ADVERTISEMENT

ಕುಣಿಗಲ್ ಪಟ್ಟಣದ ಪೊಲೀಸ್ ಠಾಣೆ ಸಿಬ್ಬಂದಿ ಕೊರೆತೆ: ಹೆಚ್ಚಿದ ಒತ್ತಡ

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2021, 4:44 IST
Last Updated 28 ಮಾರ್ಚ್ 2021, 4:44 IST
ಕುಣಿಗಲ್ ಪೊಲೀಸ್ ಠಾಣೆ
ಕುಣಿಗಲ್ ಪೊಲೀಸ್ ಠಾಣೆ   

ಕುಣಿಗಲ್: ಪಟ್ಟಣದ ಪೊಲೀಸ್ ಠಾಣೆ, ಪೊಲೀಸ್ ಇನ್‌ಸ್ಪೆಕ್ಟರ್‌ ಠಾಣೆಯಾಗಿ ಮೇಲ್ದರ್ಜೆಗೇರಿದ್ದರೂ ವ್ಯವಸ್ಥೆ ಮಾತ್ರ ಮೇಲ್ದರ್ಜೆಗೇರದ ಕಾರಣ ಮೇಲ್ದರ್ಜೇರಿಸಿದ ಉದ್ದೇಶ ಈಡೇರಿಲ್ಲ.

ಪಟ್ಟಣವೂ ಸೇರಿದಂತೆ 270 ಹಳ್ಳಿಗಳು ಠಾಣಾ ವ್ಯಾಪ್ತಿಗೆ ಸೇರಿವೆ. ಸಿಪಿಐ ಜತೆಯಲ್ಲಿ ನಾಲ್ಕು ಪಿಎಸ್ಐ ಮತ್ತು ಐದು ಎಎಸ್ಐ ಹಾಗೂ ಸಿಬ್ಬಂದಿ ಇರಬೇಕಾಗಿದ್ದು, ಸದ್ಯ ಸಿಪಿಐ ರಾಜು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ನಾಲ್ಕು ಪಿಎಸ್ಐಗಳ ಪೈಕಿ ಒಬ್ಬರು ರಜೆಯಲ್ಲಿದ್ದಾರೆ. ಇನ್ನೂ ಅಪರಾಧ ವಿಭಾಗದ ಪಿಎಸ್ಐ ಶೆಟ್ಟಯಲಪ್ಪ ಮುಂದಿನ ತಿಂಗಳು ನಿವೃತ್ತಿಯಾಗಲಿದ್ದಾರೆ. ಉಳಿದೆರಡು ಪಿಎಸ್ಐ ಹುದ್ದೆ ಖಾಲಿ ಇದೆ.

ಕುಣಿಗಲ್ ಠಾಣೆ ಜಿಲ್ಲೆಯಲ್ಲಿಯೇ ‘ಹೆವಿ ಸ್ಟೇಷನ್’ ಎಂದು ಹೆಸರು ಮಾಡಿದೆ. ಸೂಕ್ತ ಸಿಬ್ಬಂದಿ ಇಲ್ಲದೆ ಈ ವ್ಯಾಪ್ತಿಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವುದು ಕಷ್ಟಕರ. ತಾಲ್ಲೂಕಿನಲ್ಲಿ ಹಗಲಿನಲ್ಲೇ ಮನೆ ಕಳ್ಳತನ, ಗ್ಯಾಸ್ ಸಿಲೆಂಡರ್‌ ಕಳವು ಸೇರಿದಂತೆ ಅಪರಾಧ ಮತ್ತು ಅಪಘಾತ ಪ್ರಕರಣಗಳು ನಿರಂತರವಾಗಿ ನಡೆಯುತ್ತಿದೆ. ಇನ್ನೂ ಕಂದಾಯ ಇಲಾಖೆಯ ದಾಖಲೆಗಳ ತಪ್ಪಿನಿಂದಾಗಿ ಉಂಟಾಗುತ್ತಿರುವ ವ್ಯಾಜ್ಯಗಳನ್ನು ಬಗೆಹರಿಸಲು ಸೂಕ್ತ ಪಿಎಸ್ಐ ಮತ್ತು ಸಿಬ್ಬಂದಿ ಕೊರತೆ ಎದ್ದು ಕಾಣುತ್ತಿದೆ. ಕೆಲ ಸಿಬ್ಬಂದಿಗೆ ಹೊರೆಯಾಗುತ್ತಿದೆ ಎಂದು ಪೊಲೀಸರು ಅಸಮಾಧಾನ ವ್ಯಕ್ತಪಡಿಸುತ್ತಾರೆ.

ADVERTISEMENT

ಪಟ್ಟಣದಲ್ಲಿ ಸಂಚಾರ ವ್ಯವಸ್ಥೆ ನಿಯಂತ್ರಣಕ್ಕೂ ಸಿಬ್ಬಂದಿ ಇಲ್ಲದೆ ಪರದಾಡುವಂತಾಗಿದೆ. ಗ್ರಾಮದೇವತಾ ವೃತ್ತ, ಹುಚ್ಚಮಾಸ್ತಿಗೌಡ ವೃತ್ತ, ತುಮಕೂರು ರಸ್ತೆ, ಸಾರಿಗೆ ಸಂಸ್ಥೆ ಬಸ್ ನಿಲ್ದಾಣದ ಬಳಿಯೂ ಬೆಳಿಗ್ಗೆ ಮತ್ತು ಸಂಜೆ ಸುಗಮ ಸಂಚಾರ ವ್ಯವಸ್ಥೆಗೆ ಪೊಲೀಸರು ಶ್ರಮಪಡಬೇಕಾಗಿದೆ.

ಠಾಣೆ ಮೇಲದರ್ಜೇಗೇರಿಸಿದಂತೆ ಅಗತ್ಯ ಸಿಬ್ಬಂದಿ ನಿಯೋಜಿಸಿ ಕಾನೂನು, ಸುವ್ಯವಸ್ಥೆ ಕಾಪಾಡಬೇಕು ಎನ್ನುತ್ತಾರೆ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಎಸ್.ಆರ್.ಚಿಕ್ಕಣ್ಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.