರಲ್ಲಿ ಒಂದು ವಾಹನವನ್ನು ವಾಪಸ್ಸು ಪಡೆಯಲಾಗಿದೆ. ನೋಂದಣಿಯಾಗಿ 15 ವರ್ಷವಾದ ಕಾರಣ ಅವಧಿ ಮುಗಿದಿದೆ ಎಂದು ವಾಹನ ವಾಪಸ್ ಪಡೆದಿದ್ದು, ಈಗ ಇರುವ ವಾಹನದ ಅವಧಿ ಸಹ ಮುಂದಿನ ವರ್ಷ ಮುಗಿಯಲಿದೆ ಎಂದರು.

ಶಿರಾ ಅಗ್ನಿಶಾಮಕ ದಳಕ್ಕೆ‌ 27 ಹುದ್ದೆಗಳು ಮಂಜೂರಾಗಿದ್ದು ಇದರಲ್ಲಿ 17 ಜನ ಕೆಲಸ ನಿರ್ವಹಿಸುತ್ತಿದ್ದಾರೆ. ಜೊತೆಗೆ ಒಂದು ಅಗ್ನಿಶಾಮಕ ವಾಹನ ಮಾತ್ರ ಕೆಲಸ ನಿರ್ವಹಿಸುತ್ತಿದೆ. ಒಂದೇ ಒಂದು ವಾಹನ ಇರುವುದರಿಂದ ಒಂದೇ ಸಮಯದಲ್ಲಿ ಹಲವೆಡೆ ಬೆಂಕಿ ಬಿದ್ದಾಗ ಎಲ್ಲೆಡೆ ನಂದಿಸಲು ಸಾಧ್ಯವಾಗುವುದಿಲ್ಲ.

ವಾಹನ ನೀಡಿ: ಶಿರಾ ತಾಲ್ಲೂಕು ವಿಸ್ತೀರ್ಣದಲ್ಲಿ ದೊಡ್ಡದಾಗಿದ್ದು ತಾಲ್ಲೂಕಿನ ಗಡಿ ಭಾಗದಲ್ಲಿ ಬೆಂಕಿ ಬಿದ್ದಾಗ ನಂದಿಸಲು ಅಗ್ನಿಶಾಮಕ‌ ವಾಹನ ಹೋದರೆ ಮತ್ತೊಂದು ಬದಿಯಲ್ಲಿ ದೊಡ್ಡ ಪ್ರಮಾಣದಲ್ಲಿ ಬೆಂಕಿ ಅನಾಹುತವಾದರೂ ವಾಹನ ಬರುವ ವೇಳೆಗೆ ಇಲ್ಲಿ ಸಂಪೂರ್ಣ ಸುಟ್ಟು ಹೋಗಿರುತ್ತದೆ. ಮತ್ತೊಂದು ವಾಹನವಿದ್ದರೆ ಹೆಚ್ಚು ಅನುಕೂಲವಾಗುತ್ತದೆ. ನಷ್ಟದ ಪ್ರಮಾಣವನ್ನು ಕಡಿಮೆ ಮಾಡಬಹುದು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಬೇಸಿಗೆ ಪ್ರಾರಂಭದಿಂದ ಬೆಂಕಿ ಪ್ರಕರಣಗಳು ಹೆಚ್ಚಾಗಿವೆ. ಸಾರ್ವಜನಿಕರು ಇದರ ತೀವ್ರತೆ ಅರಿತು ಪರಿಸರ ರಕ್ಷಣೆಗೆ ಸಹಕರಿಸಬೇಕಿದೆ. ಇದರ ಜೊತೆಗೆ ಬೆಂಕಿ ನಂದಿಸುವ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು ಎನ್ನುತ್ತಾರೆ ಸಾರ್ವಜನಿಕರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.