ADVERTISEMENT

ಕಾಯ್ದೆ ತಿದ್ದುಪಡಿ ಮಾಡಿ: ತೆರಿಗೆ ವಿನಾಯಿತಿ ನೀಡಿ

ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತದ ಅಧ್ಯಕ್ಷರ ಒತ್ತಾಯ

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2019, 9:14 IST
Last Updated 22 ಆಗಸ್ಟ್ 2019, 9:14 IST

ತುಮಕೂರು: ಸಹಕಾರಿ ಸಂಘಗಳ ಸೌಹಾರ್ದ ಕಾಯ್ದೆ–1997ಕ್ಕೆ ತಿದ್ದುಪಡಿಗಳನ್ನು ತಂದು ತೆರಿಗೆಗಳಿಂದ ವಿನಾಯಿತಿ ನೀಡಬೇಕು ಎಂದು ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತದ ಅಧ್ಯಕ್ಷ ಬಿ.ಎಚ್.ಕೃಷ್ಣಾರೆಡ್ಡಿ ಒತ್ತಾಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಅವರು ಗುರುವಾರ ಮಾತನಾಡಿದರು.

ಸಹಕಾರಿ ಸಂಸ್ಥೆಗಳಿಗೆ ತೆರಿಗೆ ಇಲಾಖೆಯ 80ಪಿ ಅಡಿಯಲ್ಲಿ ತೆರಿಗೆ ವಿನಾಯಿತಿ ಇದ್ದರೂ ಇಲಾಖೆ ಅಧಿಕಾರಿಗಳು ನೋಟೀಸ್ ನೀಡುವ ಮೂಲಕ ಗೊಂದಲ ಮೂಡಿಸುತ್ತಿದ್ದಾರೆ. ರಾಜ್ಯ ಕಾಯ್ದೆಯಲ್ಲಿರುವ ಸಹ ಸದಸ್ಯರು ಹಾಗೂ ನಾಮಮಾತ್ರ ಸದಸ್ಯರನ್ನು ಪರಿಗಣಿಸುತ್ತಿಲ್ಲ. ಅವರ ಜತೆಗಿನ ವ್ಯವಹಾರಕ್ಕೆ ತೆರಿಗೆ ವಿಧಿಸಲಾಗುತ್ತಿದೆ ಎಂದು ಅವರು ಅಸಮಾಧಾನ ಹೊರಹಾಕಿದರು.

ADVERTISEMENT

ಸಹಕಾರಿ ಬ್ಯಾಂಕ್‌ಗಳ ನಿಯಮಗಳನ್ನು ಸಹಕಾರಿ ಸಂಸ್ಥೆಗಳಿಗೂ ಅನ್ವಯಿಸಲಾಗುತ್ತಿದೆ. ಸಹಕಾರಿ ಸಂಘವೆಂದು ಪರಿಗಣಿಸದೆ ತೆರಿಗೆ ವಿಧಿಸಲಾಗುತ್ತಿದೆ. ಸಹಕಾರಿಗಳು ಬ್ಯಾಂಕ್‌ನಲ್ಲಿ ಇಟ್ಟಿರುವ ಮೀಸಲು ನಿಧಿಗಳ ಮೇಲಿನ ಬಡ್ಡಿಗೆ ತೆರಿಗೆ ಪಾವತಿಸಲು ಸೂಚಿಸಲಾಗುತ್ತಿದೆ. ಈ ತೊಂದರೆಗಳನ್ನು ಪರಿಹರಿಸಲು ನಿಯಮಿತವೂ ಪ್ರಯತ್ನಿಸುತ್ತಲೇ ಇದೆ ಎಂದು ಹೇಳಿದರು.

ಸೆ.18ಕ್ಕೆ ವಾರ್ಷಿಕ ಸಭೆ: ಸಹಕಾರಿಯ 18ನೇ ವಾರ್ಷಿಕ ಸಾಮಾನ್ಯ ಸಭೆಯನ್ನು ಸೆಪ್ಟೆಂಬರ್ 18ರಂದು ಬೆಂಗಳೂರಿನ ವಿಜಯನಗರದಲ್ಲಿ ಆಯೋಜಿಸಲಾಗಿದೆ. ರಾಜ್ಯದಲ್ಲಿನ 4,700 ಸೌಹಾರ್ದ ಸಹಕಾರಿಯ ಪ್ರತಿನಿಧಿಗಳು ಭಾಗವಹಿಸಲು ಮುಕ್ತ ಅವಕಾಶವಿದೆ ಎಂದು ಅವರು ತಿಳಿಸಿದರು.

ನೆರೆ ಪರಿಹಾರಕ್ಕಾಗಿ ಸಹಕಾರಿಗಳಿಂದ ಈಗಾಗಲೇ ₹ 10 ಲಕ್ಷ ಸಂಗ್ರಿಸಿದ್ದೇವೆ. ಈ ತಿಂಗಳ ಅಂತ್ಯದ ವರೆಗೂ ಸಂಗ್ರಹವಾಗುವ ಮೊತ್ತವನ್ನು ಮುಖ್ಯಮಂತ್ರಿ ಪರಿಹಾರ ನಿಧಿಗೆ ವರ್ಗಾಹಿಸುತ್ತೇವೆ ಎಂದು ಅವರು ಮಾಹಿತಿ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ನಿಯಮಿತದ ನಿರ್ದೇಶಕ ಬಿ.ಗಂಗಾಧರಯ್ಯ, ಸೇಕ್ರೆಡ್ ಹಾರ್ಟ್‌ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಲೂಯಿಸ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.