ADVERTISEMENT

ಪಶ್ಚಿಮಘಟ್ಟದಿಂದ ತುಮಕೂರಿಗೆ ನೀರು ತರಲು ಪಟ್ಟಭದ್ರರ ಅಡ್ಡಿ: ಸಂಸದ ಬಸವರಾಜು

​ಪ್ರಜಾವಾಣಿ ವಾರ್ತೆ
Published 16 ಜೂನ್ 2022, 10:54 IST
Last Updated 16 ಜೂನ್ 2022, 10:54 IST
ಸಂಸದ ಬಸವರಾಜು
ಸಂಸದ ಬಸವರಾಜು   

ತುಮಕೂರು: 'ಪಶ್ಚಿಮಘಟ್ಟ ಹಾಗೂ ದಕ್ಷಿಣ ಕನ್ನಡ ಭಾಗದಿಂದ ತುಮಕೂರು ಜಿಲ್ಲೆಗೆ ನೀರು ತರಲು ಪಟ್ಟಭದ್ರ ಹಿತಾಸಕ್ತಿಗಳು ಅಡ್ಡಿ ಮಾಡುತ್ತಿದ್ದು, ಇದರ ವಿರುದ್ಧ ರೈತರು ದಂಗೆ ಹೇಳಬೇಕು' ಎಂದು ಸಂಸದ ಜಿ.ಎಸ್. ಬಸವರಾಜು ಇಲ್ಲಿ ಗುರುವಾರ ಕರೆ ನೀಡಿದರು.

ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕ ಹಮ್ಮಿಕೊಂಡಿದ್ದ ‘ಜಿಲ್ಲಾ ಜಲ ಸಂವಾದ’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ‘ಪಶ್ಚಿಮಾಭಿಮುಖವಾಗಿ ಹರಿದು ಸಮುದ್ರ ಸೇರುವ ನೀರನ್ನು ಈ ಭಾಗಕ್ಕೆ ತರಲು ಅಡ್ಡಿಪಡಿಸುತ್ತಿದ್ದಾರೆ. ವ್ಯರ್ಥವಾಗಿ ಸಮುದ್ರ ಸೇರುವ ನೀರನ್ನು ಈ ಭಾಗಕ್ಕೆ ತಂದು ಕುಡಿಯಲು ಬಳಸಿದರೆ ನಿಮಗೇನು ತೊಂದರೆ. ನಮಗೇಕೆ ಅಡ್ಡಿ ಪಡಿಸುತ್ತಿದ್ದೀರಿ’ ಎಂದು ಆಕ್ರೋಶ ಹೊರ ಹಾಕಿದರು.

ನೀರಾವರಿ ತಜ್ಞ ದಿ.ಪರಮಶಿವಯ್ಯ ರೂಪಿಸಿದಂತೆ ಎತ್ತಿನ ಹೊಳೆ ಯೋಜನೆ ಜಾರಿಯಾಗಿಲ್ಲ. ಈಗಿರುವ ಯೋಜನೆಯಿಂದ ಜಿಲ್ಲೆಗೆ ಅಗತ್ಯ ಪ್ರಮಾಣದಲ್ಲಿ ನೀರು ಸಿಗುವ ಅನುಮಾನವಿದೆ. ನೇತ್ರಾವತಿ, ಕುಮಾರಧಾರ ನದಿ ಸಂಧಿಸುವ ಭಾಗದಿಂದ ಈಕಡೆಗೆ ತಂದರೆ ಮಾತ್ರ ನಮಗೆ ನೀರು ಸಿಗುತ್ತದೆ. ಇದರಿಂದ ಈ ಭಾಗದ ಜಿಲ್ಲೆಗಳ 18 ಸಾವಿರದಿಂದ 20 ಸಾವಿರ ಕೆರೆಗಳನ್ನು ತುಂಬಿಸಬಹುದು. ಇಲ್ಲವಾದರೆ ಎತ್ತಿನ ಹೊಳೆ ಯೋಜನೆಯೂ ವ್ಯರ್ಥವಾಗಬಹುದು ಎಂದು ಆತಂಕ ವ್ಯಕ್ತಪಡಿಸಿದರು.

ADVERTISEMENT

ಗೌಡರ ವಿರುದ್ಧ ವಾಗ್ದಾಳಿ

ಹೇಮಾವತಿ ನೀರಿನ ವಿಚಾರದಲ್ಲಿ ಜಿಲ್ಲೆಗೆ ಅನ್ಯಾಯ ಮಾಡಿದ್ದಾರೆ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಹೆಸರು ಹೇಳದೆ ವಾಗ್ದಾಳಿ ನಡೆಸಿದರು. ದೇವರಾಜ ಅರಸು ಇಲ್ಲದಿದ್ದರೆ ಜಿಲ್ಲೆಗೆ ಒಂದು ತೊಟ್ಟು ನೀರನ್ನೂ ಕೊಡುತ್ತಿರಲಿಲ್ಲ. ಜಿಲ್ಲೆಗೆ ನೀರು ಬರಲು ಅರಸು ಕಾರಣ. ಅರಸು ಬಿಟ್ಟು ಬೇರೆ ಯಾರೇ ಇದ್ದರೂ ಕುಡಿಯಲೂ ನೀರು ಸಿಗುತ್ತಿರಲಿಲ್ಲ ಎಂದು ಹೇಳಿದರು.

‘ಜಿಲ್ಲೆಗೆ ಹೇಮಾವತಿ ನೀರು ತರುವುದು ಕಷ್ಟಕರವಾಯಿತು. ನೀರು ಕೇಳಲು ತುಮಕೂರು ಜಿಲ್ಲೆಯವರಿಗೆ ಯಾವ ಹಕ್ಕಿದೆ. ಹೇಮಾವತಿ ಹಾಸನ ಜಿಲ್ಲೆಗೆ ಸೇರಿದ್ದು. ನೀರು ಕೇಳಲು ಅವರ ಅಪ್ಪನದಾ? ಎಂದಿದ್ದರು. ಹಾಸನ ಜಿಲ್ಲೆಯಿಂದ ನಮಗೆ ನೀರು ಹರಿದು ಬರದಂತೆ ಮಾಡಲು ಸುರಂಗವನ್ನೇ ಸ್ಫೋಟಿಸಿ ಹಾಳು ಮಾಡಿದರು. ಎಚ್.ಡಿ.ದೇವೇಗೌಡ ಮುಖ್ಯಮಂತ್ರಿ ಆಗುತ್ತಿದ್ದಂತೆ ಜಿಲ್ಲೆಯಲ್ಲಿ ಹೇಮಾವತಿ ನಾಲೆ ಕಾಮಗಾರಿಯನ್ನೇ ನಿಲ್ಲಿಸಿದರು’ ಎಂದು ಆರೋಪಿಸಿದರು.

ಎಂಜಿನಿಯರ್ ಹೊಣೆ

ಉತ್ತರ ಕರ್ನಾಟಕ ಭಾಗದ ಎಂಜಿನಿಯರುಗಳು ಸಹ ಈ ಭಾಗದ ನೀರಾವರಿ ಯೋಜನೆಗಳಿಗೆ ಕಂಟಕವಾಗಿದ್ದಾರೆ. ಭದ್ರಾ ಮೇಲ್ದಂಡೆ ಸೇರಿದಂತೆ ಸಾಕಷ್ಟು ನೀರಾವರಿ ಯೋಜನೆಗಳ ಮೂಲಕ ದಕ್ಷಿಣ ಭಾಗದ ಜಿಲ್ಲೆಗಳಿಗೆ ನೀರು ಬರುವುದನ್ನು ತಡೆದಿದ್ದಾರೆ. ಈಗ ತಮಿಳುನಾಡಿನವರು ಮೇಕೆದಾಟು ಅಣೆಕಟ್ಟೆ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ನೀರಾವರಿ ವಿಚಾರದಲ್ಲಿ ರಾಜ್ಯಕ್ಕೆ ಇನ್ನೂ ಸ್ವಾತಂತ್ರ್ಯ ಸಿಕ್ಕಿಲ್ಲ. ನೀರಾವರಿ ಕುರಿತು ರಾಜ್ಯದ ಹಿತಾಸಕ್ತಿ ಕಾಪಾಡಿ ಸಂಸತ್‌ನಲ್ಲಿ ಯಾರೂ ಮಾತನಾಡುತ್ತಿಲ್ಲ ಎಂದು ಬಸವರಾಜು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.