ADVERTISEMENT

ತೋವಿನಕೆರೆ | ಡ್ರೋನ್ ಬಳಸಿ ಅಡಿಕೆಗೆ ಔಷಧಿ ಸಿಂಪಡಣೆ

​ಪ್ರಜಾವಾಣಿ ವಾರ್ತೆ
Published 22 ಜೂನ್ 2025, 14:34 IST
Last Updated 22 ಜೂನ್ 2025, 14:34 IST
ಕೋರ ಹೋಬಳಿ ಬ್ರಹ್ಮಸಂದ್ರದ ತೋಟಕ್ಕೆ ಡ್ರೋನ್ ಮೂಲಕ ಔಷಧಿ ಸಿಂಪಡಿಸಲಾಯಿತು
ಕೋರ ಹೋಬಳಿ ಬ್ರಹ್ಮಸಂದ್ರದ ತೋಟಕ್ಕೆ ಡ್ರೋನ್ ಮೂಲಕ ಔಷಧಿ ಸಿಂಪಡಿಸಲಾಯಿತು   

ತೋವಿನಕೆರೆ: ಹೋಬಳಿ ವ್ಯಾಪ್ತಿಯಲ್ಲಿ ಕೃಷಿಯಲ್ಲಿ ತಂತ್ರಜ್ಞಾನ ಬಳಕೆ ಹೆಚ್ಚಾಗುತ್ತಿದ್ದು, ಡ್ರೋನ್ ಮೂಲಕ ಅಡಿಕೆ ತೋಟಗಳಿಗೆ ಔಷಧಿ ಸಿಂಪಡಿಸುವ ಮೂಲಕ ಮತ್ತೊಂದು ಹೆಜ್ಜೆ ಇರಿಸಲಾಗಿದೆ.

ಮಲೆನಾಡು, ಕರಾವಳಿ ಭಾಗಗಳಲ್ಲಿ ಡ್ರೋನ್ ಮೂಲಕ ಔಷಧಿ ಸಿಂಪಡಣೆ ವ್ಯಾಪಕವಾಗಿ ನಡೆಯುತ್ತಿತು. ಜಿಲ್ಲೆಯಲ್ಲಿ ಕಳೆದ ವರ್ಷದಿಂದ ಹಲವು ರೈತರು ಈ ಪ್ರಯೋಗ ಮಾಡಿದ್ದಾರೆ. ತೋವಿನಕೆರೆ ರೈತ ಸಂಪರ್ಕ ಕೇಂದ್ರದವರು ಕೃಷಿಕರಿಗೆ ಡ್ರೋನ್ ಸಿಂಪಡಣೆ ಮಾಡುವ ಪ್ರಾತ್ಯಕ್ಷಿಕೆ ನಡೆಸಿದ್ದರೂ ಯಶಸ್ಸು ಸಿಕ್ಕಿರಲಿಲ್ಲ.

ಕೋರಾ ಹೋಬಳಿ ಬ್ರಹ್ಮಸಂದ್ರದ ಸಂತೋಷ ತಮ್ಮ 1.5 ಎಕರೆ ಅಡಿಕೆ ತೋಟಕ್ಕೆ ಡ್ರೋನ್‌ ಮೂಲಕ ಔಷಧಿ ಸಿಂಪಡಿಸಿದ್ದಾರೆ. ಕೊಳೆ ರೋಗ ತಡೆಯಲು, ಕಾಯಿ ಕಚ್ಚುವುದಕ್ಕೆ, ಕಾಯಿ ಬೀಳದೆ ಇರಲು, ಕೆಂಜಗ ಬರದಂತೆ ತಡಯಲು ಮತ್ತು ಬೇವಿನ ಎಣ್ಣೆ ತುಂಬಿಕೊಂಡು ಎಂಟು ಸಲ ಹಾರಾಟ ನಡೆಸಿ ಸಿಂಪಡಣೆ ಮಾಡಲಾಯಿತು. ಎರಡು ಗಂಟೆಯಲ್ಲಿ ಸಿಂಪಡಣೆ ಮುಗಿಸಿದರು.

ADVERTISEMENT

ಕೆಲವು ವರ್ಷಗಳಿಂದ ಈ ಭಾಗಗಳಲ್ಲಿ ಅಡಿಕೆ ತೋಟಕ್ಕೆ ರೋಗಗಳು ಹೆಚ್ಚಾಗುತ್ತಿದೆ. ಕೊಳೆ ರೋಗ, ಹರಳು ಕಟ್ಟುವುದು ಕಡಿಮೆಯಾಗುತ್ತಿದೆ. ಕಾಯಿ ಉದುರುವುದು ಹೆಚ್ಚುತ್ತಿದೆ. ಮರ ಹತ್ತಿ ಔಷಧಿ ಸಿಂಪಡಣೆ ಕಷ್ಟವಾಗುತ್ತಿತು. ಲಕ್ಷ ರೂಪಾಯಿ ಖರ್ಚು ಮಾಡಿದ್ದರೂ ಈ ಮಟ್ಟದಲ್ಲಿ ಸಿಂಪಡಣೆ ಸಾಧ್ಯವಾಗುತ್ತಿರಲಿಲ್ಲ. ಕೇವಲ ಹತ್ತು ಸಾವಿರ ವೆಚ್ಚದಲ್ಲಿ ಡ್ರೋನ್ ಮೂಲಕ ಸಿಂಪಡಣೆ ಮುಗಿಸಿದ್ದೇವೆ ಎಂದು ಬ್ರಹ್ಮಸಂದ್ರದ ರೈತ ಸಂತೋಷ್‌ ತಿಳಿಸಿದರು. 

ಡ್ರೋನ್ ಕಂಪನಿ ಭವ್ಯ ಪ್ರತಿಕ್ರಿಯಿಸಿ, ಜಿಲ್ಲೆಯಲ್ಲಿ ಕಳೆದ ವರ್ಷದಿಂದ ತುರುವೇಕೆರೆ, ಗುಬ್ಬಿ ತಾಲ್ಲೂಕು ನಿಟ್ಟೂರು ಭಾಗದಲ್ಲಿ ಸಿಂಪಡಣೆ ಮಾಡುತ್ತಿದ್ದೇವೆ. ತುಮಕೂರು, ಕೊರಟಗೆರೆ, ಮಧುಗಿರಿ ಕಡೆ ತೆಂಗು, ಅಡಿಕೆಗೆ ಇದೇ ಪ್ರಥಮ. ಡ್ರೋನ್ ಮೂಲಕ ತರಕಾರಿ, ಭತ್ತ, ರಾಗಿ ಸಿಂಪಡಿಸಿದ್ದೇವೆ. ಬೇಡಿಕೆ ಹೆಚ್ಚುತ್ತಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.