ADVERTISEMENT

ಮಳೆ ಸುರಿದರೂ ದೊರೆಯದ ಕೃಷಿ ಪರಿಕರ

ಬಿದ್ದ ಮಳೆಗೆ ಕೃಷಿ ಚಟುವಟಿಕೆಗಳಿಗೆ ಮುಂದಾದ ರೈತರು, ಕೃಷಿ ಉಪಕರಣಗಳು ಬಾಡಿಗೆಗೆ ಸಿಗದೆ ಕೃಷಿ ಕಾರ್ಯಕ್ಕೆ ಅಡ್ಡಿ

ವಿಷ್ಣುವರ್ಧನ ನಾಯ್ಕ
Published 24 ಏಪ್ರಿಲ್ 2019, 19:32 IST
Last Updated 24 ಏಪ್ರಿಲ್ 2019, 19:32 IST
ಬೆಳ್ಳಾವಿಯ ಸೇವಾ ಕೇಂದ್ರದ ಮುಂದೆ ದುಸ್ಥಿತಿಯಲ್ಲಿರುವ ಕೃಷಿ ಯಂತ್ರೋಪಕರಣಗಳು
ಬೆಳ್ಳಾವಿಯ ಸೇವಾ ಕೇಂದ್ರದ ಮುಂದೆ ದುಸ್ಥಿತಿಯಲ್ಲಿರುವ ಕೃಷಿ ಯಂತ್ರೋಪಕರಣಗಳು   

ತುಮಕೂರು: ಮಳೆ ಬೆಳೆ ಇಲ್ಲದೆ ಬಸವಳಿದಿದ್ದ ರೈತರು, ಕಳೆದ ಮೂರು ದಿನಗಳಿಂದ ಬಿದ್ದ ಮಳೆಗೆ ರೈತರು ಕೃಷಿ ಕಾರ್ಯ ಮಾಡಲು ಮುಂದಾಗಿದ್ದಾರೆ. ಕೃಷಿ ಯಂತ್ರೋಪಕರಣಗಳ ಬಾಡಿಗೆಗೆ ಪಡೆಯಲು ‘ಕೃಷಿ ಉಪಕರಣಗಳ ಬಾಡಿಗೆ ಸೇವಾ ಕೇಂದ್ರ’ದ ಮೊರೆ ಹೋಗುತ್ತಿದ್ದಾರೆ. ಆದರೆ ಯಂತ್ರೋಪಕರಣ ಸಿಗದ ಹಿನ್ನೆಲೆ ಕೃಷಿ ಕಾರ್ಯಗಳಿಗೆ ಅಡ್ಡಿ ಉಂಟಾಗಿದೆ.

ಇದು ತುಮಕೂರು ತಾಲ್ಲೂಕು ಬೆಳ್ಳಾವಿ ಹೋಬಳಿ ವ್ಯಾಪ್ತಿಯ ರೈತರಿಗೆ ಎದುರಾಗಿರುವ ದುಸ್ಥಿತಿ. ಕೃಷಿ ಯಂತ್ರೋಪಕರಣ ಬಾಡಿಗೆ ಪಡೆಯಲೆಂದು ಬಾಡಿಗೆ ಸೇವಾ ಕೇಂದ್ರಕ್ಕೆ ಹೋದರೆ, ಅಧಿಕಾರಿಗಳು ಇರುವುದಿಲ್ಲ. ಇದ್ದರೂ, ಯಂತ್ರೋಪಕರಣಗಳು ದುರಸ್ತಿಯಲ್ಲಿವೆ, ನೀಡಲು ಆಗುವುದಿಲ್ಲ ಎಂದು ಉತ್ತರಿಸುವರು ಎಂಬುದು ಇಲ್ಲಿನ ರೈತರ ಅಳಲು.

‘ಕಳೆದೆರಡು ದಿನಗಳಿಂದ ಸೇವಾ ಕೇಂದ್ರಕ್ಕೆ ಬಂದು ಹೋಗುತ್ತಿದ್ದೇನೆ. ಆದರೆ ಕೇಂದ್ರದ ಅಧಿಕಾರಿಗಳು ಇರುವುದಿಲ್ಲ. ಕರೆ ಮಾಡಿದರೆ, ನಾನು ಪ್ರವಾಸದಲ್ಲಿ ಇದ್ದೇನೆ. ಇನ್ನೆರಡು ದಿನಗಳಲ್ಲಿ ಬರುವುದಾಗಿ ಹೇಳಿ, ನಮ್ಮ ವ್ಯವಸ್ಥಾಪಕರಿಗೆ ಕರೆ ಮಾಡುವಂತೆ ಹೇಳುವರು. ಅವರಿಗೆ ಮಾಡಿದರೆ ನಾನು ಏನು ಮಾಡಲು ಆಗುವುದಿಲ್ಲ ಎನ್ನುತ್ತಾರೆ’ ಎಂದು ರೈತರೊಬ್ಬರು ಆರೋಪಿಸಿದರು.

ADVERTISEMENT

ಮಳೆ ಬಂದಾಗಲೇ ಉಳುಮೆ ಮಾಡಬೇಕು. ಈಗ ಜಮೀನಿನಲ್ಲಿ ತೇವಾಂಶ ಇದ್ದು, ಉಳುಮೆಗೆ ಸೂಕ್ತವಾಗಿದೆ. ಇಂತಹ ಸಮಯದಲ್ಲೇ ಯಂತ್ರೋಪಕರಣಗಳು ಸಿಗದಿದ್ದರೆ ಏನು ಮಾಡಬೇಕು? ಕೇಂದ್ರ ಪ್ರಾರಂಭವಾಗಿ ಮೂರು ವರ್ಷವಾಯ್ತು. ಇಂದಿಗೂ ಯಾವೊಂದು ಯಂತ್ರೋಪಕರಣವೂ ರೈತರಿಗೆ ಸರಿಯಾಗಿ ಸಿಗುತ್ತಿಲ್ಲ. ಆಯಾ ಸಮಯಕ್ಕೆ ಅಧಿಕಾರಿಗಳು ಒಂದೊಂದು ಕಾರಣಗಳನ್ನು ಹೇಳಿ ತಪ್ಪಿಸಿಕೊಳ್ಳುತ್ತಾರೆ ಎಂದು ರೈತರು ಸಮಸ್ಯೆ ಹೇಳುವರು.

ಈ ಸಮಸ್ಯೆಗಳನ್ನು ಹೇಳಿಕೊಳ್ಳಲು ಕೃಷಿ ಅಧಿಕಾರಿಗೆ ಹಾಗೂ ಕೇಂದ್ರ ವ್ಯವಸ್ಥಾಪಕರಿಗೆ ಕೆರೆ ಮಾಡಿದರೆ ಕ್ರಮ ಜರುಗಿಸಲಾಗುವುದು ಎಂದು ಹೇಳುವರು. ಹೀಗೆ ಎರಡು ತಿಂಗಳಿನಿಂದ ಹೇಳಿಕೊಂಡು ಬರುತ್ತಿದ್ದಾರೆ. ಇತ್ತೀಚೆಗೆ ಮತ್ತೆ ಸಂಪರ್ಕಿಸಿದರೆ, ‘ನಾವೇನು ಮಾಡಕ್ಕೆ ಆಗುತ್ತೆ. ಕೇಂದ್ರದ ಸಿಬ್ಬಂದಿ ಪ್ರವಾಸಕ್ಕೆ ಹೋಗಿದ್ದಾರೆ. ಅವರು ಬರಲಿ ನೋಡೋಣ’ ಎಂದು ಬೇಜವಾಬ್ದಾರಿಯ ಮಾತುಗಳನ್ನಾಡುವರು ಎಂದು ಹೇಳಿದರು.

ಈ ಬಗ್ಗೆ ವಾಸ್ತವ ಸ್ಥಿತಿ ತಿಳಿಯಲು ಮಂಗಳವಾರ ಬೆಳಿಗ್ಗೆ ಕೇಂದ್ರಕ್ಕೆ ಭೇಟಿ ನೀಡಿದಾಗ, ಅಲ್ಲಿ ಯಾವ ಸಿಬ್ಬಂದಿಯೂ ಇರಲಿಲ್ಲ. ರೈತರಿಗೆ ನೀಡಬೇಕಾದ ಯಂತ್ರಗಳ ಬಾಡಿಗೆ ಮೊತ್ತ ಬಗ್ಗೆ ಪಟ್ಟಿಯಲ್ಲಿ ನಮೂದಿಸಿಲ್ಲ. ಕೇಂದ್ರವನ್ನು ತೆರೆದೇ ಬಹಳ ದಿನಗಳಾಗಿವೆ ಎಂಬುದು ಅಲ್ಲಿನ ಪರಿಸ್ಥಿತಿ ನೋಡಿದರೆ ಗೊತ್ತಾಗುತ್ತಿತ್ತು.

ಅರ್ಧ ಗಂಟೆ ಸಮಯದಲ್ಲಿ 10ಕ್ಕೂ ಹೆಚ್ಚು ಬೆಳ್ಳಾವಿ ಹೋಬಳಿ ವ್ಯಾಪ್ತಿಯ ರೈತರು ಕೇಂದ್ರಕ್ಕೆ ಭೇಟಿ ನೀಡಿ ಯಾರು ಇಲ್ಲದಿರುವುದನ್ನು ನೋಡಿ ನಿರಾಶೆಯಿಂದ ವಾಪಾಸ್ಸಾದರು.

ಕೇಂದ್ರದ ನಿರ್ವಹಣೆ ಹಾಗೂ ಸಮಸ್ಯೆ ಬಗ್ಗೆ ಮಾಹಿತಿ ಕೇಳಿದರೆ, ಸಿಬ್ಬಂದಿ ಕೇಂದ್ರ ವ್ಯವಸ್ಥಾಪಕರ ಮೇಲೆ ಹೇಳುತ್ತಾರೆ. ವ್ಯವಸ್ಥಾಪಕರು ಕೃಷಿ ಇಲಾಖೆ ಹಾಗೂ ಸಿಬ್ಬಂದಿ ಮೇಲೆ ದೂರುತ್ತಾರೆ. ಅವರಿಬ್ಬರನ್ನೂ ಒಟ್ಟಿಗೆ ಮಾತನಾಡಿಸಿದರೆ ‘ಇಲಾಖೆ ಅನುದಾನ ನೀಡಿಲ್ಲ, ರೈತರು ಯಂತ್ರಗಳನ್ನು ಸರಿಯಾಗಿ ಬಳಕೆ ಮಾಡುವುದಿಲ್ಲ’ ಎಂದು ಆರೋಪಿಸುವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.