ADVERTISEMENT

ಸ್ಲಂ ಜನರ ಪ್ರಗತಿ: ಪ್ರತ್ಯೇಕ ಸಚಿವಾಲಯಕ್ಕೆ ಬೇಡಿಕೆ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2023, 14:27 IST
Last Updated 24 ಮಾರ್ಚ್ 2023, 14:27 IST
ತುಮಕೂರಿನಲ್ಲಿ ಶುಕ್ರವಾರ ಸ್ಲಂ ಜನರ ಬೇಡಿಕೆಯ ಪ್ರಣಾಳಿಕೆಯನ್ನು ಚಿಂತಕ ಕೆ.ದೊರೈರಾಜ್ ಬಿಡುಗಡೆ ಮಾಡಿದರು. ಸ್ಲಂ ಸಮಿತಿ ಮುಖಂಡರಾದ ಎ.ನರಸಿಂಹಮೂರ್ತಿ, ದೀಪಿಕಾ, ಶಂಕ್ರಯ್ಯ, ಅರುಣ್, ಶಾರದಮ್ಮ, ತಿರುಮಲಯ್ಯ, ಮಂಗಳಮ್ಮ, ರಂಗನಾಥ ಇತರರು ಇದ್ದರು
ತುಮಕೂರಿನಲ್ಲಿ ಶುಕ್ರವಾರ ಸ್ಲಂ ಜನರ ಬೇಡಿಕೆಯ ಪ್ರಣಾಳಿಕೆಯನ್ನು ಚಿಂತಕ ಕೆ.ದೊರೈರಾಜ್ ಬಿಡುಗಡೆ ಮಾಡಿದರು. ಸ್ಲಂ ಸಮಿತಿ ಮುಖಂಡರಾದ ಎ.ನರಸಿಂಹಮೂರ್ತಿ, ದೀಪಿಕಾ, ಶಂಕ್ರಯ್ಯ, ಅರುಣ್, ಶಾರದಮ್ಮ, ತಿರುಮಲಯ್ಯ, ಮಂಗಳಮ್ಮ, ರಂಗನಾಥ ಇತರರು ಇದ್ದರು   

ತುಮಕೂರು: ಕೊಳೆಗೇರಿಗಳು ಹಾಗೂ ಸ್ಲಂ ನಿವಾಸಿಗಳ ಸಮಗ್ರ ಅಭಿವೃದ್ಧಿಗೆ ಪ್ರತ್ಯೇಕ ಸಚಿವಾಲಯ, ಪ್ರತ್ಯೇಕ ಅಭಿವೃದ್ಧಿ ನಿಗಮ ಸ್ಥಾಪನೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಸ್ಲಂ ಜನಾಂದೋಲನ ಕರ್ನಾಟಕ ಹಾಗೂ ಜಿಲ್ಲಾ ಕೊಳೆಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿ ಒತ್ತಾಯಿಸಿದೆ.

ವಿಧಾನಸಭಾ ಚುನಾವಣೆಗೆ ಪೂರಕವಾಗಿ ‘ಸ್ಲಂ ಜನರ ಪ್ರಣಾಳಿಕೆ’ಯನ್ನು ಸಮಿತಿ ಪರವಾಗಿ ಚಿಂತಕ ಕೆ.ದೊರೈರಾಜ್ ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರ ಬಿಡುಗಡೆ ಮಾಡಿದರು.

‘ಸ್ಲಂ ನಿವಾಸಿಗಳಿಗೆ ನಗರ ಉದ್ಯೋಗ ಖಾತ್ರಿ ಜಾರಿ; ವಸತಿ ಹಕ್ಕು ಕಾಯ್ದೆ ಜಾರಿ; ರಾಜ್ಯದ 3.36 ಲಕ್ಷ ಸ್ಲಂ ಕುಟುಂಬಗಳಿಗೆ ಹಕ್ಕುಪತ್ರವನ್ನು ಕ್ರಯ ಮಾಡುವ ಮೂಲಕ ಭೂ ಮಾಲೀಕತ್ವ ನೀಡಬೇಕು; ಉಚಿತವಾಗಿ ಮನೆ ನಿರ್ಮಾಣ, ಸಬ್ಸಿಡಿ ಹೆಚ್ಚಳ, ಜನರೇ ನಿರ್ಮಿಸಿಕೊಳ್ಳುವ ಯೋಜನೆಗಳ ಜಾರಿ; ಖಾಸಗಿ ಮಾಲೀಕತ್ವದ ಕೊಳಚೆ ಪ್ರದೇಶಗಳಿಗೆ ಹಕ್ಕುಪತ್ರ; ನಗರ ಭೂ ಬ್ಯಾಂಕ್ ನೀತಿ ಜಾರಿ; ಪಡಿತರ ವ್ಯವಸ್ಥೆ ಬಲಗೊಳಿಸುವುದು; ಸರ್ಕಾರಿ ಶಾಲೆಗಳ ಸಬಲೀಕರಣ; ಜಿಲ್ಲಾ ಆಸ್ಪತ್ರೆಗಳ ಖಾಸಗೀಕರಣ ನಿಲ್ಲಬೇಕು; ನಗರ ಬಡತನದ ಪ್ರಮಾಣ ಇಳಿಕೆ ಮಾಡಬೇಕು’ ಎಂದು ಪ್ರಣಾಳಿಕೆಯಲ್ಲಿ ಆಗ್ರಹಿಸಲಾಗಿದೆ.

ADVERTISEMENT

ಕೊಳೆಗೇರಿ ಜನರಿಗೆ ಆಸೆ, ಆಮಿಷ ಒಡ್ಡಿ ರ‍್ಯಾಲಿಗಳಿಗೆ ರಾಜಕೀಯ ಪಕ್ಷಗಳು ಕರೆದೊಯ್ಯುತ್ತಿವೆ. ಆದರೆ ಸ್ಲಂ ಜನರು ಹಾಗೂ ಅಲ್ಲಿನ ಬಡತನದ ಬಗ್ಗೆ ಚರ್ಚೆಯಾಗುತ್ತಿಲ್ಲ. ಹಣ ಕೊಟ್ಟು, ಬಾಡೂಟ ಹಾಕಿಸಿ, ದೇವರ ಮೇಲೆ ಪ್ರಮಾಣ ಮಾಡಿಸಿಕೊಂಡು ಕಿಟ್‍ಗಳನ್ನು ಹಂಚಿಕೆ ಮಾಡಲಾಗುತ್ತಿದೆ. ರಾಜಕೀಯ ಪಕ್ಷಗಳು ತಮ್ಮ ನಾಯಕರಿಗೆ ಜನರ ಸಂಖ್ಯೆ ತೋರಿಸಲು ಸ್ಲಂ ಜನರನ್ನು ದಿನಗೂಲಿ ಲೆಕ್ಕದಲ್ಲಿ ಸೇರಿಸುತ್ತಿರುವುದು ಪ್ರಜಾಪ್ರಭುತ್ವಕ್ಕೆ ಮಾಡಿದ ಅಪಮಾನವಾಗಿದೆ ಎಂದು ಕೆ.ದೊರೈರಾಜ್ ಆಕ್ರೋಶ ವ್ಯಕ್ತಪಡಿಸಿದರು.

ಸ್ಲಂ ಜನಾಂದೋಲನ ಕರ್ನಾಟಕ ಸಂಘಟನೆ ಮುಖಂಡ ಎ.ನರಸಿಂಹಮೂರ್ತಿ, ‘ರಾಜ್ಯದ 18 ಜಿಲ್ಲೆಗಳ 1 ಸಾವಿರಕ್ಕೂ ಹೆಚ್ಚು ಕೊಳಚೆ ಪ್ರದೇಶಗಳಲ್ಲಿ ನಮ್ಮ ಬೇಡಿಕೆಗಳ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಈಗಾಗಲೇ ಕಾಂಗ್ರೆಸ್‌, ಜೆಡಿಎಸ್, ಎಎಪಿ ಪಕ್ಷಗಳ ಪ್ರಣಾಳಿಕೆ ಸಮಿತಿ ಜತೆ ಸಮಾಲೋಚನೆ ನಡೆಸಲಾಗಿದೆ’ ಎಂದು ಹೇಳಿದರು.

ಸ್ಲಂ ಸಮಿತಿ ಪದಾಧಿಕಾರಿಗಳಾದ ದೀಪಿಕಾ, ಶಂಕ್ರಯ್ಯ, ಅರುಣ್, ಶಾರದಮ್ಮ, ಅರವಿಂದ್, ಮನೋಹರ್ ಶಿರಾ, ಸಂಚಾಲಕರಾದ ತಿರುಮಲಯ್ಯ, ನಿವೇಶನ ಹೋರಾಟ ಸಮಿತಿಯ ಮಂಗಳಮ್ಮ, ರಂಗನಾಥ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.