ADVERTISEMENT

ಅಲ್ಪಸಂಖ್ಯಾತರಿಗೆ ವಿಶೇಷ ಅನುದಾನ: ಅಬ್ದುಲ್ ಅಜೀಮ್ ಭರವಸೆ

ಅಲ್ಪಸಂಖ್ಯಾತರ ಕುಂದು ಕೊರತೆ ಸಭೆಯಲ್ಲಿ

​ಪ್ರಜಾವಾಣಿ ವಾರ್ತೆ
Published 29 ಜನವರಿ 2021, 1:07 IST
Last Updated 29 ಜನವರಿ 2021, 1:07 IST
ಅಬ್ದುಲ್ ಅಜೀಮ್
ಅಬ್ದುಲ್ ಅಜೀಮ್   

ತುಮಕೂರು: ಅಲ್ಪಸಂಖ್ಯಾತರ ಸಮುದಾಯಗಳನ್ನು ಮುಖ್ಯವಾಹಿನಿಗೆ ತರುವ ಉದ್ದೇಶದಿಂದ ಈ ಸಮುದಾಯಗಳ ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡಲಾಗುವುದು ಎಂದು ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಅಬ್ದುಲ್ ಅಜೀಮ್ ತಿಳಿಸಿದರು.

ನಗರದ ಜಿಲ್ಲಾ ಪಂಚಾಯಿತಿಯಲ್ಲಿ ಗುರುವಾರ ನಡೆದ ಅಲ್ಪಸಂಖ್ಯಾತರ ಸಮುದಾಯಗಳ ಕುಂದು ಕೊರತೆ ಸಭೆ ಅಧ್ಯಕ್ಷತೆವಹಿಸಿ ಮಾತನಾಡಿದರು.

ಶಿಕ್ಷಣ ಸೌಲಭ್ಯಕ್ಕಾಗಿ ಅರಿವು ಯೋಜನೆಗೆ ಈ ಹಿಂದೆ ನೀಡುತ್ತಿದ್ದ ₹ 292 ಕೋಟಿ ಅನುದಾನವನ್ನು 2020-21ನೇ ಸಾಲಿಗೆ ₹71 ಕೋಟಿಗೆ ಕಡಿತಗೊಳಿಸಿರುವ ಬಗ್ಗೆ ಮುಖಂಡರೊಬ್ಬರು ಅಧ್ಯಕ್ಷರ ಗಮನಕ್ಕೆ ತಂದರು. ಆಗ, ಕಳೆದ ವರ್ಷ ಕೊರೊನಾ ಪರಿಸ್ಥಿತಿಯಿಂದ ಅನುದಾನ ಕಡಿತಗೊಳಿಸಲಾಗಿದೆ. ಮುಂದಿನ ವರ್ಷಗಳಲ್ಲಿ ವಿಶೇಷವಾಗಿ ಅನುದಾನ ಬಿಡುಗಡೆಗೊಳಿಸಲಾಗುವುದು ಎಂದು ತಿಳಿಸಿದರು.

ADVERTISEMENT

ಜೈನ ಸಮುದಾಯದ ಮುಖಂಡ ನಾಗರಾಜ್, ನಗರದ ಹೊರವಲಯದಲ್ಲಿರುವ ಬಸದಿ ಬೆಟ್ಟಕ್ಕೆ ಮೂಲ ಸೌಲಭ್ಯ ಕಲ್ಪಿಸಿಕೊಡುವಂತೆ ಅಧ್ಯಕ್ಷರಿಗೆ ಮನವಿ ಮಾಡಿದರು. ಶೀಘ್ರದಲ್ಲಿಯೇ ಈ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು ಎಂದರು.

ಸಭೆಯಲ್ಲಿ ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಅಧ್ಯಕ್ಷ ಮುಕ್ತರ್ ಹುಸೇನ್ ಪಠಾಣ್, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ನಿರ್ದೇಶಕ ಮೆಹಬೂಬ ಸಾಬ್, ಆಯೋಗದ ಪಿ.ಎಸ್.ನಿಸಾರ್ ಅಹ್ಮದ್, ವಕ್ಫ್ ಮಂಡಳಿ ಅಧ್ಯಕ್ಷ ಮುಸ್ತಾಕ್ ಅಹ್ಮದ್, ಕ್ರಿಶ್ಚಿಯನ್ ಸಮುದಾಯದ ಜೆಫಿನ್ ಜಾಯ್, ಜೈನ್ ಸಮುದಾಯದ ಶೀತಲ್ ಕುಮಾರ್ ಹಾಜರಿದ್ದರು.

ನಂತರ ಪ್ರಧಾನ ಮಂತ್ರಿಗಳ 15 ಅಂಶಗಳ ಕಾರ್ಯಕ್ರಮದ ಕುರಿತು ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗಿನ ಪ್ರಗತಿ ಪರಿಶೀಲನಾ ಸಭೆ ನಡೆಸಿದರು.

ಎಸ್ಸೆಸ್ಸೆಲ್ಸಿಯಲ್ಲಿ ಎಷ್ಟು ಅಲ್ಪಸಂಖ್ಯಾತ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಅವರಲ್ಲಿ ಎಷ್ಟು ವಿದ್ಯಾರ್ಥಿಗಳು ಮುಂದಿನ ಹಂತದ ವ್ಯಾಸಂಗಕ್ಕೆ ಸೇರಿದ್ದಾರೆ ಎಂಬ ಮಾಹಿತಿಯನ್ನು ಸಂಗ್ರಹಿಸಿ. ಶಾಲಾ ಕಾಲೇಜುಗಳಿಂದ ಹೊರಗುಳಿಯುವ ಮಕ್ಕಳನ್ನು ಗುರುತಿಸಿ ಮುಖ್ಯವಾಹಿನಿಗೆ ತರಬೇಕು ಎಂದು ಮಧುಗಿರಿ ಮತ್ತು ತುಮಕೂರು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರಿಗೆ ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.