ADVERTISEMENT

ವಸತಿ ಶಾಲೆ ಬೇರೆಡೆ ಪ್ರಾರಂಭಿಸಿ

ಕುಂಚಿಟಿಗ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷ ಶಾಂತವೀರ ಸ್ವಾಮೀಜಿ ಆಗ್ರಹ

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2020, 16:18 IST
Last Updated 7 ಆಗಸ್ಟ್ 2020, 16:18 IST
ಶಿರಾ ತಾಲ್ಲೂಕಿನ ಮರಡಿ ಗುಡ್ಡದ ಮರಡಿ ರಂಗನಾಥ ಸ್ವಾಮಿ ದೇವಸ್ಥಾನದ ತಪ್ಪಲಿನಲ್ಲಿ ದೇವಸ್ಥಾನ ಸಮಿತಿಯಿಂದ ಹಮ್ಮಿಕೊಂಡಿದ್ದ ಪರಿಸರ ಉಳಿಸಿ ಆಂದೋಲನದಲ್ಲಿ ಡಾ.ಶಾಂತವೀರ ಸ್ವಾಮೀಜಿ ಭಾಗವಹಿಸಿದ್ದರು
ಶಿರಾ ತಾಲ್ಲೂಕಿನ ಮರಡಿ ಗುಡ್ಡದ ಮರಡಿ ರಂಗನಾಥ ಸ್ವಾಮಿ ದೇವಸ್ಥಾನದ ತಪ್ಪಲಿನಲ್ಲಿ ದೇವಸ್ಥಾನ ಸಮಿತಿಯಿಂದ ಹಮ್ಮಿಕೊಂಡಿದ್ದ ಪರಿಸರ ಉಳಿಸಿ ಆಂದೋಲನದಲ್ಲಿ ಡಾ.ಶಾಂತವೀರ ಸ್ವಾಮೀಜಿ ಭಾಗವಹಿಸಿದ್ದರು   

ಶಿರಾ: ತಾಲ್ಲೂಕಿನ ಮರಡಿ ಗುಡ್ಡದ ಮರಡಿ ರಂಗನಾಥ ಸ್ವಾಮಿ ದೇವಸ್ಥಾನದ ತಪ್ಪಲಿನಲ್ಲಿ ವಸತಿ ಶಾಲೆ ಪ್ರಾರಂಭಿಸುವ ಬದಲು ಬೇರೆ ಕಡೆ ಆರಂಭಿಸಿ ಎಂದು ಹೊಸದುರ್ಗ ಕುಂಚಿಟಿಗ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷ ಶಾಂತವೀರ ಸ್ವಾಮೀಜಿ ಆಗ್ರಹಿಸಿದರು.

ತಾಲ್ಲೂಕಿನ ಮರಡಿ ಗುಡ್ಡದ ಮರಡಿ ರಂಗನಾಥ ಸ್ವಾಮಿ ದೇವಸ್ಥಾನ ಸಮಿತಿಯಿಂದ ಹಮ್ಮಿಕೊಂಡಿದ್ದ ಪರಿಸರ ಉಳಿಸಿ ಆಂದೋಲನದ ಸಾನ್ನಿಧ್ಯ ವಹಿಸಿ ಮಾತನಾಡಿದರು.

‘ಮರಡಿ ರಂಗನಾಥ ಸ್ವಾಮಿ ದೇವಸ್ಥಾನಕ್ಕೆ ಪೌರಾಣಿಕ ಹಿನ್ನೆಲೆ ಇದೆ. ಇಲ್ಲಿಗೆ ಜಾತ್ಯತೀತವಾಗಿ ಭಕ್ತರು ಬರುತ್ತಿದ್ದು ದೇವಸ್ಥಾನದ ಪಾವಿತ್ರ್ಯತೆಯನ್ನು ಕಾಪಾಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಆದರೆ, ದೇವಸ್ಥಾನದ ತಪ್ಪಲಿನಲ್ಲಿ 10 ಎಕರೆ ಪ್ರದೇಶದಲ್ಲಿ ಅಂಬೇಡ್ಕರ್ ವಸತಿ ಶಾಲೆ ಪ್ರಾರಂಭಿಸಲು ಭೂಮಿಪೂಜೆ ನಡೆಸಲಾಗಿದೆ. ಇಲ್ಲಿ ವಸತಿ ಶಾಲೆ ನಿರ್ಮಾಣ ಮಾಡಿದರೆ ಭಕ್ತರಿಗೆ ತೊಂದರೆ ಆಗಲಿದೆ. ಜಾತ್ರೆ ಸಮಯದಲ್ಲಿ ವಾಹನ ನಿಲುಗಡೆ, ಊಟದ ವ್ಯವಸ್ಥೆಗೆ ತೊಂದರೆ ಆಗಲಿದೆ. ಆದ್ದರಿಂದ ದೇವಸ್ಥಾನದ ತಪ್ಪಲಿನಲ್ಲಿ ಈ ಯೋಜನೆಯನ್ನು ರೂಪಿಸಬಾರದು’ ಎಂದು ಒತ್ತಾಯಿಸಿದರು.

ADVERTISEMENT

ಅಂಬೇಡ್ಕರ್ ವಸತಿ ಶಾಲೆ ಪ್ರಾರಂಭಿಸಲು ನಾವು ವಿರೋಧಿಸುತ್ತಿಲ್ಲ. ದೇವಸ್ಥಾನದ ತಪ್ಪಲನ್ನು ಬಿಟ್ಟು ಬೇರೆ ಕಡೆ ಪ್ರಾರಂಭಿಸಿ. ಅದಕ್ಕೆ ಅಗತ್ಯವಾದ ಎಲ್ಲ ರೀತಿಯ ಸಹಕಾರ ನೀಡಲಾಗುವುದು. ಮರಡಿಗುಡ್ಡ ಪ್ರಕೃತಿ ನೀಡಿರುವ ಕೊಡುಗೆ. ಇಲ್ಲಿನ ಪರಿಸರ ಆಹ್ಲಾದಕರವಾಗಿದೆ. ಇಲ್ಲಿ ಇನ್ನಷ್ಟು ಸಸಿಗಳನ್ನು ಬೆಳೆಸಿದರೆ ಇನ್ನೂ ಸುಂದರವಾಗಲಿದೆ. ಅದನ್ನು ಬಿಟ್ಟು ಗುಡ್ಡ ಕಡಿದು ವಸತಿ ಶಾಲೆ ನಿರ್ಮಾಣ ಮಾಡಿದರೆ ಅನಾಹುತಗಳು ತಪ್ಪಿದ್ದಲ್ಲ ಎಂದು ಹೇಳಿದರು.

ದೇವಸ್ಥಾನ ಸಮಿತಿಯ ಧರ್ಮದರ್ಶಿ ಕಾಂತರಾಜು, ಸಾಣೇಹಳ್ಳಿ ನಾರಾಯಣ್, ಕಠಾವೀರನಹಳ್ಳಿ ರಾಮಕೃಷ್ಣ, ಬಿ.ಆರ್.ರಾಜು, ಸಣ್ಣರಂಗಪ್ಪ, ಯೋಗೀಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.